ADVERTISEMENT

ಅಕ್ಷರದ ಜೊತೆ ಆಚಾರ ಕಲಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:00 IST
Last Updated 18 ಫೆಬ್ರುವರಿ 2011, 9:00 IST

ಗದಗ: ‘ಚನ್ನವೀರ ಶರಣರು ಸಮಸ್ತ ಮಾನವ ಕುಲಕೋಟಿಗೆ ಶರಣರಾಗಿದ್ದಾರೆ. ಅವರಿಗೆ ಎಲ್ಲ ಧರ್ಮೀಯರೂ ಶಿಷ್ಯರಾಗಿರುವುದು ವಿಶೇಷವಾಗಿದ್ದು, ಅವರ ಜೀವನ ಜಗತ್ತಿಗೆ ಸಂಬಂಧಿಸಿದ್ದಾಗಿದೆ’ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಇತ್ತೀಚೆಗೆ ನಡೆದ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಶರಣ ಸಾಹಿತ್ಯ ಸಂಸ್ಕೃತಿ ಸೌರಭ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಮಕ್ಕಳು ಅಕ್ಷರ ಕಲಿಯುವುದರ ಜೊತೆಗೆ ಆಚಾರ ಕಲಿಯುವುದು ಅಗತ್ಯ. ಕೇವಲ ಜ್ಞಾನ ತುಂಬುವುದು ಶಿಕ್ಷಣವಲ್ಲ. ಅಂತರಂಗದ ಜ್ಞಾನವನ್ನು ಜಾಗೃತಗೊಳಿಸಿ ಹೆಚ್ಚಿಸುವುದು ಮುಖ್ಯವಾಗಿದೆ. ಅಂತರಂಗದಲ್ಲಿರುವ ಚೈತನ್ಯವನ್ನು ಹೊರ ಹೊಮ್ಮಿಸುವುದೇ ಅಧ್ಯಾತ್ಮವಾಗಿದೆ ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಸೌರಭದಂತಹ ಗೋಷ್ಠಿಗಳು ಪೂರಕವಾಗಿವೆ’ ಎಂದು ಹೇಳಿದರು.

ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ಸಂಗೀತ, ಜಾನಪದ ಕಲೆ ಹಾಗೂ ಗ್ರಾಮೀಣ ಕ್ರೀಡೆ, ಕಲೆಗಳ ಉಳಿವಿಕೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಮನುಷ್ಯನ ಮಾನಸಿಕ ಕೊಳೆಯನ್ನು ತೊಳೆಯುವಲ್ಲಿ ಶರಣ ಸಾಹಿತ್ಯ ಸಂಸ್ಕೃತಿ ಸೌರಭ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು. ನಗರಗಡ್ಡಿ ಮಠದ ಶಾಂತಲಿಂಗ ಸ್ವಾಮೀಜಿ, ನೀಲಕಂಠ ತಾತನವರು, ದೊಡ್ಡಬಸವಾರ್ಯ ತಾತನವರು ವೇದಿಕೆಯಲ್ಲಿದ್ದರು.
 
ಶ್ರೀಶೈಲ ಸಾಣಿಕೊಪ್ಪ ಉಪನ್ಯಾಸ ನೀಡಿದರು. ಕಲಾವಿದ ಮಹೇಶಕುಮಾರ ಹೇರೂರ ಅವರಿಂದ ಸಂಗೀತ ಸಭೆ ನಡೆಯಿತು. ಬಳ್ಳಾರಿಯ ಶರಣ ಬಳಗದ ಕಲಾವಿದರಿಂದ ‘ಹೇಮರಡ್ಡಿ ಮಲ್ಲಮ್ಮ’ ನಾಟಕ ಪ್ರದರ್ಶನ ನಡೆಯಿತು. ಡಾ. ಬಿ.ಎಲ್. ಪಾಟೀಲ ಸ್ವಾಗತಿಸಿದರು. ಚನ್ನಮಲ್ಲದೇವರು ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಶಿವಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.