ಹುಬ್ಬಳ್ಳಿ: ‘ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣ ಮೊದಲೇ ಗೊತ್ತಿದ್ದರೂ ಜೆಡಿಎಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದು ಯಾಕೆ? ಅವರು ವಿದೇಶಕ್ಕೆ ಪರಾರಿಯಾಗುವುದನ್ನು ಏಕೆ ತಡೆಯಲಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
‘ಪೆನ್‌ಡ್ರೈವ್ ಕುರಿತು ಹಾಸನದ ಬಿಜೆಪಿ ಮುಖಂಡರೊಬ್ಬರು ಕಳೆದ ಡಿಸೆಂಬರ್‌ನಲ್ಲೇ ಅಮಿತ್ ಶಾ, ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದರು. ಆದರೂ ಏಕೆ ಅವರಿಗೆ ಟಿಕೆಟ್ ನೀಡಲಾಯಿತು? ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಪ್ರಜ್ವಲ್ ಪರ ಪ್ರಚಾರ ನಡೆಸಿದ್ದಾರೆ’ ಎಂದು ಅವರು ಮಂಗಳವಾರ ಪತ್ರಿಕಗೋಷ್ಠಿಯಲ್ಲಿ ಹೇಳಿದರು.
‘ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗುವುದನ್ನು ತಡೆಯದಂತೆ ಜೆಡಿಎಸ್ ಮುಖಂಡರ ಒತ್ತಡ ಇತ್ತೇ? ಈ ವಿಷಯದಲ್ಲಿ ಬಿಜೆಪಿಯವರ ಡೋಂಗಿತನ ಜಗಜ್ಜಾಹೀರಾಗಿದೆ’ ಎಂದು ಟೀಕಿಸಿದರು.
‘ಹಾಸನದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಪೆನ್‌ಡ್ರೈನ್‌ನಲ್ಲಿರುವುದು ನಕಲಿ ವಿಡಿಯೊ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡುತ್ತಾರೆ. ಈ ಮೂಲಕ ಬಿಜೆಪಿಯವರು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.
‘ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಬದಲು ಪ್ರಜ್ವಲ್ ರೇವಣ್ಣಗೆ ವಿದೇಶದಿಂದ ಕರೆಸಿ ಎಸ್‌ಐಟಿ ಎದುರು ಹಾಜರುಪಡಿಸಬೇಕು. ಇಲ್ಲದಿದ್ದರೆ, ಅಮಿತ್ ಶಾ, ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿಯವರಿಗೆ ಮಾತನಾಡುವ ನೈತಿಕತೆ ಇರುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.