ADVERTISEMENT

ಉಳ್ಳಾಲ, ಪುತ್ತೂರು, ಬಂಟ್ವಾಳ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೂರು ಕಡೆ ಮತದಾನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 16:45 IST
Last Updated 30 ಆಗಸ್ಟ್ 2018, 16:45 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳು ಹಾಗೂ ಬಂಟ್ವಾಳ ಪುರಸಭೆಯ 89 ವಾರ್ಡ್‌ಗಳ ಪ್ರತಿನಿಧಿಗಳ ಆಯ್ಕೆಗೆ ಶುಕ್ರವಾರ ಮತದಾನ ನಡೆಯಲಿದೆ. ಒಟ್ಟು 250 ಅಭ್ಯರ್ಥಿಗಳು ಕಣದಲ್ಲಿದ್ದು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ.

ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳ ತಲಾ 31 ವಾರ್ಡ್‌ಗಳು ಹಾಗೂ ಬಂಟ್ವಾಳ ಪುರಸಭೆಯ 27 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 111 ಮತಗಟ್ಟೆಗಳನ್ನು ತೆರೆಯಲಾಗಿದೆ. ಮತಗಟ್ಟೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಗುರುವಾರ ಮಧ್ಯಾಹ್ನವೇ ಆಯಾ ಮತಗಟ್ಟೆಗಳನ್ನು ತಲುಪಿದ್ದು, ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆಯವರೆಗೂ ಮತ ಚಲಾವಣೆಗೆ ಅವಕಾಶವಿದೆ. ಮೂರೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 1,17,979 ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಉಳ್ಳಾಲ ನಗರಸಭೆಯಲ್ಲಿ 44,132 ಮತದಾರರಿದ್ದಾರೆ. ಪುತ್ತೂರು ನಗರಸಭೆಯಲ್ಲಿ 39,745 ಮತ್ತು ಬಂಟ್ವಾಳ ಪುರಸಭೆಯಲ್ಲಿ 34,102 ಮಂದಿ ಮತದಾರರಿದ್ದಾರೆ.

ADVERTISEMENT

‘ಉಳ್ಳಾಲ ನಗರಸಭೆಯಲ್ಲಿ 43 ಮತಗಟ್ಟೆಗಳಿದ್ದು, ಅಷ್ಟೇ ಸಂಖ್ಯೆಯ ಇವಿಎಂ ಬಳಸಲಾಗುತ್ತಿದೆ. 172 ಮತಗಟ್ಟೆ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪುತ್ತೂರು ನಗರಸಭೆಯಲ್ಲಿ 41 ಮತಗಟ್ಟೆಗಳಿದ್ದು, 41ಇವಿಎಂ ಬಳಸಲಾಗುತ್ತಿದೆ. 128 ಚುನಾವಣಾ ಸಿಬ್ಬಂದಿ ಇದ್ದಾರೆ. ಬಂಟ್ವಾಳ ಪುರಸಭೆಯ 32 ಮತಗಟ್ಟೆಗಳಲ್ಲಿ 32 ಇವಿಎಂ ಬಳಸಲಾಗುತ್ತಿದೆ. 164 ಮತಗಟ್ಟೆ ಸಿಬ್ಬಂದಿ ಇದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ತಿಳಿಸಿದ್ದಾರೆ.

ಕಾಂಗ್ರೆಸ್– ಬಿಜೆಪಿ ಪೈಪೋಟಿ:
ಮೂರೂ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪ್ರಬಲ ಪೈಪೋಟಿ ನಡೆಸುತ್ತಿವೆ. ಒಟ್ಟು 89 ವಾರ್ಡ್‌ಗಳ ಪೈಕಿ 87 ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್‌, ತಲಾ ಒಂದು ವಾರ್ಡ್‌ಗಳಲ್ಲಿ ಜೆಡಿಎಸ್‌ ಮತ್ತು ಸಿಪಿಐ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ.

ಬಿಜೆಪಿ 82 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್‌ 35 ವಾರ್ಡ್‌ಗಳಲ್ಲಿ, ಎಸ್‌ಡಿಪಿಐ 24, ಸಿಪಿಎಂ ಐದು, ಸಿಪಿಐ ಮತ್ತು ಬಹುಜನ ಸಮಾಜ ಪಕ್ಷ ತಲಾ ಒಂದು ವಾರ್ಡ್‌ಗಳಲ್ಲಿ ಸ್ಪರ್ಧೆಯಲ್ಲಿವೆ. ಒಟ್ಟು 15 ಮಂದಿ ಪಕ್ಷೇತರರು ಚುನಾವಣಾ ಕಣದಲ್ಲಿದ್ದಾರೆ.

ಬಿಗಿ ಭದ್ರತೆ:
ಮೂರೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣೆ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಉಳ್ಳಾಲ ನಗರಸಭೆ ವ್ಯಾಪ್ತಿಯ ಚುನಾವಣೆಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ ವತಿಯಿಂದ ಭದ್ರತೆ ಒದಗಿಸಲಾಗುತ್ತಿದೆ. ಪುತ್ತೂರು ನಗರಸಭೆ ಮತ್ತು ಬಂಟ್ವಾಳ ಪುರಸಭೆ ವ್ಯಾಪ್ತಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಭದ್ರತೆ ಒದಗಿಸಲಾಗುತ್ತಿದೆ.

ಎಸಿಪಿ/ ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಳಿಗೆ ಚುನಾವಣೆ ಭದ್ರತೆಯ ಉಸ್ತುವಾರಿ ನೀಡಲಾಗಿದೆ. ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್, ಎಎಸ್‌ಐ, ಕಾನ್‌ಸ್ಟೆಬಲ್‌, ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ತಲಾ 200ಕ್ಕೂ ಹೆಚ್ಚು ಮಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್‌ ಪಡೆ, ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತುಕಡಿಗಳನ್ನು ಈ ವ್ಯಾಪ್ತಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.