ADVERTISEMENT

ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವೆ

ಶಿಕ್ಷಕರು, ಹಿತೈಷಿಗಳ ಒತ್ತಾಯದಿಂದ ಬಿಜೆಪಿ ಸೇರ್ಪಡೆ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 15:51 IST
Last Updated 20 ಮೇ 2022, 15:51 IST
ಬಿಜೆಪಿ ಸೇರ್ಪಡೆ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ ಅವರನ್ನು ಪಕ್ಷದಿಂದ ಸನ್ಮಾನಿಸಲಾಯಿತು. ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಾಸಕ ಜಗದೀಶ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಹಾನಗರ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ ಇದ್ದಾರೆ
ಬಿಜೆಪಿ ಸೇರ್ಪಡೆ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ ಅವರನ್ನು ಪಕ್ಷದಿಂದ ಸನ್ಮಾನಿಸಲಾಯಿತು. ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಾಸಕ ಜಗದೀಶ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಹಾನಗರ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ ಇದ್ದಾರೆ   

ಹುಬ್ಬಳ್ಳಿ: ‘ಶಿಕ್ಷಕರು ಹಾಗೂ ಹಿತೈಷಿಗಳ ಒತ್ತಾಯದ ಮೇರೆಗೆ ಬಿಜೆಪಿ ಸೇರಿದ್ದೇನೆ. ಎರಡ್ಮೂರು ತಿಂಗಳಿಂದಲೇ ಈ ಪ್ರಕ್ರಿಯೆ ಆರಂಭವಾಗಿತ್ತು. ನಾನು ಸೇರಿರುವ ಪಕ್ಷಕ್ಕೆ ನಿಷ್ಠನಾಗಿದ್ದು, ಸಂಘಟನೆಗೆ ಸಾಮರ್ಥ್ಯ ಮೀರಿ ಕೆಲಸ ಮಾಡುವೆ. ಪ್ರೀತಿ ಮತ್ತು ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವೆ’ ಎಂದು ಬಿಜೆಪಿ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು.

ಬಿಜೆಪಿ ಸೇರ್ಪಡೆ ಬಳಿಕ‌, ಮೊದಲ ಬಾರಿಗೆ ಹುಬ್ಬಳ್ಳಿಯ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಅವರು, ಸ್ಥಳೀಯ ನಾಯಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುವಂತೆ ಶಿಕ್ಷಕರಿಂದ ಹಿಂದಿನಿಂದಲೂ ಒತ್ತಡವಿತ್ತು. ಅವರ ಮಾತಿಗೆ ಬೆಲೆ ಕೊಟ್ಟು ಬಿಜೆಪಿಗೆ ಬಂದೆ. ಜೊತೆಗೆ, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿದಂತೆ ವಿವಿಧ ನಾಯಕರು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. 42 ವರ್ಷಗಳ ರಾಜಕೀಯದಲ್ಲಿ ಹಲವು ಏಳುಬೀಳು ಕಂಡಿದ್ದೇನೆ. ಜನತಾ ಪರಿವಾರದ ನಾಯಕ ರಾಮಕೃಷ್ಣ ಹೆಗಡೆ ಅವರ ಬಳಿಕ, ಎಚ್‌.ಡಿ. ದೇವೇಗೌಡರೊಂದಿಗೆ ಇದ್ದೆ. ಶಿಕ್ಷಣ ಸಚಿವನಾಗಿಯೂ ಕೆಲಸ ಮಾಡಿದೆ’ ಎಂದರು.

ADVERTISEMENT

26ಕ್ಕೆ ನಾಮಪತ್ರ:

