ADVERTISEMENT

ನಿಯಂತ್ರಣವಿಲ್ಲದ ಬರವಣಿಗೆ ಉತ್ಕೃಷ್ಟವಾಗಲಿದೆ: ವಿನಯಾ

ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:38 IST
Last Updated 26 ಜನವರಿ 2022, 3:38 IST
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರೇಮಾ ಹೂಗಾರ, ಸುರೇಖಾ ಕುಲಕರ್ಣಿ, ಹನುಮಾಕ್ಷಿ ಗೋಗಿ, ಡಾ. ಡಾ. ಗುರುದೇವಿ ಹುಲೆಪ್ಪನವರಮಠ, ಪ್ರಜ್ಞಾ ಮತ್ತಿಹಳ್ಳಿ ಅವರನ್ನು ಅಭಿನಂದಿಸಲಾಯಿತು. ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ಸುಜಾತಾ ಹಡಗಲಿ ಡಾ. ಶೈಲಜಾ ಅಮರಶೆಟ್ಟಿ, ಪದ್ಮಲತಾ ನಿರಂಜನಕುಮಾರ್, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ವಿನಯಾ ಒಕ್ಕುಂದ, ಶಂಕರ ಹಲಗತ್ತಿ ಇದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರೇಮಾ ಹೂಗಾರ, ಸುರೇಖಾ ಕುಲಕರ್ಣಿ, ಹನುಮಾಕ್ಷಿ ಗೋಗಿ, ಡಾ. ಡಾ. ಗುರುದೇವಿ ಹುಲೆಪ್ಪನವರಮಠ, ಪ್ರಜ್ಞಾ ಮತ್ತಿಹಳ್ಳಿ ಅವರನ್ನು ಅಭಿನಂದಿಸಲಾಯಿತು. ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ಸುಜಾತಾ ಹಡಗಲಿ ಡಾ. ಶೈಲಜಾ ಅಮರಶೆಟ್ಟಿ, ಪದ್ಮಲತಾ ನಿರಂಜನಕುಮಾರ್, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ವಿನಯಾ ಒಕ್ಕುಂದ, ಶಂಕರ ಹಲಗತ್ತಿ ಇದ್ದಾರೆ.   

ಧಾರವಾಡ: ‘ಲೇಖಕಿಯೊಬ್ಬಳ ಸ್ವನಿಯಂತ್ರಣವೂ ಇಲ್ಲದಪ್ರಾಮಾಣಿಕ ಬರವಣಿಗೆ ಸಾಹಿತ್ಯ ಚರಿತ್ರೆಯಲ್ಲೇ ಅತ್ಯಂತ ಉತ್ಕೃಷ್ಟವಾದ ಬರಹವಾಗಲಿದೆ. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ’ ಎಂದು ಲೇಖಕಿ ಡಾ. ವಿನಯಾ ಒಕ್ಕುಂದ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಭಾಜನವಾದ 2016ನೇ ಸಾಲಿನ ಮೂರು ಕೃತಿಗಳ ಕುರಿತು ಅವರು ಮಾತನಾಡಿದರು.

‘ಹೆಣ್ಣು ಬರೆಯಲಾರಂಭಿಸಿದ ದಿನದಿಂದ ಇಂದಿನವರೆಗೂ ಆಕೆಯ ಅಭಿವ್ಯಕ್ತಿಯ ಸೀಮಾರೇಖಗಳು ಬಹಳಾ ದೊಡ್ಡ ಪ್ರಮಾಣದಲ್ಲಿ ಉಲ್ಲಂಘನೆಯಾಗಿಲ್ಲ. ಹೆಣ್ಣು ಸಮಾಜದ ಯಾವುದೇ ಕಟ್ಟುಪಾಡುಗಳ ನಿಯಂತ್ರಣವಿಲ್ಲದೆ ಪ್ರಾಮಾಣಿಕವಾಗಿ ಮಾತನಾಡುವುದರಿಂದ ಸಮಾಜ ಹೆಣ್ಣಾಗಿ ಯೋಚಿಸಲು ಸಾಧ್ಯ. ಇಂದಿನ ಅಗತ್ಯವಾಗಿರುವ ಇವುಗಳನ್ನು ಬರಹಗಳು ಒದಗಿಸುತ್ತವೆ. ಬರಹಗಳ ಮೂಲಕ ಬದುಕುವ ಲೇಖಕಿಯರು ತಮ್ಮ ಅಭಿವ್ಯಕ್ತಿಯನ್ನು ಇನ್ನಷ್ಟು ದಾಖಲಿಸಬೇಕು’ ಎಂದರು.

