ADVERTISEMENT

ಕಣ್ಮರೆಯಾಗುತ್ತಿರುವ ಕಳಕಾಪುರ ಕಂಬಳಿ

ಚಂದ್ರಕಾಂತ ಬಾರಕೇರ
Published 4 ಆಗಸ್ಟ್ 2013, 8:28 IST
Last Updated 4 ಆಗಸ್ಟ್ 2013, 8:28 IST

ಆಧುನಿಕ ವಿದ್ಯುತ್ ಮಗ್ಗಗಳ ಅಬ್ಬರದಲ್ಲಿ ತಲೆಮಾರುಗಳಿಂದ ತನ್ನದೇಯಾದ ವಿಶಿಷ್ಟತೆ ಹೊಂದಿ ರಾಷ್ಟದಾದ್ಯಂತ ಪ್ರಸಿದ್ಧಿ ಪಡೆದಿದ್ದ `ಕಂಬಳಿ' ಕೈಮಗ್ಗಗಳು ಗೌಣವಾಗಿವೆ. ಹತ್ತು-ಹಲವು ವಿಶಿಷ್ಟತೆಗೆ ಹೆಸರಾಗಿರುವ ಐತಿಹಾಸಿಕ ಕಳಕಾಪುರ ಗ್ರಾಮ ಕಂಬಳಿ ತಯಾರಿಕೆ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ-ಮಾನಗಳನ್ನು ಹೊಂದಿದೆ. ಆದರೆ, ಪ್ರಸ್ತುತ ವಿದ್ಯುತ್ ಮಗ್ಗಗಳ ಭರಾಟೆಯಿಂದಾಗಿ ಕಂಬಳಿ ಕೈಮಗ್ಗಗಗಳು ಕಣ್ಮರೆಯಾಗುತ್ತಿರುವುದು ಪ್ರಾಚೀನ ಕಂಬಳಿ ನೇಕಾರಿಕೆ ಹಿರಿಮೆಯ ವೈಭವಕ್ಕೆ ಭಾರಿ ಹಿನ್ನಡೆಯನ್ನು ಉಂಟು  ಕಳಕಾಪುರ ರೋಣ ತಾಲ್ಲೂಕಿನ ಕುಗ್ರಾಮ. ತಲೆಮಾರುಗಳಿಂದಲ್ಲೂ `ಕಂಬಳಿ' ತಯಾರಿಕೆಯನ್ನೇ ಮೂಲ ವೃತ್ತಿಯನ್ನಾಗಿಸಿಕೊಂಡು ವಿಶಿಷ್ಟ ರೀತಿಯಲ್ಲಿ ಕಂಬಳಿ ತಯಾರಿಸಿ ರಾಷ್ಟ್ರದ ಗಮನ ಸೆಳೆದ ಗ್ರಾಮದಲ್ಲಿನ ಕಂಬಳಿ ಕೈಮಗ್ಗಗಳು ಸರ್ಕಾರದ ಸೂಕ್ತ ಪ್ರೋತ್ಸಾಹದಿಂದ ವಂಚಿತಗೊಂಡು ಸದ್ದು ನಿಲ್ಲಿಸಿವೆ. 

ಕನಿಷ್ಠ ಸೌಲಭ್ಯಗಳಿಂದ ದೂರ ಉಳಿದಿರುವ ಕಳಕಾಪುರ 1,510 ಜನ ಸಂಖ್ಯೆ, 200 ಕುಟುಂಬಗಳನ್ನು ಹೊಂದಿದೆ. ಬಹುತೇಕ ಮುಸ್ಲಿಂ ಸಮುದಾಯದವರೇ ನೆಲೆಸಿರುವ ಗ್ರಾಮದಲ್ಲಿ ಜಾತ್ಯತೀತ ಮನೋಭಾವದಿಂದ ಕಂಬಳಿ ತಯಾರಿಸುತ್ತಾ ಬಂದಿರುವುದು ವಿಶೇಷ.

