ADVERTISEMENT

ಕಳಂಕಿತ ಶಾಸಕರು ಕ್ಷಮೆ ಯಾಚಿಸಲಿ: ಎಚ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:15 IST
Last Updated 11 ಫೆಬ್ರುವರಿ 2012, 5:15 IST

ಗದಗ: ರಾಜ್ಯದ ಮೂವರು ಕಳಂಕಿತ ಮಾಜಿ ಸಚಿವರು ತಾವು ಮಾಡಿದ ತಪ್ಪಿಗೆ ಜನತೆಯ ಕ್ಷಮೆ ಯಾಚಿಸದೇ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಕೂಡಲೇ ಅವರು ಜನತೆಯ ಕ್ಷವೆು ಕೇಳಿ ಶಾಸಕ ಸ್ಥಾನ ತ್ಯಜಿಸಬೇಕು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಎಚ್ಚರಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯ, ಚರ್ಚ್, ಮಸೀದಿಯಷ್ಟೇ ಪವಿತ್ರವಾದ ವಿಧಾನಸೌಧದಲ್ಲಿ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಹಾಗೂ ಕೃಷ್ಣ ಪಾಲೇಮಾರ್ ಅವರು ಅಶ್ಲೀಲ ಚಿತ್ರ ವೀಕ್ಷಿಸಿದ್ದು ಅವರ ನೈತಿಕ ಅಧಃಪತನವನ್ನು ತೋರಿಸುತ್ತದೆ. ಈ ಕೃತ್ಯ ದೇಶದ  ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಹಾಗೂ ಪ್ರತಿಯೊಬ್ಬ ಕನ್ನಡಿಗ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟರು.

ಚಿತ್ರ ವೀಕ್ಷಣೆಯ ನಂತರ ಕಳೆದ 4 ದಿನಗಳಿಂದ ನಡೆಯುತ್ತಿರುವ ಈ ವಿದ್ಯಮಾನಗಳನ್ನು ರಾಜ್ಯದ ಜನತೆ ಗಂಭೀರವಾಗಿ ನೋಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಡೆಯೂ ಈ ಕುರಿತು ಪ್ರತಿಭಟನೆ ವ್ಯಕ್ತವಾಗುತ್ತಿದೆ. ಇದನ್ನು ಮುಖ್ಯಮಂತ್ರಿಗಳು ಹಾಗೂ ಕೆ.ಎಸ್. ಈಶ್ವರಪ್ಪ ಗಮನಿಸಬೇಕಿತ್ತು. ಅದನ್ನು ಬಿಟ್ಟು ಅವರನ್ನು ಬೆಂಬ ಲಿಸಹೊರಟಿರುವುದು ಖಂಡನೀಯ ಎಂದರು.

ಈ ಹಿಂದೆ ಯಡಿಯೂರಪ್ಪ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಡಲು ವಿರೋಧಪಕ್ಷಗಳ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು. ಈಗ ಮುಖ್ಯಮಂತ್ರಿ ಸದಾನಂದಗೌಡರು `ಇಂತಹ 25 ಮಂದಿ ಕಾಂಗ್ರೆಸ್‌ನಲ್ಲೂ ಇದ್ದಾರೆ~ ಎನ್ನುವ ಮೂಲಕ ಯಡಿಯೂರಪ್ಪನವರ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಅವರು ನುಡಿದರು.

ರಾಜ್ಯದಲ್ಲಿನ ಬಿಜೆಪಿ ಶಾಸಕರು ರಾಜದ್ರೋಹ, ಮೋಸ, ಭ್ರಷ್ಟಾಚಾರಗಳಲ್ಲಿ ತೊಡಗಿದ್ದು, ಆ ಪಕ್ಷದ 30ಕ್ಕೂ ಹೆಚ್ಚು ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತು ಆರ್‌ಎಸ್‌ಎಸ್ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ ಎಚ್ಕೆ, ಈ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.

ಬಿಜೆಪಿಯ ಆಪರೇಷನ್ ಕಮಲ ಅವರ ಅನೈತಿಕ ರಾಜಕಾರಣಕ್ಕೆ ಉದಾಹರಣೆ. ರೆಸಾರ್ಟ್‌ಗಳಲ್ಲಿನ ಚಟುವಟಿಕೆಗಳೇ ಇಂತಹ ವಿಕೃತ ಚಟುವಟಿಕೆಗಳಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಸ್ವಾಮೀಜಿಗಳನ್ನು ಗುಂಪುಗೂಡಿಸಿ ಬೆಂಬಲ ಪಡೆದ ಬಿಜೆಪಿಯ ನಾಯಕರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಶಾಸಕರ ಸದಸ್ಯತ್ವ ರ್ದ್ದದತಿಗೆ ಆಗ್ರಹ
ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಮೂವರು ಮಾಜಿ ಸಚಿವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಥವಾ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ಪಾಟೀಲ  ಎಚ್ಚರಿಸಿದರು.

ಯಡ್ಡಿಯೂರಪ್ಪ, ಜನಾರ್ದನ ರೆಡ್ಡಿ ಆದಿಯಾಗಿ ಬಿಜೆಪಿಯ 30ಕ್ಕೂ ಹೆಚ್ಚು ಸಚಿವರು-ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಸರ್ಕಾರ ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲು ಚಿಂತನೆ ನಡೆಸಿದ್ದು, ಅಷ್ಟು ಹಣ ಇಂತಹ ಭ್ರಷ್ಟರ ಕೈ ಸೇರಿದಲ್ಲಿ ರಾಜ್ಯದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಬಿಜೆಪಿ ಸರ್ಕಾರ ಬಜೆಟ್ ಮಂಡಿಸುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಅವರು ದೂರಿದರು.

ರಾಜ್ಯದಾದ್ಯಂತ ಚೇತನ ಯಾತ್ರೆ ನಡೆಸಿದ ಎಲ್.ಕೆ. ಅಡ್ವಾಣಿ ಹಾಗೂ ಹಿಂದೂ ಸಂಸ್ಕೃತಿ-ಮಹಿಳೆಯರ ಬಗ್ಗೆ ಭಾಷಣ ಮಾಡುವ ಆರ್‌ಎಸ್‌ಎಸ್ ಮುಖಂಡರು, ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಈಶ್ವರಪ್ಪ ಈ ಕುರಿತು ಉತ್ತರಿಸಬೇಕು. ಬಿಜೆಪಿ ಮುಖಂಡರು ಜನರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.