ADVERTISEMENT

ಉದ್ಘಾಟನೆ ಭಾಗ್ಯ ಯಾವಾಗ ?

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 8:57 IST
Last Updated 26 ಡಿಸೆಂಬರ್ 2017, 8:57 IST

ಮುಳಗುಂದ: ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಸಮುದಾಯ ಭವನದ ಕಾಮಗಾರಿ ಆಮೆವೇಗದಲ್ಲಿ ಸಾಗಿದೆ. ಆದ್ದರಿಂದ ಕಟ್ಟಡದ ಉದ್ಘಾಟನೆ ಭಾಗ್ಯ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

2008–09ರ ಎಸ್.ಎಫ್‌.ಸಿ ಅನುದಾನದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ₹ 23.07 ಲಕ್ಷ ವೆಚ್ಚದಲ್ಲಿ ಭವನ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಎರಡ್ಮೂರು ವರ್ಷ ಕಳೆದರೂ ಕೆಲಸ ಪ್ರಾರಂಭವಾಗಲೇ ಇಲ್ಲ. ಬಳಿಕ ಗುತ್ತಿಗೆದಾರ ಕೆಲಸ ಆರಂಭಿಸಿದರೂ ಅಪೂರ್ಣವಾಯಿತು. ಕೆಲ ದಿನಗಳಲ್ಲಿ ಪಟ್ಟಣ ಪಂಚಾಯ್ತಿ ಕೂಡ ಕಟ್ಟಡದ ಯೋಜನೆ ಬದಲಿಸಿತು.

ಹೆಚ್ಚುವರಿ ಕೆಲಸ ಮಾಡಿಸುವ ಸಲುವಾಗಿ 2013–14ನೇ ಸಾಲಿನಲ್ಲಿ ₹ 10 ಲಕ್ಷ ಮೊತ್ತದಲ್ಲಿ ಸ್ಲ್ಯಾಬ್ ವರೆಗೂ ಕೆಲಸ ಮುಗಿದಿದೆ. ಈಗ ಸಂಪೂರ್ಣ ಕಾಮಗಾರಿ ನಿರ್ವಹಣೆಗಾಗಿ 2016–17ನೇ ಸಾಲಿನಲ್ಲಿ ₹ 14.75 ಲಕ್ಷ ಮೊತ್ತದಲ್ಲಿ ಸಮುದಾಯ ಭವನದ ಸಂಪೂರ್ಣ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದಿದೆ. ಕಟ್ಟಡದ ಬಾಗಿಲು ಕೂಡ ಇಲ್ಲದ ಕಾರಣ ಈ ಸ್ಥಳ ಕುಡುಕರ ತಾಣವಾಗಿದೆ.

ADVERTISEMENT

‘ಕಟ್ಟಡ ಕಾಮಗಾರಿ ಆರಂಭಿಸಿದ ಹತ್ತು ವರ್ಷಗಳು ಆಗುತ್ತ ಬಂದರೂ ಇನ್ನೂ ಮುಗಿದಿಲ್ಲ. 2018ರ ಏಪ್ರಿಲ್‌ 14ರ ಒಳಗೆ ಕೆಲಸ ಮುಗಿಸಬೇಕು’ ಎಂದು ಡಿ.ಎಸ್‌.ಎಸ್‌. ಸಂಚಾಲಕ ರಮೇಶ ಮ್ಯಾಗೇರಿ ಆಗ್ರಹಿಸಿದ್ದಾರೆ.

ಕಟ್ಟಡ ನಿರ್ಮಾಣ ವಿಳಂಬವಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಮುಳಗುಂದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಡಿ.ಅಗಡಿ ‘ ಈ ಹಿಂದೆ ಇದ್ದ ಮೊತ್ತದಲ್ಲಿ ಕಾಮಗಾರಿ ನಿರ್ವಹಣೆ ಮಾಡಲಾಗಿತ್ತು. ನಡುವೆ ಕಟ್ಟಡದ ನೀಲ ನಕ್ಷೆ ಬದಲಿಸಲಾಯಿತು. ಈಗ ಮತ್ತೆ ಪೂರ್ಣ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ. ಒಂದುವಾರದಲ್ಲಿ ಕೆಲಸ ಆರಂಭವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.