ADVERTISEMENT

ಕಟ್ಟಿಗೆ ಮಾರುವವನ ಮಗನಿಗೆ ವೈದ್ಯನಾಗುವ ಕನಸು

​ಪ್ರಜಾವಾಣಿ ವಾರ್ತೆ
Published 4 ಮೇ 2018, 9:32 IST
Last Updated 4 ಮೇ 2018, 9:32 IST
ನರಗುಂದದ ಅಶ್ಫಾಕ್‌ ಮನಿಗಾರ ತಂದೆ– ತಾಯಿ ಜತೆ ಸಂತಸ ಹಂಚಿಕೊಂಡರು
ನರಗುಂದದ ಅಶ್ಫಾಕ್‌ ಮನಿಗಾರ ತಂದೆ– ತಾಯಿ ಜತೆ ಸಂತಸ ಹಂಚಿಕೊಂಡರು   

ನರಗುಂದ: ‘ಅಪ್ಪ ಕ್ಯಾನ್ಸರ್‌ ಪೀಡಿತ, ನಿತ್ಯ ಕಟ್ಟಿಗೆ ಕಡಿಯುವ ಕಾಯಕ. ನಾನು 7ನೇ ಕ್ಲಾಸ್‌ ಇದ್ದಾಗ, ಅಪ್ಪ ಆಸ್ಪತ್ರೆಯೊಳಗ ಇದ್ದ, ಆಗ ಅಲ್ಲಿಯ ವೈದ್ಯರು ನಮ್ಮನ್ನು ತಿರಸ್ಕಾರದಿಂದ ನೋಡಿದರು. ಮೊದಲ ನಾವು ಬಡವರು. ಅದನ್ನು ನೋಡಿದ ನನಗೆ ನಾನು ವೈದ್ಯನಾಗಲೇಬೇಕೆಂಬ ಸಂಕಲ್ಪ ಮಾಡಿದೆ. ಆದ್ದರಿಂದಲೇ ಪಿಯುಸಿಯಲ್ಲಿ ವಿಜ್ಞಾನ ಪ್ರವೇಶ ಪಡೆದು ಎರಡನೇ ವರ್ಷದಲ್ಲಿ ಹೆಚ್ಚಿನ ಅಂಕ ಗಳಿಸಿದ್ದೇನೆ.’

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಶ್ಫಾಕ್‌ ಮನಿಗಾರ ಹೇಳಿದ ಮಾತು ಇತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಯಾಗಿದೆ.

ಅಶ್ಫಾಕ್‌ ಮನಿಗಾರ ವಿಜ್ಞಾನ ವಿಭಾಗದಲ್ಲಿ ಶೇ 94.05 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಗಣಿತದಲ್ಲಿ 100ಕ್ಕೆ 100 ಅಂಕ ಗಳಿಸಿದ್ದು ಭೌತವಿಜ್ಞಾನಕ್ಕೆ 91, ರಸಾಯನ ವಿಜ್ಞಾನಕ್ಕೆ 99, ಜೀವ ವಿಜ್ಞಾನಕ್ಕೆ 98, ಕನ್ನಡಕ್ಕೆ 92 ಹಾಗೂ ಇಂಗ್ಲಿಷ್‌ಗೆ 87 ಸೇರಿದಂತೆ ಒಟ್ಟು 567 (ಶೇ 94.5) ಅಂಕ ಗಳಿಸಿದ್ದಾರೆ.

ADVERTISEMENT

ಸಂಕಷ್ಟದ ಜೀವನ: ಇವರ ತಂದೆ ಮಗತುಮಸಾಬ್ ಅನಾರೋಗ್ಯದ ನಡುವೆಯೇ ನಿತ್ಯ ಕಟ್ಟಿಗೆ ಕಡಿದು ಮಾರುವ ವೃತ್ತಿಯಲ್ಲಿದ್ದಾರೆ. ’2–3 ದಿನಕ್ಕೊಮ್ಮೆ ಒಂದು ಕ್ವಿಂಟಲ್‌ ಕಟ್ಟಿಗೆ ಮಾರಿದರೆ ಹೆಚ್ಚು, ಅದರಿಂದಲೇ ನಮ್ಮ ಉಪಜೀವನ. ಆದರೆ ನಮ್ಮ ಮಕ್ಕಳಿಗೆ ಕೊರತೆಯಾಗದಂತೆ ಓದಸಾಕ ಎಲ್ಲ ಪ್ರಯತ್ನ ಮಾಡೇವಿ’ ಎಂದು ವಿಶ್ವಾಸದಿಂದ ಹೇಳಿದರು.

ತಾಯಿ ಶೈನಾಜಬಿ ಮನೆಗೆಲಸದೊಂದಿಗೆ ಜಾನುವಾರುಗಳನ್ನು ಸಾಕಿಕೊಂಡಿದ್ದು ‘ಮಗನ ಯಶಸ್ಸು ನಮಗೆ ಮುಖ್ಯ. ಇನ್ನಷ್ಟು ಅಂಕ ಗಳಿಸಬೇಕಿತ್ತು’ ಎಂದರು.

ಕನ್ನಡ ಮಾಧ್ಯಮ, ಸರ್ಕಾರಿ ಶಾಲೆ: ಅಶ್ಫಾಕ್‌ 1ರಿಂದ 10ನೇ ತರಗತಿಯವರೆಗೆ ಪಟ್ಟಣದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಉಳಿದ ವಿದ್ಯಾರ್ಥಿಗಳಿಗೆ ಪೈಪೋಟಿ ಒಡ್ಡಿದ್ದಾನೆ.

‘ನನಗೆ ಪಿಯು ವಿಜ್ಞಾನ ಓದುವಾಗ ಕಠಿಣ ಎಣಿಸಲಿಲ್ಲ’ ಎಂದರು.

ಬಸವರಾಜ ಹಲಕುರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.