ADVERTISEMENT

ಅಂತೂ-ಇಂತೂ ಒಪ್ಪಿಗೆ ಸಿಕ್ಕಿತು.....!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 9:45 IST
Last Updated 15 ಮಾರ್ಚ್ 2012, 9:45 IST

ಗದಗ: ಸರಿ ಸುಮಾರು ಆರೇಳು ವರ್ಷದ ಸತತ ಹೋರಾಟಕ್ಕೆ ಈಗ ಸ್ವಲ್ಪ ಜಯ ಸಿಕ್ಕಂತೆ ಆಗಿದೆ. ಅದು ಗದಗ-ವಾಡಿ, ಗದಗ-ಹಾವೇರಿ ಹೊಸ ರೈಲು ಮಾರ್ಗದ ವಿಚಾರದಲ್ಲಿ.

ಕೇಂದ್ರ ಸರ್ಕಾರ ಬುಧವಾರ ಮಂಡಿಸಿದ ರೈಲ್ವೆ ಮುಂಗಡ ಪತ್ರದಲ್ಲಿ ಈ ಎರಡು ಹೊಸ ಮಾರ್ಗಗಳಿಗೆ ಅನುಮತಿಯನ್ನು ನೀಡಿ, ಯೋಜನಾ ಅನುಷ್ಠಾನಕ್ಕಾಗಿ ಅರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿರುವು ದರಿಂದ ಇಂದಲ್ಲ ನಾಳೆ ಅಂತೂ ಈ ಮಾರ್ಗಗಳಲ್ಲಿ ರೈಲು ಓಡಾಡುತ್ತದೆ ಎನ್ನುವ ಆಶಾವಾದವನ್ನು ರೈಲ್ವೆ ಹೋರಾಟಗಾರರು ತಾಳಿದ್ದಾರೆ.

ಮುಂಬೈ ಕರ್ನಾಟಕ ಹಾಗೂ ಹೈ-ಕ ನಡುವೆ ಕೊಂಡಿಯಾಗಿರುವುದು ಗದಗ. ಇಲ್ಲಿಂದ ವಾಡಿಗೆ ರೈಲು ಮಾರ್ಗ ರಚನೆಯಾದರೆ ದಕ್ಷಿಣ ಕರ್ನಾಟದ ಜನರೂ ಕೂಡಾ ನೇರವಾಗಿ ದೆಹಲಿಗೆ ಪ್ರಯಾಣಿಸಬಹುದಾಗಿದೆ. ಅಲ್ಲದೆ ಹುಬ್ಬಳ್ಳಿ-ಗುಲ್ಬರ್ಗಾಕ್ಕೂ ನೇರ ಸಂಪರ್ಕವಾಗುತ್ತದೆ.

ಈ ಹೊಸ ಮಾರ್ಗವನ್ನು 2008-09ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಸುಮಾರು 1395 ಕೋಟಿ ರೂಪಾಯಿ ವೆಚ್ಚದ 252.50 ಕಿಲೋಮೀಟರ್ ದೂರದ ಮಾರ್ಗ ಇದಾಗಿದೆ. ಈ ಮಾರ್ಗ ಹೋಗುವ ದಾರಿಯಲ್ಲಿ ಸಿಮೆಂಟ್ ಕಾರ್ಖಾಗಳಿವೆ. ಪ್ರಸ್ತುತ ಹುಬ್ಬಳ್ಳಿ ಕಡೆಗೆ ಸಿಮೆಂಟ್ ವ್ಯಾಗನ್‌ಗಳು ಬರಬೇಕಾದರೆ ಆಂಧ್ರ ಪ್ರದೇಶದ ಗುಂತಕಲ್ ಜಂಕ್ಷನ್ ಬಳಸಬೇಕು.

ಆದರೆ ಈ ಮಾರ್ಗ ಪ್ರಾರಂಭ ವಾದರೇ ವ್ಯಾಗನ್‌ಗಳು ಗದುಗಿ ನಿಂದಲೇ ಹೋಗಬಹುದು. ಇದ ರಿಂದ ವಾರ್ಷಿಕ ಸುಮಾರು 300ರಿಂದ 400 ಕೋಟಿ ಆದಾಯ ರೈಲ್ವೆ ಇಲಾಖೆಗೆ ದೊರೆಯುತ್ತದೆ ಎಂದು ನೈರುತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಆದಪ್ಪಗೌಡರು ಅಭಿಪ್ರಾಯ ಪಡುತ್ತಾರೆ.

ಇನ್ನೂ ಹಾವೇರಿ-ಗದಗ ಮಾರ್ಗ
ವಾಸ್ತವದಲ್ಲಿ ಇದು ಹಾವೇರಿ ಜಿಲ್ಲೆಯ ಯಲುವಿಗಿಗೆ ಸಂಪರ್ಕ ಕಲ್ಪಿಸುತ್ತದೆ. 299 ಕೋಟಿ ವೆಚ್ಚದ 53 ಕಿಲೋ ಮೀಟರ್ ದೂರದ ಈ ಮಾರ್ಗವು ಪ್ರಾರಂಭವಾದರೇ ಬೆಂಗಳೂರು- ಮೈಸೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ಬೈಪಾಸ್ ದಾರಿ ಸಿಕ್ಕಂತೆ ಆಗುತ್ತದೆ.

ಈ ಮಾರ್ಗಕ್ಕೆ 2006ರಿಂದಲೇ ಹೋರಾಟ ಪ್ರಾರಂಭವಾಗಿತ್ತು. ಸ್ಥಳೀಯ ರಾಜಕೀಯ ನಾಯಕರು, ರೈಲ್ವೆ ಹೋರಾಟಗಾರರು ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ್ದರು. ಆದರೆ ರೈಲ್ವೆ ಇಲಾಖೆ ಈ ಮಾರ್ಗ ಅಷ್ಟೊಂದು ಲಾಭದಾಯಕವಾಗಿಲ್ಲ ಎನ್ನುವ ಉತ್ತರನ್ನು ಕೊಟ್ಟಿತ್ತು. ಬಳಿಕ ಸಮರ್ಥವಾದ ಮನವರಿಕೆಯಾದ ಬಳಿಕ ಮಾರ್ಗಕ್ಕೆ ಹಸಿರುನಿಶಾನೆ ಸಿಕ್ಕಿದೆ.

ಸಿಹಿ-ಕಹಿ
ರೈಲ್ವೆ ಬಜೆಟ್ ಗದಗ ಭಾಗಕ್ಕೆ ಸಿಹಿ-ಕಹಿ ಅನುಭವ ನೀಡಿದೆ. ಹುಬ್ಬಳ್ಳಿ-ದೆಹಲಿ, ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ರೈಲು ಆರಂಭಿಸಬೇಕು ಎಂದು ಕೇಳಿಕೊಳ್ಳಲಾಗುತ್ತು.ಆದರೆ ಅದು ಘೋಷಣೆಯಾಗಿಲ್ಲ. ಸೊಲ್ಲಾ ಪುರ- ಗದಗ ಮಾರ್ಗ ದ್ವಿಪಥ ಸಮೀಕ್ಷೆ ಸ್ವಾಗತರ್ಹ. 

 ರೈಲ್ವೆ ಹಾಗೂ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯ ನೀಡಲು ಹಣ ಕ್ರೂಢೀಕರಿಸುವ ಸಲುವಾಗಿ ಪ್ರಯಾಣದರವನ್ನು ಹೆಚ್ಚು ಮಾಡಿರುವುದು ಸರಿಯಾಗಿದೆ ಎಂದು ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.