‘ಪರಿಷತ್ ಸ್ಥಾನಕ್ಕೆ ಮೇ 23ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದೆ. ಆದರೆ, ಪಕ್ಷದ ಸೂಚನೆಯಂತೆ ಕುಟುಂಬದ ಸದಸ್ಯರು ಹಾಗೂ ಪಕ್ಷದ ಮುಖಂಡರೊಂದಿಗೆ 26ಕ್ಕೆ ನಾಮಪತ್ರ ಸಲ್ಲಿಸುವೆ. ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದಗೆಲುವು ಸಾಧಿಸುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಹೊರಟ್ಟಿ ಅವರ ಸೇರ್ಪಡೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಆನೆಬಲ ಬಂದಿದೆ. ಜನತಾ ಪರಿವಾರದಲ್ಲಿದ್ದ ರಾಮಕೃಷ್ಣ ಹೆಗಡೆ ಅವರ ಅನೇಕ ಶಿಷ್ಯರು ಬಿಜೆಪಿಗೆ ಬಂದರೂ, ಹೊರಟ್ಟಿ ಅವರು ಮಾತ್ರ ಬಂದಿರಲಿಲ್ಲ. ಬೇರೆ ಪಕ್ಷದಲ್ಲಿದ್ದರೂ, ಅಭಿವೃದ್ಧಿ ವಿಷಯದಲ್ಲಿ ನಮ್ಮೊಂದಿಗೆ ಸದಾ ಇದ್ದರು. ಹೊರಟ್ಟಿ ಅವರ ಅನುಭವವನ್ನು ಪಕ್ಷವು ಸಮರ್ಥವಾಗಿ ಬಳಸಿಕೊಳ್ಳಲಿದೆ’ ಎಂದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ‘ಹೊರಟ್ಟಿ ಅವರನ್ನು ಪಕ್ಷಕ್ಕೆ ಕರೆತರಲು ನಿರಂತರ ಪ್ರಯತ್ನ ನಡೆಯುತ್ತಿತ್ತು. ಅವರ ಸೇರ್ಪಡೆಯಿಂದ ಪರಿಷತ್ ಚುನಾವಣೆಯಲ್ಲಿ ಪಕ್ಷವು ಜಯಭೇರಿ ಬಾರಿಸಲಿದೆ’ ಎಂದರು.

ಮುಖಂಡರಾದ ಅಶೋಕ ಕಾಟವೆ, ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ವಿರುಪಾಕ್ಷ ರಾಯನಗೌಡ್ರ,ರೂಪಾ ಶೆಟ್ಟಿ, ವೀರೇಶ ಸಂಗಳದ, ವಸಂತ ನಾಡಜೋಶಿ, ಈಶ್ವರಗೌಡ ಪಾಟೀಲ, ರಾಮನಾಥ ಶೆಣೈ, ಅವಿನಾಶ ಹರಿವಾಣ, ಡಿ.ಪಿ. ಪಾಟೀಲ ಇದ್ದರು.

ಪಕ್ಷದ ನಿರ್ಧಾರವೇ ಅಂತಿಮ: ಶೆಟ್ಟರ್

‘ಪರಿಷತ್ ಚುನಾವಣೆ ಘೋಷಣೆಗೆ ಮುಂಚೆ ನಡೆದ ಸಭೆಯಲ್ಲಿ ಅಭ್ಯರ್ಥಿಯಾಗಿ ಯಾರನ್ನೇ ಸೂಚಿಸಿದ್ದರೂ, ಅಂತಿಮವಾಗಿ ಪಕ್ಷ ಕೈಗೊಳ್ಳುವ ತೀರ್ಮಾನವೇ ಅಂತಿಮ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಪರಿಷತ್ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿದ್ದ ಪಕ್ಷದ ಮತ್ತೊಬ್ಬ ಆಕಾಂಕ್ಷಿ ಮೋಹನ ಲಿಂಬಿಕಾಯಿ ಅವರ ಕುರಿತ ಸುದ್ದಿಗಾರರ ಪ್ರಶ್ನೆಗೆಪ್ರತಿಕ್ರಿಯಿಸಿದ ಅವರು, ‘ವ್ಯಕ್ತಿಗಳ ಮಾತಿಗಿಂತ ಪಕ್ಷವು ಕೈಗೊಳ್ಳುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು. ಹೊರಟ್ಟಿ ಅವರ ವಿಷಯದಲ್ಲಿ ಪಕ್ಷದ ರಾಜ್ಯ ಘಟಕ ಹಾಗೂ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಅನುಗುಣವಾಗಿ ಎಲ್ಲರೂ ಕೆಲಸ ಮಾಡಬೇಕು’ ಎಂದರು.

ಪಠ್ಯಪುಸ್ತಕಗಳ ಕೇಸರಿಕರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ‘ಪತ್ರಿಕೆಗಳಲ್ಲಿ ಬಂದಿರುವುದನ್ನು ಗಮನಿಸಿರುವೆ. ಆ ಕುರಿತು, ಸೂಕ್ತ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.