ADVERTISEMENT

ಅವ್ಯವಸ್ಥೆಯ ಆಗರವಾದ ಮಾದರಿ ಗೋಶಾಲೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 6:55 IST
Last Updated 12 ಜೂನ್ 2012, 6:55 IST

ಗಜೇಂದ್ರಗಡ: 1986ರಲ್ಲಿ ಎದುರಾದ ಭೀಕರ ಬರ ಪರಸ್ಥಿತಿಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ `ನಾಗೇಂದ್ರಗಡ ಗೋಶಾಲೆ~ ಪ್ರಸ್ತುತ ಬರದಲ್ಲಿ ಅಧಿಕಾರಿ ಗಳ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಪರಿಣಾಮ ಬರದ ಬವಣೆಯಿಂದ ಕಂಗೆಟ್ಟ ಕೃಷಿಕ ಜಾನುವಾರುಗಳನ್ನು ಗೋಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಬಹುತೇಕ ಕೃಷಿ ಪ್ರಧಾನ ಕುಟುಂಬಗಳೇ ನೆಲೆಸಿರುವ ರೋಣ ತಾಲ್ಲೂಕಿನಲ್ಲಿ ಕೇವಲ ಕೃಷಿಕ ಕುಟುಂಬಗಳು ಮಾತ್ರವಲ್ಲದೆ ಜಮೀನು ರಹಿತ ಕೃಷಿ ಕೂಲಿಕಾರ ಕುಟುಂಬಗಳು ಸಹ ಕನಿಷ್ಠ ಮೂರ ನ್ನಾಲ್ಕು ಜಾನುವಾರುಗಳ ಮೂಲಕ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿವೆ.  ಆದರೆ, 2011-12ನೇ ಸಾಲಿನಲ್ಲಿ ಎದುರಾದ ಭೀಕರದಿಂದ ತತ್ತರಿಸಿರುವ ತಾಲ್ಲೂಕಿನ ಜಾನುವಾರುಗಳ ಸಂರಕ್ಷಣೆಯ ದೃಷ್ಟಿಯಿಂದ 1986ರಲ್ಲಿ ಉಂಟಾದ ಬರ ಪರಿಸ್ಥಿತಿಯಲ್ಲಿ ತೆರೆಯಲಾಗಿದ್ದ ನಾಗೇಂದ್ರಗಡ ಗೋಶಾಲೆಯ ಸ್ಥಳದಲ್ಲಿಯೇ 2011ರ ಡಿಸೆಂಬರ್ 30ಕ್ಕೆ ಪ್ರಸ್ತುತ ಗೋಶಾಲೆಯನ್ನು ಆರಂಭಿಸಲಾಯಿತು.

2011ರ ಡಿಸೆಂಬರ್ ತಿಂಗಳಲ್ಲಿ 133 ಜಾನುವಾರುಗಳನ್ನು ಹೊಂದಿದ್ದ ಗೋ ಶಾಲೆಗೆ ಪ್ರಸ್ತುತ ಕೃಷಿ ವರ್ಷದ ಮುಂಗಾರು ಹಂಗಾಮಿನ ಪ್ರಮುಖ ಮಳೆ `ರೋಹಿನಿ~ ಸಂಪೂರ್ಣ ಕೈಕೊ ಟ್ಟಿದೆ. ಈ ಹಿನ್ನೆಲೆಯಲ್ಲಿ 2012-13ನೇ ಸಾಲಿನಲ್ಲಿಯೂ ಭೀಕರ ಬರದ ಲಕ್ಷಣಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಲ್ಲಿ ಗೋಶಾಲೆಗೆ 16 ಜಾನುವಾರುಗಳು ಹೆಚ್ಚುವರಿ ಯಾಗಿ ಸೇರ್ಪಡೆಗೊಂಡಿವೆ.

