ADVERTISEMENT

ಅಪರೂಪದ ರಂಗ ಕಲಾವಿದ ಗವಿಸಿದ್ದಪ್ಪ

ಬಯಲಾಟ, ದೊಡ್ಡಾಟ ಕಲೆಗಳ ತವರು ಮುಂಡರಗಿಯ ಕೋಟೆ ಭಾಗ

ಕಾಶಿನಾಥ ಬಿಳಿಮಗ್ಗದ
Published 27 ಮಾರ್ಚ್ 2018, 7:34 IST
Last Updated 27 ಮಾರ್ಚ್ 2018, 7:34 IST
ಗವಿಸಿದ್ದಪ್ಪ ಸಿದ್ಲಿಂಗಪ್ಪ ಬಳ್ಳಾರಿ
ಗವಿಸಿದ್ದಪ್ಪ ಸಿದ್ಲಿಂಗಪ್ಪ ಬಳ್ಳಾರಿ   

ಮುಂಡರಗಿ: ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ನವ ಮಾಧ್ಯಮಗಳ ಅಬ್ಬರದ ನಡುವೆಯೂ ಮುಂಡರಗಿ ಪಟ್ಟಣದ ಕೋಟೆ ಭಾಗದ ಹಿರಿಯ ರಂಗ ಕಲಾವಿದ, 63 ವರ್ಷದ ಗವಿಸಿದ್ದಪ್ಪ ಸಿದ್ಲಿಂಗಪ್ಪ ಬಳ್ಳಾರಿ ರಂಗಾಸಕ್ತರ ಹೃದಯದಲ್ಲಿ ಬಲವಾಗಿ ನೆಲೆಯೂರಿದ್ದಾರೆ. ಕಳೆದ ನಾಲ್ಕೂವರೆ ದಶಕಗಳಿಂದ ಬಯಲಾಟ, ದಪ್ಪಿನಾಟ, ದೊಡ್ಡಾಟಗಳ ಮೂಲಕ, ಜನರನ್ನು ರಂಜಿಸುತ್ತಾ ಕಲೆಯ ಉಳಿವಿಗೆ ಶ್ರಮಿಸಿದ್ದಾರೆ.

ಗವಿಸಿದ್ದಪ್ಪ ಬಳ್ಳಾರಿ ಓದಿದ್ದು ಮೂರನೆಯ ತರಗತಿ. ಹಬ್ಬ, ಜಾತ್ರೆ ಸಂದರ್ಭದಲ್ಲಿ ಓಣಿಯಲ್ಲಿ ಹಿರಿಯರು ಬಯಲಾಟ, ದೊಡ್ಡಾಟ ಆಡುತ್ತಿದ್ದರು. ಅದನ್ನು ನೋಡುತ್ತಾ ಬೆಳೆದ ಗವಿಸಿದ್ದಪ್ಪ 20ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿದರು.

ಕಲಾವಿದರಾಗಿ ರಂಗ ಪ್ರವೇಶ ಮಾಡಿದ ಅವರು, ನಂತರ ಬಯಲಾಟ ಹಾಗೂ ದೊಡ್ಡಾಟದ ಹಿನ್ನೆಲೆ ಗಾಯನ, ಮದ್ದಲೆ ಬಡಿತ, ದಪ್ಪಿನ ಬಡಿತದಲ್ಲಿ ಪರಿಣತಿ ಪಡೆದುಕೊಂಡರು. ಪಾತ್ರ ನಿರ್ವಹಣೆಗೆ ಸೀಮಿತವಾಗಿದ್ದ ಅವರ ಕಲಾಸೇವೆ ಬಯಲಾಟದ ವಿವಿಧ ಪ್ರಕಾರಗಳಿಗೆ ವಿಸ್ತರಿಸಿತು.

ADVERTISEMENT

ಕಳೆದ 4 ದಶಕಗಳಲ್ಲಿ ಗವಿಸಿದ್ದಪ್ಪನವರು ಕುರುಕ್ಷೇತ್ರ, ಸತ್ಯ ಹರಿಶ್ಚಂದ್ರ, ಯುದ್ಧ ಕಾಂಡ, ಪ್ರಮೀಳಾ ರಾಜ್ಯ, ಚಿತ್ರಸೇನ, ದ್ರೌಪದಿ ವಸ್ತ್ರಾಪಹರಣ, ಬಸವಂತ-–ಬಲವಂತ, ನೀಲಕಂಠ ಹೀಗೆ ಹಲವು ದೊಡ್ಡಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅನೇಕ ಕಲಾವಿದರಿಗೆ ದೊಡ್ಡಾಟ ಕಲಿಸಿ, ಗುರುವಾಗಿದ್ದಾರೆ.

ಗವಿಸಿದ್ದಪ್ಪನವರ ಪ್ರಭಾವಕ್ಕೆ ಒಳಗಾದ ಅವರ ತಮ್ಮ ಈರಪ್ಪ ಬಳ್ಳಾರಿ ಹಾಗೂ ಅವರ ಮಗ ಬೀರಪ್ಪ ಬಳ್ಳಾರಿ ಈಗ ಬಯಲಾಟದ ಉತ್ತಮ ಕಲಾವಿದರು. ಮುಂಡರಗಿಯ ಕೋಟೆ ಭಾಗವು ದೊಡ್ಡಾಟ ಹಾಗೂ ರಂಗ ಕಲಾವಿದರ ತವರೂರಾಗಿದೆ.

ಕೋಟೆ ಭಾಗದ ಅಂದಪ್ಪ ಹಂದ್ರಾಳ, ಕುಮಾರ ಹಡಗಲಿ, ಹೊನಕೇರೆಪ್ಪ ಮಾದಣ್ಣವರ, ದೇವಪ್ಪ ಚಿಕ್ಕಣ್ಣವರ, ಲಕ್ಷಪ್ಪ ಬಾಗಳಿ, ಮಾರುತೆಪ್ಪ ಅಗಸಿಮುಂದಿನ, ಗುಡದಪ್ಪ ಚಿಕ್ಕಣ್ಣವರ, ಮಂಜಪ್ಪ ರಾಮೇನಹಳ್ಳಿ, ದೇವರಾಜ ರಾಮೇನಹಳ್ಳಿ, ಹುಚ್ಚಪ್ಪ ಕುರಿ, ಬಸವರಾಜ ಕುರಿ, ಕನಕಪ್ಪ ಬಳ್ಳಾರಿ, ಪರಶುರಾಮ ಹಟ್ಟಿ ಇಂದು ಬಯಲಾಟದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ.

‘ಗವಿಸಿದ್ದಪ್ಪ ಅವರಂತಹ ಅದ್ಭುತ ಹಿನ್ನೆಲೆ ಗಾಯಕರು ಮತ್ತು ಕಲಾವಿದರು ಇಂದು ಅಪರೂಪವಾಗುತ್ತಿದ್ದು, ಯುವಕರು ರಂಗಾಸಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎನ್ನುತ್ತಾರೆ ಕೋಟೆ ಭಾಗದ ಮಂಜುನಾಥ ಇಟಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.