ADVERTISEMENT

ಕಂಪನಿ ನಾಟಕಕ್ಕೆ ಪ್ರೇಕ್ಷಕರ ಕೊರತೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 9:20 IST
Last Updated 19 ಜೂನ್ 2011, 9:20 IST

ಗದಗ: ನಗರದ ತುಂಬೆಲ್ಲ ಸದ್ಯ ಸಂಚಾರಿ ಮೈಕುಗಳದ್ದೇ ಅಬ್ಬರ. `ಇಂದು ಈ ನಾಟಕ....ನೋಡಲು  ಮರೆಯದಿರಿ~ ಎಂಬ ಪ್ರಚಾರದ ಸದ್ದು. ಕಂಪನಿ ನಾಟಕಗಳ ಚಿತ್ತ ಸೆಳೆಯಲು ನಾನಾ ಕಸರತ್ತು. ಆದಾಗ್ಯೂ ಪ್ರೇಕ್ಷಕ ಮಹಾಶಯರು ನಾಟಕಗಳತ್ತ ಮನಸ್ಸು ಮಾಡಿಲ್ಲ ಎನ್ನುವುದು ಕಂಪನಿಗಳ ಕೊರಗು.

ಸಿನೆಮಾ ಗುಂಗಿನ ಈ ಕಾಲದಲ್ಲಿ ಗದುಗಿನ ನೆಲದಲ್ಲಿ ಕೆ.ಬಿ.ಆರ್. ಡ್ರಾಮಾ ಕಂಪನಿಯು ಡೇರೆ ನೆಟ್ಟು ನಾಟಕ ಪ್ರದರ್ಶನಕ್ಕೆ ಮುಂದಾಗಿದೆ. ಕಳೆದ ಎರಡು ತಿಂಗಳಿನಿಂದ ನೂರಾರು ಪ್ರದರ್ಶನ ನೀಡಿದೆ. ಪ್ರತಿ ನಿತ್ಯ ಸಂಜೆ 6.15 ಮತ್ತು ರಾತ್ರಿ 10ಕ್ಕೆ ಪ್ರದರ್ಶನವಿರುತ್ತದೆ, ವಾರಾಂತ್ಯಗಳಲ್ಲಿ ಮಧ್ಯಾಹ್ನ 2.45, ಸಂಜೆ 6.15 ಹಾಗೂ ರಾತ್ರಿ 10ಕ್ಕೆ ಪ್ರದರ್ಶನಗಳು ನಡೆಯುತ್ತವೆ. 83 ವರ್ಷಗಳ ಇತಿಹಾಸ ಹೊಂದಿರುವ ಕಂಪನಿಯ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ತಕ್ಕಮಟ್ಟಿನ ಪ್ರತಿಕ್ರಿಯೆ ದೊರೆಯುತ್ತಿಲ್ಲ. ಇದರಿಂದ ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ.

ನಗರದ ಡಿ.ಸಿ. ಕಚೇರಿ ಬಳಿ ಇರುವ ತಾತ್ಕಾಲಿಕ ರಂಗಮಂಟಪದಲ್ಲಿ ಕೆ.ಬಿ.ಆರ್. ಡ್ರಾಮಾ ಕಂಪನಿಯು ಈವರೆಗೆ `ಪೊಲೀಸನ ಮಗಳು, ಕಿಲಾಡಿ ರಂಗಣ್ಣ, ತಾಳಿ ಕಟ್ಟಿದರೂ ಗಂಡನಲ್ಲ, ಅಪ್ಪ ಹಿಂಗೆ ಮಗ ಹಂಗೆ, ಎಚ್ಚರ ತಂಗಿ ಎಚ್ಚರ~ ನಾಟಕಗಳನ್ನು ಪ್ರದರ್ಶಿಸಿದೆ.

`ಕಂಪನಿಯ ಇತಿಹಾಸದಲ್ಲಿ ಎರಡು ತಿಂಗಳ ಅವಧಿಯಲ್ಲಿ ಇಷ್ಟು ನಾಟಕಗಳನ್ನು ಪ್ರಯೋಗಿಸಿದ್ದು ಅಪರೂಪ. ಆದರೂ ಜನ ಮಾತ್ರ ಬರ್ತೀಲ್ಲ. ಒಂದು ಪ್ರದರ್ಶನಕ್ಕೆ ಕೇವಲ ಒಬ್ಬ ಪ್ರೇಕ್ಷಕ ಬಂದರೂ ನಾಟಕ ಪ್ರಯೋಗಿಸುತ್ತೇವೆ. ಇದು ನಮ್ಮ ಕಂಪನಿಯ ನಿಯಮ~ ಅಂತಾರೆ ಚಿಂದೋಡಿ ಕಿಶೋರಕುಮಾರ.

ಸದ್ಯ ನಾಟಕ ಪ್ರದರ್ಶನದಿಂದ ದಿನವೊಂದಕ್ಕೆ 4-5 ಸಾವಿರ ಸಂಗ್ರಹವಾಗುತ್ತಿದೆ. ಆದರೆ ಖರ್ಚೇ 8-10 ಸಾವಿರವಿದೆ. ಇದಲ್ಲದೆ ಕಂಪನಿಯ ಕಲಾವಿದರು, ತಂತ್ರಜ್ಞರು ಸೇರಿ 45 ಮಂದಿಗೆ ಊಟ-ವೇತನ ಸೇರಿಸಿ  ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ ಎನ್ನುವುದು ಅವರ ಅಂದಾಜು.

ನಾಟಕದೆಡೆಗೆ ಜನರನ್ನು ಸೆಳೆಯುವ ಸಲುವಾಗಿ ಪ್ರಚಾರವನ್ನೂ ಕಂಪನಿ ಕೈಗೊಂಡಿದೆ. ಎರಡು ವಾಹನಗಳಿಗೆ ಮೈಕು ಕಟ್ಟಿ ಕೂಗುತ್ತ ಜನರನ್ನು ರಂಗಭೂಮಿಯತ್ತ ಕರೆತರುವ ಪ್ರಯತ್ನ ನಡೆದಿದೆ.

ಇನ್ನೊಂದೆಡೆ, ಮಂಡಲಗೇರಿಯ ಶ್ರೀ ಗುರು ತೋಂಟದಾರ್ಯ ನಾಟ್ಯ ಸಂಘ ಸಹ ಕೆಲವು ತಿಂಗಳುಗಳಿಂದ ನಗರದಲ್ಲಿ ವಿವಿಧ ನಾಟಕಗಳ ಪ್ರದರ್ಶನ ನೀಡಿದೆ. ಆದಕ್ಕೂ ಪ್ರೇಕಕರ ಪ್ರತಿಕ್ರಿಯೆ ಅಷ್ಟಕ್ಕಷ್ಟೇ ಎನ್ನುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.