ADVERTISEMENT

ಹಿಂದೂಗಳ ಭಾವನೆಗೆ ವಿರೋಧಿಸಿದವರಿಗೆ ಕಪಾಳ ಮೋಕ್ಷ: ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 15:27 IST
Last Updated 31 ಆಗಸ್ಟ್ 2022, 15:27 IST
ಮುತಾಲಿಕ್
ಮುತಾಲಿಕ್   

ಹುಬ್ಬಳ್ಳಿ: ಪಾಲಿಕೆಗೆ ಸೇರಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವದ ಮೂಲಕ, ಹಿಂದೂಗಳ ಭಾವನೆ ವಿರೋಧಿಸಿದವರಿಗೆ ಕಪಾಳ ಮೋಕ್ಷವಾಗಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೊಂದು ಐತಿಹಾಸಿಕ ದಿನ. ನಮ್ಮ ಹೋರಾಟಕ್ಕೆ ಹೈಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ. ನೀವು ಯಾವುದೇ ಕೋರ್ಟ್ ಗೆ ಹೋಗಿ. ಈಗಾಗಲೇ ಮೂರ್ತಿ ಪ್ರತಿಷ್ಠಾಪನೆ ಆಗಿದೆ. ಯಾವ ಶಕ್ತಿಯೂ ಇದನ್ನ ತಡೆಯೋಕೆ ಸಾಧ್ಯವಿಲ್ಲ ಎಂದರು.

ಗಣೇಶೋತ್ಸವಕ್ಕೆ 129 ವರ್ಷಗಳ ಇತಿಹಾಸವಿದ್ದು, ಬ್ರಿಟಿಷರು ಸಹ ಇದನ್ನು ವಿರೋಧಿಸಿರಲಿಲ್ಲ. ಇಂದು ಕಾಂಗ್ರೆಸ್‌ನವರು ಈ ವಿಷಯದಲ್ಲಿ ಮುಸ್ಲಿಮರಿಗೆ ಕುಮ್ಮಕ್ಕು ಕೊಟ್ಟು ಕೋರ್ಟ್‌ಗೆ ಕಳಿಸುತ್ತಿದ್ದಾರೆ. ಇವತ್ತು ಸಹ ಸುಪ್ರೀಂ ಕೋರ್ಟ್‌ಗೆ ಹೋಗಿ ಮೂರ್ತಿ ಪ್ರತಿಷ್ಠಾಪನೆ ತಡೆಯಲು ಯತ್ನಿಸಿದ್ದಾರೆ. ನಿಮಗೆ ಗಣೇಶನ ಶಾಪ ತಟ್ಟದೆ ಇರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ಕೂಡ ಈದ್ಗಾದಲ್ಲಿ ಗಣೇಶೋತ್ಸವವನ್ನು ವಿರೋಧಿಸಿದ್ದಾರೆಂಬ ಮಾಹಿತಿ ಇದೆ. ಹಿಂದೂ ಆಗಿರುವ ನೀವು ವಿರೋಧಿಸುವ ಬದಲು, ಬೆಂಬಲ ಕೊಡಬೇಕಿತ್ತು ಎಂದು ತಿಳಿಸಿದರು.

ಪೂಜೆ ಸಂದರ್ಭದಲ್ಲಿ ಮುತಾಲಿಕ್ ಅವರು ಸಾವರ್ಕರ್ ಮತ್ತು ಬಾಲಗಂಗಾಧರ ತಿಲಕ್ ಅವರ ಭಾವಚಿತ್ರವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.