ADVERTISEMENT

ಕಟ್ಟಡ ಕಾಮಗಾರಿ ನೆನೆಗುದಿಗೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 10:40 IST
Last Updated 18 ಜನವರಿ 2011, 10:40 IST

ಗಜೇಂದ್ರಗಡ: ಇಲ್ಲಿಗೆ ಸಮೀಪದ ಸೂಡಿ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡವು ವರ್ಷಗಳು ಕಳೆದರೂ ಪೂರ್ಣಗೊಳ್ಳದೇ ನೆನೆಗುದಿಗೆ ಬಿದ್ದಿದೆ.ರೋಣ ತಾಲ್ಲೂಕಿನಲ್ಲಿ ಇರುವ ಏಕೈಕ ಸರ್ಕಾರಿ ಐ.ಟಿ.ಐ. ಕಾಲೇಜು ಎನ್ನುವ ಹೆಗ್ಗಳಿಕೆ ಹೊಂದಿರುವ ಸೂಡಿ ಐ.ಟಿ.ಐ. ಕಾಲೇಜು 1999ರಲ್ಲಿ ಅಂದಿನ ಶಾಸಕ ಶ್ರೀಶೈಲಪ್ಪ ಬಿದರೂರ ಅವರ ತವರು ನೆಲದ ಪ್ರೀತಿಯ ಸಸಿಯಾಗಿ ಆರಂಭಗೊಂಡಿತ್ತು.

ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಉದ್ಯೋಗದ ಆಶಾಕಿರಣವಾಗಿರುವ ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪನೆಯಾಗಿದ್ದರಿಂದ ಶೈಕ್ಷಣಿಕವಾಗಿ ವಂಚಿತವಾಗಿದ್ದ ಈ ಭಾಗದ ವಿದ್ಯಾರ್ಥಿ ಮತ್ತು ಪಾಲಕರಲ್ಲಿ ತೀವ್ರ ಸಂತಸ ತಂದಿತ್ತು.

ವಿದ್ಯುತ್ ಶಿಲ್ಪಿ, ವಿದ್ಯುನ್ಮಾನ ದುರಸ್ತಿಗಾರ ಮತ್ತು ಜೋಡಣೆಗಾರ ಎನ್ನುವ ಮೂರು ವಿಭಾಗಗಳನ್ನು ಹೊಂದಿರುವ ಈ ಕಾಲೇಜಿಗೆ ಸ್ವಂತ ಜಮೀನು ಇಲ್ಲದ್ದರಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಆದರೆ, ಗ್ರಾಮದ ಶಿಕ್ಷಣ ಪ್ರೇಮಿಗಳಾದ ಅಡಗತ್ತಿ ಕುಟುಂಬದವರು ತಮ್ಮೂರಿಗೆ ಬಂದಿರುವ ಸರ್ಕಾರದ ಯೋಜನೆ ಸದುಪಯೋಗ ಆಗಲಿ ಎನ್ನುವ ಉದ್ದೇಶದಿಂದ 2.11ಎಕರೆ ಭೂಮಿಯನ್ನು ದಾನದ ರೂಪದಲ್ಲಿ ಕೊಟ್ಟಿದ್ದರು. ಆ ಜಾಗದಲ್ಲಿ 50ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆಯೂ ದೊರೆಯಿತು.

ಅಂದುಕೊಂಡಂತೆ ಕಾಮಗಾರಿ ನಡೆದಿದ್ದರೆ ಇಂದು ನೂತನ ಕಟ್ಟಡದಲ್ಲಿ ವಿದ್ಯಾರ್ಥಿಗಳ ಪಾಠಗಳು ನಡೆಯಬೇಕಿತ್ತು. ಆದರೆ, ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎನ್ನುವ ಗಾದೆಯಂತೆ ಲೋಕೋಪಯೋಗಿ ಇಲಾಖೆಯ ಕುಂಭಕರ್ಣ ನಿದ್ದೆ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಕಟ್ಟಡ ಕಾರ್ಯ ಪೂರ್ಣವಾಗುತ್ತಿಲ್ಲ.

ಆರಂಭದಲ್ಲಿ ನಿರ್ಮಾಣದ ವೆಚ್ಚ 50ಲಕ್ಷ ರೂ. ಇದ್ದಿದ್ದು ನಂತರದಲ್ಲಿ ಸದ್ಯದ ಶಾಸಕ ಕಳಕಪ್ಪ ಬಂಡಿ ಅವರ ಆಸಕ್ತಿ ವಹಿಸಿ ಪ್ರಯೋಗಾಲಯ, ಗ್ರಂಥಾಲಯ, ಉಪಹಾರ ಕೊಠಡಿ, ಕ್ರೀಡಾಂಗಣ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಹೊಂದಿರುವ ಕಾಲೇಜು ಇದಾಗಲಿ ಎಂದು ರೂ. 1.5ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸುವಲ್ಲಿ ಶ್ರಮಿಸಿದರು. ಜೊತೆಗೆ ಇದೀಗ ಕಟ್ಟಡಕ್ಕೆ ಆರ್.ಸಿ.ಸಿ. ಬೆಡ್ ಬದಲಾಗಿ ಎ.ಸಿ.ಸೀಟ್ ಅಳವಡಿಸಲು ಹೆಚ್ಚವರಿಯಾಗಿ ಹಣ ಬಿಡುಗಡೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಆಸಕ್ತಿ ತೋರದಿರುವ ಕಾರಣದಿಂದ ಕಟ್ಟಡ ಕಾಮಗಾರಿ ನಡೆಯದೇ ನೆನೆಗುದಿಗೆ ಬಿದ್ದು, ಶಿಕ್ಷಣ ಪ್ರೇಮಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿದೆ.ನೂತನ ಕಟ್ಟಡದಲ್ಲಿ ಕುಳಿತು ಅಭ್ಯಾಸ ಮಾಡಬೇಕೆನ್ನುವ ಕಾಲೇಜಿನ ವಿದ್ಯಾರ್ಥಿಗಳ ಕನಸು ಕನಸಾಗಿಯೇ ಉಳಿದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.