ADVERTISEMENT

ಅಕ್ಷರ ದಾಸೋಹ ಅವ್ಯವಸ್ಥೆಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:50 IST
Last Updated 24 ಫೆಬ್ರುವರಿ 2011, 9:50 IST

ಮುಂಡರಗಿ: ಸ್ಥಳೀಯ ಕೆಜಿಎಸ್ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಬುಧವಾರ ತಾಲ್ಲೂಕು ಅಕ್ಷರ ದಾಸೋಹದ ಅವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿದರು.ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಕೆಗೆ ದಿನನಿತ್ಯ ನೀಡಲಾದ ಆಹಾರ ಸಾಮಗ್ರಿಗಳ ನಿರ್ವಹಣಾ ಪುಸ್ತಕ (ಸ್ಟಾಕ್ ರಿಜಿಸ್ಟರ್)ವನ್ನು ತೋರಿಸುವಂತೆ ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲಿದ್ದ ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಆರ್.ಬಿ. ಮುಳ್ಳಳ್ಳಿ ಅವರನ್ನು ಕೇಳಿದರು.

ಸ್ಟಾಕ್ ರಿಜಿಸ್ಟರ್ ಮುಖ್ಯ ಅಡುಗೆದಾರರ ಬಳಿ ಇದ್ದು ಅವರು ಹೊರಗಡೆ ಹೋಗಿರುವುದಾಗಿ ತಿಳಿಸಿದರು. ಸ್ಟಾಕ್ ರಿಜಿಸ್ಟರ್ ಸಿಗದೇ ಹೋದಾಗ ಲೋಕಾಯುಕ್ತ ಅಧಿಕಾರಿ ಗಳು ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕ ಆರ್.ಬಿ.ಮುಳ್ಳಳ್ಳಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಮುಖ್ಯ ಶಿಕ್ಷಕರಿಗೆ ಹಾಗೂ ಮುಖ್ಯ ಅಡುಗೆದಾರರಿಗೆ ತಕ್ಷಣ ನೋಟಿಸ್ ನೀಡುವಂತೆ ಆದೇಶ ನೀಡಿದರು.

ವಿದ್ಯಾರ್ಥಿಗಳ ಊಟ ಮುಗಿದ ನಂತರವೂ ಅಡುಗೆ ಕೋಣೆಯಲ್ಲಿ ದೊರೆತ ಸುಮಾರು 6-7 ಕೆಜಿ ಅಕ್ಕಿಯ ವಿವರ ಲೋಕಾಯುಕ್ತರಿಗೆ ದೊರೆಯದಾಯಿತು.ವಿದ್ಯಾರ್ಥಿಗಳ ಶೌಚಾಲಯದ ಪಕ್ಕದಲ್ಲಿಯೇ ಅಡುಗೆ ಮನೆ ಹಾಗೂ ಶೌಚಾಲಯದ ಎದುರುಗಡೆಯೇ ವಿದ್ಯಾರ್ಥಿಗಳು ಊಟ ಮಾಡುತ್ತಿರು ವುದನ್ನು ಕಂಡ ಲೋಕಾಯುಕ್ತರು ತಕ್ಷಣ ಅಡುಗೆಮನೆ ಮತ್ತು ವಿದ್ಯಾರ್ಥಿಗಳ ಊಟ ಮಾಡುವ ಸ್ಥಳವನ್ನು ಬದಲಿಸುವಂತೆ ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕ ಹಾಗೂ ಮುಖ್ಯ ಶಿಕ್ಷಕರಿಗೆ ಆದೇಶ ನೀಡಿದರು.

ಅಡುಗೆ ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಕುಡಿಯಲು ಉಪಯೋಗಿಸುವ ನೀರಿನ ಟ್ಯಾಂಕ್‌ನಲ್ಲಿ ಕಸ, ಕಡ್ಡಿ ಹಾಗೂ ಹುಳುಗಳಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲೋಕಾಯುಕ್ತರು ತಕ್ಷಣ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸುವಂತೆ ತಿಳಿಸಿದರು.ಶಾಲಾ ಆವರಣ ಹಾಗೂ ಕೊಠಡಿ ಗಳ ಒಳಗೆ ಎಲ್ಲೆಂದರಲ್ಲಿ ಹಂದಿಗಳು ನಿರ್ಭಯವಾಗಿ ಅಡ್ಡಾಡುತ್ತಿದ್ದು ಅವು ಶಾಲಾ ಆವರಣದೊಳಗೆ ಬಾರದಂತೆ ಬೇಲಿ ಹಾಕಲು ಸೂಚಿಸಿದರು.

ತಾಲ್ಲೂಕು ಕೇಂದ್ರದಲ್ಲಿಯೆ ಅಕ್ಷರ ದಾಸೋಹ ಈ ರೀತಿ ಅವ್ಯವಸ್ಥೆಯಿಂದ ಇರಬೇಕಾದರೆ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಹೇಗಿರಬಹುದು ಎಂದು  ತರಾಟೆಗೆ ತೆಗೆದುಕೊಂಡರು.ಅಕ್ಷರ ದಾಸೋಹದ ಅವ್ಯವಸ್ಥೆ ಕುರಿತಂತೆ ತಾಲ್ಲೂಕಿನಾದ್ಯಂತ ದೂರು ಗಳು ಕೇಳಿ ಬರುತ್ತಿದ್ದು ತಕ್ಷಣ ಇದನ್ನು ಸರಿಪಡಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಲೋಕಾಯುಕ್ತ ಅಧಿಕಾರಿಗಳು ತಾ.ಪಂ.ನ ಸಾಮರ್ಥ್ಯ ಸೌಧದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.