ADVERTISEMENT

ಅಡ್ಡಪಲ್ಲಕ್ಕಿಯಲ್ಲಿ ವಚನಸಾರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 6:50 IST
Last Updated 19 ಫೆಬ್ರುವರಿ 2011, 6:50 IST
ಅಡ್ಡಪಲ್ಲಕ್ಕಿಯಲ್ಲಿ ವಚನಸಾರ ಮೆರವಣಿಗೆ
ಅಡ್ಡಪಲ್ಲಕ್ಕಿಯಲ್ಲಿ ವಚನಸಾರ ಮೆರವಣಿಗೆ   

ಡಂಬಳ: ಅಲ್ಲಿ ಅಡ್ಡ ಪಲ್ಲಕ್ಕಿಯ ಉತ್ಸವವಿತ್ತು. ಪಲ್ಲಕ್ಕಿಯ ಮೇಲೆ ಸರ್ವ ವೇಷಭೂಷಣಧಾರಿಯಾಗಿ ಸ್ವಾಮೀಜಿ ಕುಳಿತಿರಲಿಲ್ಲ. ಭಕ್ತರ ಜಯಘೋಷವೂ ಇಲ್ಲ. ಆದರೆ ಶರಣರ ವಚನಗಳನ್ನು ಒಳಗೊಂಡ ತಾಳೆ ಗರಿಯ ಕಟ್ಟುಗಳನ್ನು ಪಲ್ಲಕ್ಕಿಯಲ್ಲಿ ಇಡಲಾಗಿತ್ತು. ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅಡ್ಡಪಲ್ಲಕ್ಕಿಯ  ಮುಂದೆ ನಡೆದುಕೊಂಡೇ ಸಾಗಿದರು.

 ಇಂತಹ ಅಪರೂಪದ ದೃಶ್ಯಗಳು ಕಂಡು ಬಂದದ್ದು ಡಂಬಳದಲ್ಲಿ ಶುಕ್ರವಾರ ತೋಂಟದಾರ್ಯ ಜಾತ್ರೆಯ ಅಂಗವಾಗಿ ನಡೆದ ರಥೋತ್ಸವದಲ್ಲಿ. ವಚನ ಸಾರವನ್ನು ಹೊತ್ತ ಅಡ್ಡಪಲ್ಲಕ್ಕಿ ಊರಿನ ತುಂಬಾ ಸಾಗಿತು. ಇದರೊಂದಿಗೆ ಝಾಂಜ್ ಮೇಳ, ಡೊಳ್ಳು ಕುಣಿತ, ನಂದಿ ಕೊಳ್ಳು, ಛತ್ರಿ, ಚಾಮರ, ಷಟ್‌ಸ್ಥಳ ಧ್ವಜಗಳು ಒಟ್ಟಾಗಿ ಸಾಗಿದವು. ತಮ್ಮ ಬೀದಿಗೆ ಸ್ವಾಮೀಜಿ ಬಂದಾಗ ಭಕ್ತರು ಅವರ ಪಾದಕ್ಕೆ ಪೂಜೆ ಮಾಡಿ, ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ಸಂಜೆ ಸೂರ್ಯನು ಪಶ್ಚಿಮದ ಕಡೆ ಮುಖ ಮಾಡಿದ ನಂತರ ಮಘಾ ನಕ್ಷತ್ರದಲ್ಲಿ ತೋಂಟದಾರ್ಯ ತೇರಿಗೆ ಚಾಲನೆ ನೀಡಲಾಯಿತು. ಬಣ್ಣದ ವಸ್ತ್ರ, ಕಾಷಾಯ ಧ್ವಜ, ವಿವಿಧ ಹೂವುಗಳಿಂದ ಅಲಂಕೃತಗೊಂಡಿದ್ದ ತೇರು ಸಿದ್ಧಲಿಂಗೇಶ್ವರ ಉತ್ಸವ ಮೂರ್ತಿಯನ್ನು ಹೊತ್ತು ಸಾಗಿತು. ತೇರಿಗೆ ಭಕ್ತರು ಖರ್ಜೂರವನ್ನು ಎಸೆದು ಭಕ್ತಿ ಸಮರ್ಪಿಸಿದರು. ಕೊರ್ಲಹಳ್ಳಿಯವರ ತೋಟದಲ್ಲಿ ಇರುವ ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ತೇರು ಮತ್ತೆ ಶ್ರೀ ಮಠಕ್ಕೆ ವಾಪಸ್ಸಾಗಿ ಸಮಾಪ್ತಿಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.