ADVERTISEMENT

ಇಕ್ಕಟಾದ ಶೆಡ್ಡು: ಸದ್ಯ ಗೋಶಾಲೆಯಲ್ಲಿ 4 ಶೆಡ್ಡುಗಳಿವೆ. ಈ ಶೆಡ್ಡುಗಳು ಜಾನುವಾರುಗಳ ಸಂಖ್ಯೆಗೆ ಹೋಲಿಸಲಾಗಿ ಶೆಡ್ಡುಗಳು ತೀರಾ ಇಕ್ಕಟ್ಟಾಗಿವೆ. ಹೀಗಾಗಿ ಜಾನುವಾರುಗಳಿಗೆ ಮಲಗಲು ಸಾಧ್ಯವಾಗುತ್ತಿಲ್ಲ.
ಬಯಲು ಜಾಗೆಯಲ್ಲಿ ಜಾನುವಾರುಗಳನ್ನು ಕಟ್ಟ ಲಾಗುತ್ತಿದೆ. ಜಾನುವಾರುಗಳ ನಿರ್ವಹಣೆಗಾಗಿ 7 ಜನ ಗೋಪಾಲರಿದ್ದಾರೆ. ರೋಗಗ್ರಸ್ಥ ಜಾನುವಾರುಗಳಿಗೆ ಪ್ರತ್ಯೇಕ ಶೆಡ್ಡು ನಿರ್ಮಿಸಿಲ್ಲ. ಪಶುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿಗಳು ಗೋಶಾಲೆಯಲ್ಲಿ ಇರೋದಿಲ್ಲ. ಅಗತ್ಯ ಹೊಟ್ಟು ಮೇವಿನ ವ್ಯವಸ್ಥೆಯಿಲ್ಲ.

ಕೇವಲ ಜೋಳದ ಮೇವು ಇದೆ. ಇದನ್ನು ಹೊರತು ಪಡಿಸಿದರೆ, ಜಾನುವಾರುಗಳ ಸಂರಕ್ಷಣೆಗೆ ಅಗತ್ಯವಿರುವ ಹೊಟ್ಟು, ಬೆಲ್ಲ, ಹತ್ತಿಕಾಳು, ಹಿಂಡಿ, ಲವನಾಂಶ ಕಲ್ಲುಗಳು ನೋಡಲು ಸಹ ಇಲ್ಲದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿ ಎಂದು ರವೀಂದ್ರ ಹೊನ್ನವಾಡ ದೂರಿದ್ದಾರೆ.

ಜಾನುವಾರುಗಳಿಗೆ ಹೊಟ್ಟು ಮೇವು ಹಾಕುವ ನಿಟ್ಟಿನಲ್ಲಿ ನಿರ್ಮಿಸಲಾದ ತೊಟ್ಟಿನ ತೊಟ್ಟಿಗಳಲ್ಲಿ ಬೀರುಕು ಕಾಣಿಸಿಕೊಂಡಿವೆ. ಪರಿಣಾಮ ಜಾನುವಾರುಗಳು ತಿನ್ನುವ ಮೇವಿನಲ್ಲಿ ಮಣ್ಣು, ಉಸುಕು ಸೇರಿಕೊಳ್ಳುತ್ತಿದೆ. ಇದರಿಂದಾಗಿ ಜಾನುವಾರುಗಳು ಮೇವನ್ನು ತಿನ್ನಲು ಹಿಂದೆಟ್ಟು ಹಾಕುತ್ತಿವೆ. ಹಸಿವಿನಿಂದ ಬಳಲುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಆದರ್ಶದ ಕನಸು ನನಸಾಗಲಿಲ್ಲ: 1986 ರಲ್ಲಿ ಅಂದಿನ ಶಾಸಕ ಜ್ಞಾನದೇವ ದೊಡ್ಡಮೇಟಿ ಅವರ ವಿಶೇಷ ಕಾಳಜಿಯಿಂದಾಗಿ ರಾಜ್ಯಕ್ಕೆ ಮಾದರಿಯಾಗಿತ್ತು.

ಅಂದಿನ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರು ಗೋ ಶಾಲೆಯ ವ್ಯವಸ್ಥೆ ಹಾಗೂ ದೊಡ್ಡ ಮೇಟಿ ಅವರ ಕಾರ್ಯವೈರಿಯನ್ನು ಕೊಂಡಾಡಿದ್ದರು. ಬಳಿಕ 2003ರಲ್ಲಿ ಮತ್ತೆ ಬರ ಪರಿಸ್ಥಿತಿ ಎದುರಾಯಿತು.

ಆಗಲೂ ಜಾನುವಾರುಗಳ ಸಂಕಷ್ಟಕ್ಕೆ ಗೋಶಾಲೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಸದ್ಯ ಬರದಲ್ಲಿ 86ರ  ಆದರ್ಶ ಗೋಶಾಲೆಯ ಕನಸು ಸಾಕಾರಗೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ನಿರ್ಲಕ್ಷ್ಯದಿಂದಾಗಿ ಗೋಶಾಲೆ ಅವ್ಯವಸ್ಥೆಯ ಆಗರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.