ADVERTISEMENT

ಅಂಗವಿಕಲರ ಬಗ್ಗೆ ಕೀಳರಿಮೆ ಬೇಡ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 6:00 IST
Last Updated 12 ಜನವರಿ 2012, 6:00 IST

ಗದಗ: ಅಂಗವೈಕಲ್ಯತೆ, ಅಂಗಹೀನತೆ ಶಾಪವಲ್ಲ. ಅವರ ಬಗ್ಗೆ ಕೀಳರಿಮೆ ಬೇಡ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಸಲಹೆ ನೀಡಿದರು.

ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ  ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಎಲ್ಲರಿಗೂ ಸಮ ಬಾಳು, ಎಲ್ಲರಿಗೂ ಸಮ ಪಾಲು ಎನ್ನುವಂತೆ ಅವರನ್ನು ಮುಖ್ಯವಾಹಿನಿಗೆ ತರಬೇಕು. ವಿಕಲಚೇತನರಿಗೆ ಆತ್ಮ ವಿಶ್ವಾಸ ಹೆಚ್ಚಿಸಲು ಈ ಕ್ರೀಡಾಕೂಟ ಸಹಾಯಕಾರಿಯಾಗಲಿದೆ. ವಿಕಲಚೇತನರು ಆತ್ಮ ವಿಶ್ವಾಸದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳ ಲಾಗಿದೆ. ಎರಡು ಹಂತ 5 ವಿಭಾಗದಲ್ಲಿ ಈ ಕ್ರೀಡಾಕೂಟವನ್ನು ಸಂಘಟಿಸಲಾಗಿದೆ. ಆತ್ಮ ವಿಶ್ವಾಸ ಸ್ವಾಭಿಮಾನ ಹೊಂದಿದಲ್ಲಿ ಎಲ್ಲ ರಂಗಗಳಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಮಾತನಾಡಿ, ಅಂಗವಿಕಲತೆಯನ್ನು ನೆಪವಾಗಿಟ್ಟುಕೊಂಡು ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು. ಸಾಧನೆಗೆ ಅಂಗವಿಕಲತೆ ಅಡ್ಡಿಯಾಗದು. ವಿಶ್ವದಾದ್ಯಂತ ಹೆಸರುವಾಸಿಯಾದ ಬಹುತೇಕರು ಅಂಗವಿಕಲರೇ ಆಗಿದ್ದಾರೆ. ಆತ್ಮ ವಿಶ್ವಾಸದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿಶ್ವಾಸ ತುಂಬಿದರು.

ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಗುಡ್ಲಾನೂರ ಕ್ರೀಡಾಜ್ಯೋತಿ ಸ್ವೀಕರಿಸಿದರು. ಕ್ರೀಡಾಕೂಟ ಸಮಿತಿಯ ಕಾರ್ಯದರ್ಶಿ ಎಂ.ಎಂ. ಕಲಹಾಳ, ದೈಹಿಕ ಶಿಕ್ಷಕರಾದ ಡಿ.ಎಸ್. ಪೂಜಾರ, ಎಸ್.ಎನ್. ಬಳ್ಳಾರಿ, ಡಿ.ಎಸ್. ತಳವಾರ, ಬಸವರಾಜ ಚಕ್ರಣ್ಣವರ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.