ಸ್ವಾತಂತ್ರ್ಯ ಪೂರ್ವದಿಂದಲ್ಲೂ ಕುರಿ ಸಾಕಾಣಿಕೆಯನ್ನೇ ಉಸಿರಾಗಿಸಿಕೊಂಡು ಬದುಕು ಸವೆಸುತ್ತಿರುವ ಈ ಗ್ರಾಮಸ್ಥರು ಅಂದಿನಿಂದ ಇಂದಿನ ವರೆಗೂ ಕಂಬಳಿ ತಯಾರಿಕೆಯಲ್ಲಿ ಪರಿಣಿತಿಯನ್ನು ಸಾಧಿಸಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ಪೂರ್ವ ಕಾಲದಿಂದ 2004 ರ ವರೆಗೆ 300 ಕ್ಕೂ ಅಧಿಕ ಕಂಬಳಿ ಕೈಮಗ್ಗಗಳನ್ನು ಹೊಂದಿದ್ದ ಗ್ರಾಮದಲ್ಲಿ ಇದೀಗ ಬೆರಳೆಣಿಕೆಯಷ್ಟು ಮಗ್ಗಗಳಿವೆ.

ಕೆ.ಜಿ ಕುರಿ ಉಣ್ಣಿಗೆ 40 ರೂಪಾಯಿ ದರವಿದೆ. ಒಂದು ಕಂಬಳಿ ತಯಾರಿಕೆಗೆ 1500 ರಿಂದ 1800 ರೂಪಾಯಿ ವರೆಗೆ ಖರ್ಚಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಕಂಬಳಿಯೊಂದಕ್ಕೆ 2,500 ರಿಂದ 3,000 ದರವಿದೆ.

ಪರಿಶ್ರಮ ಅವಶ್ಯ: `ಕಂಬಳಿ' ತಯಾರಿಕೆಗೆ ಸಮೂಹಿಕ ಪರಿಶ್ರಮ ಅನಿವಾರ್ಯ. ಕಂಬಳಿ ತಯಾರಿಕೆಗೆ ಕುಟುಂಬದ ಆರದಿಂದ ಏಳು ಜನರ ಪರಿಶ್ರಮದ ಅಗತ್ಯವಿರುತ್ತದೆ. ಕಂಬಳಿ ತಯಾರಿಕೆಯನ್ನೇ ನೆಚ್ಚಿಕೊಂಡಿದ್ದ ಕಳಕಾಪುರ ಗ್ರಾಮಸ್ಥರು ತಲೆಮಾರುಗಳಿಂದಲ್ಲೂ ಕಂಬಳಿ ತಯಾರಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು. ಪರಿಣಾಮ ಮಕ್ಕಳಿಗೆ ಕನಿಷ್ಠ ಶಿಕ್ಷಣ ಕೊಡಿಸದೆ ಕಂಬಳಿ ತಯಾರಿಕೆಯಲ್ಲಿ ತೊಡಗಿಸಿದ್ದಾರೆ.

ಶುಭದ ಸಂಕೇತ `ಕಂಬಳಿ':ಉತ್ತರ ಕರ್ನಾಟಕದ ಜನತೆ ವಿವಾಹ, ನಿಶ್ಚಿತಾರ್ಥ, ಮುಂಜಿ ಹೀಗೆ ಯಾವುದೇ ಶುಭ ಸಮಾರಂಭಗಳಿರಲ್ಲಿ ಅಲ್ಲಿ ಅತಿ ಮುಖ್ಯವಾಗಿ ಕಂಬಳಿಯನ್ನು ಬಳಕೆ ಮಾಡಲಾಗುತ್ತದೆ. ಒಂದರ್ಥದಲ್ಲಿ ಕಂಬಳಿಯನ್ನು ಶುಭದ ಸಂಕೇತವಾಗಿದೆ. ಕಂಬಳಿಗಳನ್ನು ಪೂಜ್ಯ ಮನೋಭಾವದಿಂದ ಕಂಡು ಗೌರವಿಸಲಾಗುತ್ತಿರುವುದು ಇಲ್ಲಿನ ನಾಗರಿಕರ ಪರಂಪರೆಯೂ ಹೌದು. ಇಂಥ ವಿಶೇಷತೆಯನ್ನು ಹೊಂದಿರುವ ಕಂಬಳಿ ತಯಾರಿಕೆಯಲ್ಲಿ ಮೈಲ್ಲುಗಲ್ಲನೇ ಸ್ಥಾಪಿಸಿದ್ದ ಕಳಕಾಪುರ ಗ್ರಾಮದಲ್ಲಿನ ಕಂಬಳಿಗಳಿಗೆ ಕೇವಲ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗುಜರಾತ್, ಆಂಧ್ರ, ತಮಿಳುನಾಡು ಮುಂತಾದೆಡೆ ಭಾರಿ ಬೇಡಿಕೆ ಇದೆ.

