ADVERTISEMENT

ಹುಬ್ಬಳ್ಳಿ: ನೋಡಲ್‌ ಕೇಂದ್ರವಾಗಿ ಕಾಡಸಿದ್ದೇಶ್ವರ ಕಾಲೇಜು ಆಯ್ಕೆ

ವರ್ಚುವಲ್‌ ಲ್ಯಾಬ್‌ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 12:50 IST
Last Updated 30 ಜುಲೈ 2021, 12:50 IST

ಹುಬ್ಬಳ್ಳಿ: ವಿಜ್ಞಾನ ವಿಷಯಗಳಿಗೆ ವರ್ಚುವಲ್‌ ಮೂಲಕ ವೈಜ್ಞಾನಿಕ ಮಾದರಿಯಲ್ಲಿ ತರಬೇತಿ ನೀಡಲು ಕೆಎಲ್‌ಇ ಸಂಸ್ಥೆಯ ಕಾಡಸಿದ್ದೇಶ್ವರ ಕಲಾ ಮತ್ತು ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಕಾಲೇಜು ಸುರತ್ಕಲ್‌ನ ಎನ್‌ಐಟಿಕೆಯಿಂದ ಮಾನ್ಯತೆ ಪಡೆದು ನೋಡಲ್‌ ಕೇಂದ್ರವಾಗಿ ಆಯ್ಕೆಯಾಗಿದೆ.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಎಸ್‌. ಶೆಟ್ಟರ್‌ ಜು. 31ರಂದು ಬೆಳಿಗ್ಗೆ 11 ಗಂಟೆಗೆ ವರ್ಚುವಲ್‌ ಮೂಲಕ ಈ ಕೇಂದ್ರದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ಡಾ. ಉಮಾ ವಿ. ನೆರ್ಲೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎನ್‌ಐಟಿಕೆಯ ಸಿಸ್ಟಿಮ್‌ ಡಿಸೈನ್‌ ವಿಭಾಗದ ಮುಖ್ಯಸ್ ಗಂಗಾಧರನ್‌ ಕೆ.ವಿ. ಲ್ಯಾಬ್‌ನ ಪ್ರಯೋಜನಗಳು ಕುರಿತು ಮಾತನಾಡಲಿದ್ದಾರೆ. ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ. ಶ್ಯಾಮ್ ರಾಜು ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

‘ಉತ್ಕೃಷ್ಟ ತಂತ್ರಜ್ಞಾನ ಬಳಕೆಗೆ ಬೇಕಾದ ಪ್ರಾಯೋಗಿಕ ಮಾದರಿಯ ಸಲಕರಣೆಗಳು ಬಹಳಷ್ಟು ದುಬಾರಿಯಾಗಿವೆ. ಆದ್ದರಿಂದ ಎನ್‌ಐಟಿಕೆ ಕೇಂದ್ರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಬೆಳಗಾವಿಯ ವಿಟಿಯು ಹಾಗೂ ನಮ್ಮ ಸಂಸ್ಥೆಗೆ ಮಾತ್ರ ನೋಡಲ್‌ ಕೇಂದ್ರದ ಮಾನ್ಯತೆ ಲಭಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡೇ ಹೊಸ ಪ್ರಯೋಗಗಳ ವಿಷಯ ಕಲಿಯಬಹುದಾಗಿದೆ’ ಎಂದರು.

‘ಮೊದಲ ಹಂತದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ವರ್ಚುವಲ್‌ ಮೂಲಕ ತರಬೇತಿ ನೀಡಲಾಗುವುದು. ಬಳಿಕ ಸ್ಥಳೀಯ ಕಾಲೇಜುಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ನಮ್ಮ ಕಾಲೇಜಿನ ಸಿಬ್ಬಂದಿ ಸುರತ್ಕಲ್‌ನ ಸಿಬ್ಬಂದಿಯಿಂದ ತರಬೇತಿ ಪಡೆದಿದ್ದಾರೆ’ ಎಂದು ತಿಳಿಸಿದರು.

ಐಕ್ಯುಎಸಿ ಸಂಯೋಜಕ ಸುಭಾಷ.ಎನ್‌. ಎಮ್ಮಿ, ವರ್ಚುವಲ್‌ ಲ್ಯಾಬ್‌ ತಾಂತ್ರಿಕ ಸಮಿತಿಯ ಸದಸ್ಯೆ ಎಂ. ಅರ್ಚನಾ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಎಂ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.