ADVERTISEMENT

ಅಭಿವೃದ್ಧಿಗಾಗಿ ಮರಕಡಿಯುವುದು ಅರ್ಥವಿಲ್ಲದ್ದು

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 9:10 IST
Last Updated 3 ಜುಲೈ 2012, 9:10 IST

ಅಕ್ಕಿಆಲೂರ: ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿದುರುಳಿಸುತ್ತಿರುವುದು ಅರ್ಥವಿಲ್ಲದ್ದು. ನೈಸರ್ಗಿಕ ಸಂಪತ್ತನ್ನು ನಾಶಪಡಿಸಿ ಅಭಿವೃದ್ಧಿ ನಡೆಸುವ ಅಗತ್ಯ ವಿಲ್ಲ ಎಂದು ಎಚ್.ಜಿ.ಮಾವಿನತೋಪ ಇಲ್ಲಿ ಹೇಳಿದರು.

ಇಲ್ಲಿಗೆ ಸಮೀಪವಿರುವ ಬ್ಯಾತನಾಳ ಗ್ರಾಮದಲ್ಲಿ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ, ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ರಾಣೆ ಬೆನ್ನೂರಿನ ಸ್ನೇಹಾ ಗ್ರಾಮೀಣಾ ಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಸುಸ್ಥಿರ ಜೀವನಕ್ಕೆ ಅರಣ್ಯಗಳು ಎಂಬ ವಿಷಯದ ಕುರಿತಾಗಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.

ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು  ನೈಸರ್ಗಿಕ ಸಂಪತ್ತು ರಕ್ಷಣೆಯಾದಾಗ ಮಾತ್ರ ಅಭಿವೃದ್ಧಿ ಸುಲಭವಾಗಲಿದೆ.  ಮಳೆ ಸುರಿದು ರೈತ ಸಮೂಹ ಉತ್ತಮ ಬೆಳೆ ಪಡೆಯು ವಂತಾದರೆ ದೇಶದ ಆರ್ಥಿಕ ಸ್ಥಿತಿಗತಿ ಸುಧಾರಣೆ ಕಾಣಲಿದೆ ಎಂದು ಹೇಳಿದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಸ್ನೇಹಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಕೆ.ಎನ್.ಲತಾ ಮಾತ ನಾಡಿ, ಪ್ರಮುಖವಾಗಿ ನೈಸರ್ಗಿಕ ಸಂಪತ್ತನ್ನು ಉಳಿಸಿ-ಬೆಳೆಸಿ ಅಭಿಯಾನ ವನ್ನು ಗ್ರಾಮೀಣ ಪ್ರದೇಶ ದಲ್ಲಿ ಕೈಗೊಳ್ಳುವ ಉದ್ದೇಶದಿಂದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ರೈತರಲ್ಲಿ ಜಾಗೃತಿಯನ್ನು ಉಂಟು ಮಾಡುವ ಮೂಲಕ ಪರಿಸರ ಸಂರಕ್ಷಣೆ ಕುರಿತಾಗಿ ಅರಿವು ಮೂಡಿಸುವಲ್ಲಿ ತಜ್ಞರಿಂದ ಉಪನ್ಯಾಸ ಒದಗಿಸ ಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರೈತ ನಾಯಕ ಕರಿಯಪ್ಪ ದಿಬ್ಬಣ್ಣನವರ ಮಾತನಾಡಿ, ಪರಿಸರ ನಾಶವನ್ನು ತಡೆಗಟ್ಟದೇ ಹೋದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಹದಗೆಡುವ ಆತಂಕವಿದೆ. ಪರಿಸರ ನಾಶದಿಂದಾಗುವ ಅನಾಹುತ ಗಳ ಕುರಿತು ಸಮುದಾಯದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗದ ಬಗ್ಗೆ ವಿಷಾದಿಸಿದರು.

ಮಾರುತಿ ರೈತಕೂಟದ ಅಧ್ಯಕ್ಷ ಶಂಭಣ್ಣ ಪೂಜಾರ ಸಂಕಿರಣವನ್ನು ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿ ಜಯಣ್ಣ ಹೇರೂರ, ಸ್ನೇಹಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಲೀಲಾ ಬ್ಯಾತನಾಳ, ಪ್ರಮುಖರಾದ ರಾಮಣ್ಣ ಬೊಮ್ಮೊಜಿ, ಜಯರಾವ್ ಬ್ಯಾತನಾಳ, ಪ್ರಧಾನಗುರು ಎಸ್.ಎಂ. ಗುರುವರ, ಶಿಕ್ಷಕ ಸೋಮಶೇಖರ ಕೆ., ಮೂಕಪ್ಪ ಸಣ್ಣಕಂಬಿ ಸೇರಿದಂತೆ ರೈತಕೂಟದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು  ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.