ADVERTISEMENT

ಕಾಗಿನೆಲೆ ಅಭಿವೃದ್ಧಿಗೆ ಕ್ರಮ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2013, 7:06 IST
Last Updated 7 ಜನವರಿ 2013, 7:06 IST
ಕಾಗಿನೆಲೆ ಗ್ರಾಮದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿದರು. ಸಚಿವ ಸಿ.ಎಂ. ಉದಾಸಿ, ಭೋಜರಾಜ ಕರೂದಿ, ಶಿವರಾಜ ಸಜ್ಜನರ ಶಂಕ್ರಣ್ಣ ಮಾತನವರ, ಜಿ. ಶಿವಣ್ಣ, ಶಾಸಕರಾದ ಸುರೇಶಗೌಡ್ರ ಪಾಟೀಲ, ನಿರಂಜನಾನಂದಪುರಿ ಸ್ವಾಮೀಜಿ ಮತ್ತಿತರರು ಚಿತ್ರದಲ್ಲಿದ್ದಾರೆ
ಕಾಗಿನೆಲೆ ಗ್ರಾಮದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿದರು. ಸಚಿವ ಸಿ.ಎಂ. ಉದಾಸಿ, ಭೋಜರಾಜ ಕರೂದಿ, ಶಿವರಾಜ ಸಜ್ಜನರ ಶಂಕ್ರಣ್ಣ ಮಾತನವರ, ಜಿ. ಶಿವಣ್ಣ, ಶಾಸಕರಾದ ಸುರೇಶಗೌಡ್ರ ಪಾಟೀಲ, ನಿರಂಜನಾನಂದಪುರಿ ಸ್ವಾಮೀಜಿ ಮತ್ತಿತರರು ಚಿತ್ರದಲ್ಲಿದ್ದಾರೆ   

ಬ್ಯಾಡಗಿ: ಶರಣರು, ದಾರ್ಶನಿಕರು ಒಂದೇ ಜಾತಿಗೆ ಸೀಮಿತವಾಗಿರದೆ ಎ್ಲ್ಲಲ ವರ್ಗದ ಜನರಿಗೆ ಸೇರಿದವರಾಗಿದ್ದು, ಅವರು ಸಮಾಜಕ್ಕೆ ನೀಡಿದ ಸಂದೇಶವನ್ನು ಯಾವುದೇ ಭೇದಭಾವ ಮಾಡದೆ ತಲುಪಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಭಾನುವಾರ ಸಂಜೆ ತಾಲ್ಲೂಕಿನ ಕಾಗಿನೆಲೆಯ ಕನಕ ಸಭಾಭವನದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕೈಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಕನಕ ಗುರುಪೀಠದ ಆವರಣದಲ್ಲಿ ರಂಗಮಂದಿರ ನಿರ್ಮಾಣಕ್ಕೆ ರೂ.2 ಕೋಟಿ  ಅನುದಾನ ನೀಡುವುದಾಗಿ ಭರವಸೆ ನೀಡಿದ ಅವರು ರಂಗಮಂದಿರ ಪೂರ್ಣಗೊಂಡಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಅನುಕೂಲವಾಗಲಿದೆ ಎಂದರು.

ಮಠಗಳಿಗೆ ಹಾಗೂ ದೇವಸ್ಥಾನಗಳಿಗೆ ಬಿಜೆಪಿ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿ ಸಾವಿರ ಕೋಟಿ ರೂ ತೆಗೆದಿರಿಸಲಿದೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಖರ್ಚಾಗದೆ ಉಳಿದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು.

ಈ ಹಿಂದಿನ ಯಾವುದೇ ಸರಕಾರಗಳು ಮಾಡದ ಅಭಿವೃದ್ಧಿ ಕೆಲಸವನ್ನು ಬಿಜೆಪಿ ಸರಕಾರ ಕೈಕೊಂಡಿದ್ದು, ಹಣ ಬಿಡುಗಡೆಯಿಂದ ಹಿಡಿದು ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಅವುಗಳನ್ನು ಪೂರ್ಣಗೊಳಿಸಿ ಜನತೆಗೆ ತಲುಪಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ಕೂಡಲ ಸಂಗಮ ಮಾದರಿಯಲ್ಲಿ ಕಾಗಿನೆಲೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದೆಂದು ಭರವಸೆ ನೀಡಿದರು.

ಕನಕದಾಸರ ಕೀರ್ತನೆ ಹಾಗೂ ಸಾಹಿತ್ಯದ ಮೇಲೆ ನಡೆದಿರುವ ದೌರ್ಜನ್ಯ ಹಾಗೂ ಕೃತಿಚೌರ್ಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಅದಕ್ಕೆ ಸ್ಪಂದಿಸಲಿದೆ ಎಂದು ಹೇಳಿದರು. ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮಾತನಾಡಿದರು.
ಕನಕದಾಸರ ತತ್ವ ಆದರ್ಶಗಳನ್ನು ಇಂದು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಕನಕದಾಸರ ವಿಚಾರಗಳನ್ನು ಸಮಾಜಕ್ಕೆ ತಲುಪಿಸಬೇಕೆನ್ನುವ ಉದ್ದೇಶದಿಂದ ಬಿಜೆಪಿ ಸರಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ ಎಂದರು. ಸಾನಿಧ್ಯ ವಹಿಸಿದ್ದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮಿಗಳು ಆಶೀರ್ವಚನ ನೀಡಿ,  ಕನಕದಾಸರ ಮಂಡಿಗೆಗಳ ಸಂರಕ್ಷಿಸಲು ತಜ್ಞರ ಸಮಿತಿ ರಚಿಸಬೇಕು, ಕೃತಿ ಚೌರ್ಯವನ್ನು ಸರಕಾರ ತಡೆಯಬೇಕು ಹಾಗೂ ಮುಂದಿನ ಆಯವ್ಯಯದಲ್ಲಿ ಕನಕಗುರು ಪೀಠಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಬೆಂಗಳೂರಿನ ರಾಮಾನುಜ ಸ್ವಾಮೀಜಿ, ಜಲಸಂನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಶಿ, ಶಾಸಕ ಜಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯರಾದ ಶಿವರಾಜ ಸಜ್ಜನರ, ಸೋಮಣ್ಣ ಬೇವಿನಮರದ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಕುರಿ ಹಾಗೂ ಉಣ್ಣೆ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಜಿ.ಪಂ ಅಧ್ಯಕ್ಷ ಶಂಕ್ರಪ್ಪ ಮಾತನವರ, ಉಪಾಧ್ಯಕ್ಷೆ ಗೀತಾ ಅಂಖಸಖಾನಿ, ಸದಸ್ಯೆ ಗದಿಗೆಮ್ಮ ಬಸನಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಶಾಸಕ ಸುರೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ವೈ.ಬಸವರಾಜ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.