ADVERTISEMENT

ಧಾರವಾಡ| ಇನ್ನೂ ತಪ್ಪಿಲ್ಲ ನೀರಿಗಾಗಿ ಪರದಾಟ

ವಾರಕ್ಕೊಮ್ಮೆ ನೀರು; ಮುಗಿಯದ 24x7 ಕಾಮಗಾರಿ

ಬಸವರಾಜ ಹವಾಲ್ದಾರ
Published 9 ನವೆಂಬರ್ 2019, 19:32 IST
Last Updated 9 ನವೆಂಬರ್ 2019, 19:32 IST
ಮನೆಗಳ ಮುಂದೆ ನೀರು ಸಂಗ್ರಹಕ್ಕಾಗಿ ಟ್ಯಾಂಕ್‌ಗಳನ್ನಿಟ್ಟಿರುವ ದೃಶ್ಯ
ಮನೆಗಳ ಮುಂದೆ ನೀರು ಸಂಗ್ರಹಕ್ಕಾಗಿ ಟ್ಯಾಂಕ್‌ಗಳನ್ನಿಟ್ಟಿರುವ ದೃಶ್ಯ   

ಕುಂದಗೋಳ: ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆಗೆ ಚಾಲನೆ ಸಿಕ್ಕು ಎರಡು ವರ್ಷಗಳೇ ಕಳೆದಿವೆ. ಆದರೆ, ನೀರಿನ್ನು ಜನರ ಮನೆಗಳಿಗೆ ತಲುಪಿಲ್ಲ. ಹಾಗಾಗಿ, ಪಟ್ಟಣದಲ್ಲಿ ಕುಡಿಯುವ ನೀರಿಗೆ ಪರದಾಡುವುದು ತಪ್ಪಿಲ್ಲ.

ಪಟ್ಟಣದಲ್ಲಿ 25 ಸಾವಿರ ಜನಸಂಖ್ಯೆಯಿದೆ. ವಾರಕ್ಕೊಮ್ಮೆ ನೀರು ಸರಬರಾಜ ಮಾಡಲಾಗುತ್ತಿದೆ. ಕೊಳವೆಬಾವಿ ಕೊರೆದರೂ ಸವುಳು ನೀರೇ ಬರುವುದರಿಂದ ನೀರಿದ್ದರೂ ಉಪಯೋಗವಿಲ್ಲದಂತಾಗುತ್ತದೆ.

ಮುಗಿಯದ ಕಾಮಗಾರಿ:ಮಲಪ್ರಭಾ ನದಿಗೆ ನಿರ್ಮಿಸಿರುವ ನವಿಲುತೀರ್ಥ ಅಣೆಕಟ್ಟೆಯಿಂದ ನೀರು ತರುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ADVERTISEMENT

ಎರಡು ವರ್ಷಗಳ ಹಿಂದೆ ₹ 49.50 ಕೋಟಿ ವೆಚ್ಚದಲ್ಲಿ ನೀರು ತರಲು ಪೈಪ್‌ಲೈನ್‌ ಕಾಮಗಾರಿ ಆರಂಭವಾಗಿದೆ. ಗಬ್ಬೂರು ಬೈಪಾಸ್‌ ಬಳಿ ನಾಲ್ಕು ಕಿ.ಮೀ. ನಷ್ಟು ಹಾಗೂ ಹುಬ್ಬಳ್ಳಿ ಬೈಪಾಸ್ ಹತ್ತಿರ ಒಂದಷ್ಟು ಕಾಮಗಾರಿ ಬಾಕಿ ಉಳಿದುಕೊಂಡಿದೆ. ಒಂದಿ ತಿಂಗಳಲ್ಲಿ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಪಟ್ಟಣದಲ್ಲಿ ಈಗಾಗಲೇ 1600 ಮನೆಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡುವ ನಳದ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನೀರು ಮಾತ್ರ ಇನ್ನೂ ಬಂದಿಲ್ಲ. ನಳಗಳನ್ನು ಹಾಕಿ ವರ್ಷಗಳಾಗುತ್ತಾ ಬಂದಿರುವುದರಿಂದ ಅವುಗಳು ಎಲ್ಲಿ ಹಾಳಾಗಿ ಹೋಗುತ್ತವೆ ಎಂಬ ಆತಂಕ ಜನರನ್ನು ಕಾಡುತ್ತಿದೆ.

ಟ್ಯಾಂಕ್‌ಗಳೇ ಗತಿ: ವಾರಕ್ಕೊಮ್ಮೆ ನೀರು ಬರುವುದರಿಂದ ಮನೆ ಮುಂದೆ ನೀರಿನ ಟ್ಯಾಂಕ್‌ಗಳನ್ನು ಈಡಲಾಗಿದೆ. ಕೆಲವರು ನಾಲ್ಕಾರು ಡ್ರಮ್‌ಗಳನ್ನಿಟ್ಟುಕೊಂಡಿದ್ದಾರೆ. ನೀರು ಬಂದಾಗ ಅವುಗಳನ್ನೆಲ್ಲ ಭರ್ತಿ ಮಾಡಿ ವಾರಪೂರ್ತಿ ಬಳಸಬೇಕು. ಕಡಿಮೆ ಬಿದ್ದರೆ, ಕೊಳವೆಬಾವಿಗಳಿಂದ ತರುವಂತಹ ಸ್ಥಿತಿ ಇದೆ.

‘ವಾರಕ್ಕೊಮ್ಮೆ ನೀರು ಬರುವುದರಿಂದ ನೀರಿನ ತೊಂದರೆ ಬಹಳ ಇದೆ. ಮನೆಗೆ ಸಂಬಂಧಿಕರು, ಸ್ನೇಹಿತರು ಒಂದೆರಡು ದಿನಗಳ ಮಟ್ಟಿಗೆ ಬಂದರೆ ನೀರಿನದ್ದೇ ಚಿಂತೆಯಾಗಿರುತ್ತದೆ’ ಎನ್ನುತ್ತಾರೆ ಕಾಳಮ್ಮ.

ಕುಡಿಯುವ ನೀರಿಗೆ ಶುದ್ಧ ಘಟಕಗಳೇ ಆಧಾರ: ಸವುಳು ನೀರು ಹಾಗೂ ಕೆರೆಯ ನೀರನ್ನೇ ಪಟ್ಟಣದ ಜನತೆ ಕುಡಿಯಲು ಬಳಸಬೇಕು. ಶುದ್ಧತೆಯ ಕೊರತೆಯಿಂದಾಗಿ ಜನರನ್ನು ರೋಗಗಳು ಹೆಚ್ಚಾಗಿ ಕಾಡುತ್ತಿದ್ದವು.

ಜನರ ತೊಂದರೆ ತಪ್ಪಿಸಲು ಪಟ್ಟಣದಲ್ಲಿ 8 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ಅವುಗಳ ಆರಂಭವಾದ ಮೇಲೆ ಕುಡಿಯುವ ನೀರಿನ ತೊಂದರೆ ಒಂದಷ್ಟು ಕಡಿಮೆಯಾಗಿದೆ. ಘಟಕಗಳು ಕೆಟ್ಟರೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.