`ಎಷ್ಟೋ ಬಾರಿ ಬೇರೆ ಕಡೆ ತಯಾರಿಸಿದ್ದ ಕಂಬಳಿಗಳನ್ನು `ಕಳಕಾಪುರ' ಗ್ರಾಮದ ಎಂದು ಸುಳ್ಳು ಹೇಳಿ ವ್ಯಾಪಾರಕ್ಕೆ ಮುಂದಾದವರಿಗೆ ಗ್ರಾಹಕರು, ಇಂದು ಕಳಕಾಪುರ ಕಂಬಳಿ ಅಲ್ಲ, ನೀವು ಸುಳ್ಳು ಹೇಳುತ್ತಿರೀ' ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ಸಾಕಷ್ಟು ನಡೆದಿವೆ ಎನ್ನುತ್ತಾರೆ' ಹಿರಿಯ ಕಂಬಳಿ ತಯಾರಕರಾದ ದೇವಪ್ಪ ಹರ್ಲಾಪೂರ, ಭೀಮಪ್ಪ ಶಿರಹಟ್ಟಿ.

`ಕಂಬಳಿ ತಯಾರಿಕೆಯಲ್ಲಿ ಅಗ್ರ ಸ್ಥಾನದಲ್ಲಿದ್ದ ಕಳಕಾಪುರ ಗ್ರಾಮದಲ್ಲಿ ಇಂದಿಗೂ ಎಪ್ಪತ್ತಕ್ಕೂ ಅಧಿಕ ಕುಟುಂಬಗಳು ಕಂಬಳಿ ತಯಾರಿಕೆಯಲ್ಲಿ ನಿರತರವಾಗಿವೆ. ಎಲ್ಲಿಯೂ ಕಂಬಳಿ ದೊರಕದಿದ್ದರೆ ಕಳಕಾಪುರದಲ್ಲಿ ಕಂಬಳಿ ದೊರೆತ್ತವೆ ಎಂಬ ಗ್ರಾಹಕರ ನಂಬಿಕೆ ಹುಸಿಯಾಗಿಲ್ಲ. ಪರಿಣಾಮ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ತಿಂಥಣಿಯ ಮೌನೇಶ್ವರ ಸಾಮೀಜಿ, ಬೀದರಿನ ಸಿದ್ದಾರೂಢ ಶ್ರೀಗಳು ಕಳಕಾಪುರ ಗ್ರಾಮದ ಕಂಬಳಿಗಳಿಗೆ ಪ್ರತಿ ವರ್ಷ ಪ್ರಸ್ತಾವ ಸಲ್ಲಿಸುತ್ತಿದ್ದಾರೆ' ಎನ್ನುತ್ತಾರೆ ಹುಸೇನಸಾಬ ಮಾರನಬಸರಿ. `ರಾಜ್ಯ ಸರ್ಕಾರ ಕಂಬಳಿ ನೇಕಾರಿಕೆ ಅಭಿವೃದ್ಧಿಗೆ ಶ್ರಮಿಸುತ್ತರುವ ಮಾದರಿಯಲ್ಲಿ ಕಂಬಳಿ ತಯಾರಿಕೆಗೂ ಪ್ರೋತ್ಸಾಹ ನೀಡಬೇಕು. ತಲೆಮಾರುಗಳಿಂದ ಕಂಬಳಿ ತಯಾರಿಕೆಯನ್ನೇ ಆಶ್ರಯಿಸಿಕೊಂಡು ಬಂದಿರುವ ಕುಟುಂಬಗಳ ನೆರವಿಗೆ ಸರ್ಕಾರ ಸ್ಪಂದಿಸಬೇಕು' ಎನ್ನುತ್ತಾರೆ ಬಸವ್ವ ಶಿರಹಟ್ಟಿ, ಯಲ್ಲಪ್ಪ ಶಿರಹಟ್ಟಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.