ಹುಬ್ಬಳ್ಳಿ: ‘ವರೂರಿನ ದಿಗಂಬರ ಜೈನ ನವಗ್ರಹ ತೀರ್ಥಕ್ಷೇತ್ರದಲ್ಲಿ ಜನವರಿ 15 ರಿಂದ 26ರವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ’ ಎಂದು ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜ ಹೇಳಿದರು.
‘ಜನವರಿ 15ರ ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲ ಥಾವರಚಂದ ಗೆಹಲೋತ್ ಪೂಜಾವಿಧಿ–ವಿಧಾನ ನೆರವೇರಿಸಿದರೆ, ಜನವರಿ 16ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಧ್ವಜಾರೋಹಣ ನೆರವೇರಿಸುವರು. 12 ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜಸ್ಥಾನ, ಮೇಘಾಲಯ, ಪಂಜಾಬ, ಕೇರಳದ ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯದ 20ಕ್ಕೂ ಹೆಚ್ಚು ಸಚಿವರು ಪಾಳ್ಗೊಳ್ಳುವರು. ವಿವಿಧ ರಾಜ್ಯಗಳ 450ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯ, ದೇಶದ ವಿವಿಧೆಡೆಯಿಂದ ಅಲ್ಲದೇ ಅಮೆರಿಕಾ, ಜರ್ಮನಿ, ಫ್ರಾನ್ಸ್ ದೇಶಗಳಿಂದಲೂ ಪ್ರತಿನಿಧಿಗಳು ಬರಲಿದ್ದು, ವಿವಿಧೆಡೆ 350ಕ್ಕಿಂತಲೂ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಪ್ರತಿದಿನ ಒಂದು ಲಕ್ಷ ಮಂದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಜೈನ ಸಾಹಿತ್ಯ, ಸಂಗೀತ, ವೃಥ ಬಂಧನ, ಮುಂಜಿ ಬಂಧನ ಸೇರಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.
‘ಜನವರಿ 22 ರಿಂದ 24ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಲೇಸರ್ ಷೋ ಮೂಲಕ ಮಹಾಮಸ್ತಕಾಭಿಷೇಕದ ದೃಶ್ಯ ಪ್ರದರ್ಶಿಸಲಾಗುವುದು. 405 ಅಡಿ ಎತ್ತರದ ಸುಮೇರು ಪರ್ವತ ಉದ್ಘಾಟನೆ, 3ಡಿ ಸಿನಿಮಾ ಮೂಲಕ ಅಧ್ವತ ಪಾರ್ಶ್ವನಾಥರ ಪಾತ್ರದ ದರ್ಶನ, ವಿಶ್ವಶಾಂತಿಗಾಗಿ 9999 ಹವನಕುಂಡ ಸ್ಥಾಪನೆ, ಹೆಲಿಕಾಪ್ಟರ್ ಮೂಲಕ ನವಗ್ರಹ ತೀರ್ಥಂಕರ ಮೂರ್ತಿಗಳ ಮೇಲೆ ಪುಷ್ಪವೃಷ್ಟಿ, ಅಂತರರಾಷ್ಟ್ರೀಯ ಕವಿ ಸಮ್ಮೇಳನ, ಸರ್ವಧರ್ಮ ಸಮ್ಮೇಳನ ನಡೆಯಲಿದೆ’ ಎಂದು ಗುಣಧರನಂದಿ ಮಹಾರಾಜರು ಹೇಳಿದರು.
ಪೂರ್ವಭಾವಿ ಸಭೆ: ಇದಕ್ಕೂ ಮೊದಲು ಪೂರ್ವಭಾವಿ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮಾತನಾಡಿ, ‘ವರೂರು ತೀರ್ಥಕ್ಷೇತ್ರದಲ್ಲಿ ನಡೆಯುವ ಎರಡನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಬೇಕು. ಸಮಾಜದ ಎಲ್ಲ ವರ್ಗದವರು ಪ್ರೀತಿ–ವಿಶ್ವಾಸದಿಂದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.