ADVERTISEMENT

‘ಇಂದಿನ ಆಧುನಿಕ ಸಂಧರ್ಭದಲ್ಲೂ ನಂಜನಗೂಡಿನ ತಿರುಮಲಾಂಬ, ಬೆಳಗೆರೆ ಜಾನಕಮ್ಮ ಹಾಗೂ ಪಾಕಿಸ್ತಾನದ ಸಾರಾ ಶಾ ಗುಪ್ತಾ ನೆನಪಾಗುತ್ತಾರೆ. ಹೆಣ್ಣಿನ ಬರವಣಿಗೆ ನಿಷ್ಟೆಯ ಗಡಿ ರೇಖೆಯ ಒಳಗೆಯೇ ಇಂದಿಗೂ ಉಸಿರಾಡಬೇಕಾದ ಸ್ಥಿತಿ ಲೇಖಕಿಯರದ್ದಾಗಿದೆ. ಇಂದು ಇದರಲ್ಲಿ ಒಂದಷ್ಟು ಮಾರ್ಪಾಡಾಗಿದ್ದರೂ ಸಂಪೂರ್ಣ ಬದಲಾಗಿಲ್ಲ ಎಂಬುದು ವಿಪರ್ಯಾಸ. ಆದರೆ ಹೆಣ್ಣಿನ ಅಭಿವ್ಯಕ್ತಿಯ ಶಕ್ತಿಯನ್ನು ಪ್ರಶಸ್ತಿಗಳು ಹೆಚ್ಚಿಸುತ್ತವೆ‘ ಎಂದರು.

‘ಹೆಣ್ಣಿನ ಮಹಿಳಾ ಅಭಿವ್ಯಕ್ತಿ ಪರಂಪರೆ, ಧಾರವಾಡ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೂ ಕರುಳುಬಳ್ಳಿಯ ಆದಿಮವಾದ ನಂಟು ಇದೆ. 1906ರಲ್ಲಿ ಸಂಘ ಆಹ್ವಾನಿಸಿದ್ದ ಮಹಿಳಾ ಲೇಖಕಿಯರ ಕೃತಿ ಬಹುಮಾನ ಪ್ರಶಸ್ತಿಗೆ ಶಾಂತೂಬಾಯಿ ನೀಲಗಾರ್ ಅವರಹೊಸಗನ್ನಡ ಸಾಹಿತ್ಯದ ಸದ್ಗುಣಿ ಕೃಷ್ಣಾಬಾಯಿ ಕೃತಿಯು ಆಯ್ಕೆಯಾಗಿತ್ತು. ಆ ಕೃತಿಯೇ ಕನ್ನಡದ ಮೊದಲ ಮಹಿಳಾ ಕಾದಂಬರಿಯಾಯಿತು‘ ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಕೇವಲ ಲೇಖಕಿಯರಿಗೆ ಮಾತ್ರ ಬಹುಮಾನ ಕೊಡುವುದು ಮುಖ್ಯವಾಗಬಾರದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಮಹಿಳೆಯರು ಸಾಕಷ್ಟು ಜನ ಇದ್ದಾರೆ. ಅವರನ್ನು ಗುರುತಿಸಿ ಬಹುಮಾನ ನೀಡಿ ಪ್ರೋತ್ಸಾಹಿಸಬೇಕಾಗಿದ್ದು ಸಂಘದ ಕರ್ತವ್ಯ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಾದ ಅಗತ್ಯವಿದೆ’ ಎಂದರು.

ಎಸ್‌ಡಿಎಂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯೆ ಪದ್ಮಲತಾ ನಿರಂಜನಕುಮಾರ್ ಅವರು ಬಹುಮಾನ ವಿಜೇತರನ್ನು ಅಭಿನಂದಿಸಿದರು. ಪ್ರಶಸ್ತಿ ಪುರಸ್ಕೃರಾದಧಾರವಾಡದ ಪ್ರಜ್ಞಾ ಮತ್ತಿಹಳ್ಳಿ, ಬೆಳಗಾವಿಯ ಡಾ. ಗುರುದೇವಿ ಹುಲೆಪ್ಪನವರಮಠ ಹಾಗೂ ಬೀದರಿನ ಪ್ರೇಮಾ ಹೂಗಾರ, ಧಾರವಾಡದ ಹನುಮಾಕ್ಷಿ ಗೋಗಿ, ಹಾಗೂ ಬಾಗಲಕೋಟೆಯ ಸುರೇಖಾ ಕುಲಕರ್ಣಿ ಅಭಿಪ್ರಾಯ ಹಂಚಿಕೊಂಡರು.

2017ರ ಗ್ರಂಥ ಬಹುಮಾನ ಕೃತಿಗಳ ಕುರಿತು ಡಾ. ಜಿನದತ್ತ ಹಡಗಲಿ ಮಾತನಾಡಿದರು. ಬಸವಪ್ರಭು ಹೊಸಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಕಾಲೇಜಿನ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.