ADVERTISEMENT

ಇಲ್ಲಿದ್ದಾರೆ ಸಾಕು ಪ್ರಾಣಿಗಳ ನಿಜವಾದ ತಾಯಿ!

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 8:55 IST
Last Updated 22 ಫೆಬ್ರುವರಿ 2011, 8:55 IST

ಹೊಳೆಆಲೂರ(ರೋಣ): ಹೆತ್ತ ತಂದೆ ತಾಯಿಗಳನ್ನೇ ಮನೆಯಿಂದ ಹೊರಗೆ ಹಾಕುತ್ತಿರುವ ಹಾಗೂ ಹೆತ್ತ ಮಕ್ಕಳನ್ನೇ ಕತ್ತು ಹಿಸುಕುವ ಇಂದಿನ ದಿನಗಳಲ್ಲಿ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಮಗಳ ಅಗಲಿಕೆಯ ನೋವನ್ನು ಮರೆಯಲು ನಾಯಿ ಮತ್ತು ಬೆಕ್ಕುಗಳನ್ನು ಸಾಕಿ ಸಲುಹಿ ಅವುಗಳೇ ತನ್ನ ಒಡಹುಟ್ಟಿದ ಮಕ್ಕಳು ಎನ್ನುವ ರೀತಿಯಲ್ಲಿ ಸಾಕುತ್ತಿರುವ ದೃಶ್ಯ ಹೊಳೆಆಲೂರ ಗ್ರಾಮದಲ್ಲಿ ಪ್ರತಿನಿತ್ಯ ಕಾಣಸಿಗುತ್ತದೆ.

ಗ್ರಾಮದ ಬಜಾರದಲ್ಲಿ ಉಪ ಜೀವನಕ್ಕಾಗಿ ಚಹಾ ಅಂಗಡಿಯನ್ನು ಹೊಂದಿರುವ ದ್ಯಾಮವ್ವ ಯಲ್ಲಪ್ಪ ಐಹೊಳ್ಳಿ ಎಂಬ ಮಹಿಳೆಯೇ ಪ್ರಾಣಿಗಳನ್ನೇ ಮಕ್ಕಳೆಂದು ಭಾವಿಸಿ ಅವುಗಳ ನಿತ್ಯ ಕಾಳಜಿ ಪೋಷಣೆ ಭಾರವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಮಹಿಳೆಯಾಗಿದ್ದಾಳೆ.

ಇವಳ ಪತಿ ಯಲ್ಲಪ್ಪ ಮಾರಕ ಕ್ಯಾನ್ಸರ ಕಾಯಿಲೆಯಿಂದ ಬಳಲುತ್ತಿದ್ದ ಗಂಡನ ಚಿಕಿತ್ಸೆಗಾಗಿ ಪತ್ನಿ ಲಕ್ಷ ಗಟ್ಟಲೆ ಹಣವನ್ನು ಸಾಲಮಾಡಿ ಚಿಕಿತ್ಸೆ ಒದಗಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದರು. ಇದೇ ವೇಳೆಗೆ ಇವಳು ಸಾಕಿಕೊಂಡಿದ್ದ ಸಾಕು ಮಗಳು ಅಕಾಲಿಕ ಮರಣ ಹೊಂದಿದಳು ಪತಿ ಹಾಗೂ ಮಗಳ ಅಗಲಿಕೆಯ ನೋವು ಮರೆಯಲು ಈ ಮಹಿಳೆ ತನ್ನ ಸಂಗಾತಿಗಳಾಗಿ ಆಪ್ತ ಜೀವಿಗಳಾಗಿ ಇರಲಿ ಎನ್ನುವ ಉದ್ದೇಶದಿಂದ ಬೆಕ್ಕು, ನಾಯಿಯನ್ನು ಸಾಕಿದಳು ಇವುಗಳು ಸಹ ಬೆಕ್ಕು ನಾಯಿ ವರ್ತನೆಗೆ ಅನುಗುಣವಾಗಿ ವರ್ತಿಸದೆ ಎರಡು ಒಂದೇ ತಟ್ಟಿಯಲ್ಲಿ ಆಹಾರವನ್ನು ಹಂಚಿಕೊಳ್ಳುತ್ತಿರುವ ಸನ್ನಿವೇಶ ಪರಸ್ಪರ ಕಚ್ಚಾಡುವ ಮಾನವ ಜನಾಂಗವು ಸಹ ನಾಚಿಸುವಂತೆ ಮಾಡುತ್ತದೆ.

ತಾನು ಸಾಕಿದ ನಾಯಿ ಬೆಕ್ಕಿನ ಬಗ್ಗೆ ಅಪಾರ ಮಮಕಾರ ಹೊಂದಿರುವ ದ್ಯಾಮವ್ವ ಅವುಗಳಿಗೆ ನಿಯಮಿತವಾಗಿ ಆಹಾರವನ್ನು ಪೂರೈಸುತ್ತಾಳೆ ಪ್ರತಿ ನಿತ್ಯ ಮುಂಜಾನೆ ಒಂದು ಲೀಟರ್ ಹಾಲು ಇಡ್ಲಿ ಹಾಗೂ ಪುರಿಯನ್ನು ಹಾಕುತ್ತಾಳೆ, ಮಧ್ಯಾಹ್ನ ಅವಧಿಯಲ್ಲಿ ಅನ್ನ ಬೇಯಿಸಿ ಹಾಕುತ್ತಾಳೆ, ಪ್ರತಿ ರಾತ್ರಿ ಊಟಕ್ಕೆಂದು ಎರಡು ಪ್ರಾಣಿಗಳಿಗೆ ಸಾಕಾಗುವಷ್ಟು ಕೋಳಿ ಮಾಂಸ ನೀಡುತ್ತಾಳೆ ಇವುಗಳು ಸಹ ದ್ಯಾಮವ್ವ ಊಟಕ್ಕೆ ನೀಡಿದಾಗ ಮಾತ್ರ ಆಹಾರ ಸೇವಿಸಿದರೆ ಇನ್ನುಳಿದ ಅವಧಿಯಲ್ಲಿ ಚಹಾ ಅಂಗಡಿಯಲ್ಲಿ ಸಾಕಷ್ಟು ಆಹಾರ ತಿನಿಸುಗಳು ಇದ್ದರೂ ಏನೂ ಮಾಡುವುದಿಲ್ಲ.
ಅವುಗಳಿಗೆ ಏನಾದರು ಆರೋಗ್ಯದ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸುತ್ತಾಳೆ.
ಬಸವರಾಜ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.