ADVERTISEMENT

ಕೃಷಿಗೆ ನೀರು ಕೊಡ್ರಿ ಅಷ್ಟೇ ಸಾಕು

ರೋಣ ಮತಕ್ಷೇತ್ರದ ನಾರಾಯಣಪುರ, ಹಿರೇವಡ್ಡಟ್ಟಿ ಗ್ರಾಮಗಳ ರೈತರ ಆಗ್ರಹ

ಜೋಮನ್ ವರ್ಗಿಸ್
Published 9 ಮೇ 2018, 12:06 IST
Last Updated 9 ಮೇ 2018, 12:06 IST
ಹಿರೇವಡ್ಡಟ್ಟಿ ಗ್ರಾಮದಲ್ಲಿ ಮಾತಿಗೆ ಸಿಕ್ಕ ರೈತರು
ಹಿರೇವಡ್ಡಟ್ಟಿ ಗ್ರಾಮದಲ್ಲಿ ಮಾತಿಗೆ ಸಿಕ್ಕ ರೈತರು   

ಗದಗ: ರೋಣ ಮತಕ್ಷೇತ್ರ ವ್ಯಾಪ್ತಿಯ, ಡಂಬಳ ಹೋಬಳಿಯ ಕೊನೆಯ ಗ್ರಾಮ ನಾರಾಯಣಪುರ ತಲುಪಿದಾಗ ಮಧ್ಯಾಹ್ನ 1 ಗಂಟೆಯಾಗಿತ್ತು. ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಜನರು ಊರ ಮುಂದಿನ ಮರದ ನೆರಳಿನಲ್ಲಿ ಕುಳಿತಿದ್ದರು.ಎದುರಿಗೆ ವಿಶಾಲವಾಗಿ ಹರಡಿಕೊಂಡಿರುವ ಕಪ್ಪತಗುಡ್ಡ. ಗುಡ್ಡದ ನೆತ್ತಿಯಲ್ಲಿ ಬಿಸಿಲಿಗೆ ಬಸವಳಿದಂತೆ ನಿಧಾನವಾಗಿ ತಿರುಗುತ್ತಿದ್ದ ಪವನ ವಿದ್ಯುತ್‌ ಯಂತ್ರಗಳ ಬೃಹತ್‌ ರೆಕ್ಕೆಗಳು. ದೂರದಿಂದಲೇ ಈ ರೆಕ್ಕೆಗಳು ತಿರುಗುವ ಗರಗರ ಸದ್ದು ಕೇಳಿಸುತ್ತಿತ್ತು.

‘ಚುನಾವಣೆ ಜೋರಾಗಿದೆಯಾ ಎಂಬ ಪ್ರಶ್ನೆಗೆ, ‘ನಾವು ಅದ್ರಾಗೆ ಇಲ್ಲಾ ಬಿಡ್ರೀ, ನಮ್ಮನ್ಯಾಕೆ ಕೇಳ್ತೀರಿ’ ಎಂದು ಗ್ರಾಮದ 65 ವರ್ಷದ ಫಕೀರಪ್ಪ ಮುರಾರಿ ರಾಜಕೀಯ ನಿರ್ಲಿಪ್ತತೆ ತೋರಿದರು.‘ಹಾಗಲ್ರೀ.. ನಾವು ಯಾವ ರಾಜಕೀಯ ಪಕ್ಷದಾಗೂ ಇಲ್ರೀ. ಚುನಾವಣೆ ಬಂದಾಗ ರಾಜಕೀಯ ಮಂದಿಗೆ ರೈತರು ನೆನಪಾಗ್ತಾರ’ ಎಂದು ಪಕ್ಕದ ಹಿರೇವಡ್ಡಟ್ಟಿ ಗ್ರಾಮದ ಯುವ ರೈತ ಮೆಹಬೂಬ ಕಿಲ್ಲೇದಾರ ಸಮಜಾಯಿಷಿ ನೀಡಿದರು.

ಎದುರಿಗೆ ಕಾಣುತ್ತಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ತುಂಗಭದ್ರಾ ಕಾಲುವೆ ತೋರಿಸಿ, ‘ಈ ಕಾಲುವೆ ಪ್ರಾರಂಭವಾದ ನಂತರ ಈ ಭಾಗದ ಭೂಮಿಗೆ ಒಂದಿಷ್ಟು ನೀರು ಬಂದಿದೆ’ ಎಂದರು.

ADVERTISEMENT

‘ಕಾಲುವೆ ನೀರು ನೇರವಾಗಿ ರೈತರ ಜಮೀನುಗಳಿಗೆ ಬಂದಿಲ್ಲ. ಈ ನೀರನ್ನು ಬಳಸಿ ಪಕ್ಕದ ಹಿರೇವಡ್ಡಟ್ಟಿ ಕೆರೆ ಮತ್ತು ಡಂಬಳದ ವಿಕ್ಟೋರಿಯಾ ಕರೆಗಳನ್ನು ತುಂಬಿಸಲಾಗಿದೆ. ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿದ್ದು, ಇಲ್ಲಿನ ಕೊಳವೆ ಬಾವಿಯಲ್ಲೂ ನೀರು ಬರುತ್ತಿದೆ. ಇದನ್ನೇ ಕುಡಿಯಲು ಮತ್ತು ಕೃಷಿಗೆ ಬಳಸಿಕೊಳ್ಳುತ್ತಿದ್ದೇವೆ. ಇದೇ ದೊಡ್ಡ ಅಭಿವೃದ್ಧಿ. ಇದನ್ನು ಬಿಟ್ಟು ಬೇರೇನೂ ಆಗಿಲ್ಲ. ಕೃಷಿ ಬಿಟ್ಟರೆ ಬೇರೆ ಉದ್ಯೋಗ ಇಲ್ಲ’ ಎಂದು ಫಕೀರಪ್ಪ ಮುರಾರಿ ಮೌನ ಮುರಿದರು.

‘500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ನಾರಾಯಣಪುರ ಇನ್ನೂ ಕಂದಾಯ ಗ್ರಾಮ ಆಗಿಲ್ಲ. ಊರಿನಿಂದ ಬಸ್‌ ಸೌಕರ್ಯ ಇಲ್ಲ. ಬಸ್‌ ಹಿಡಿಯಬೇಕಾದರೆ 2 ಕಿ.ಮೀ ದೂರ ನಡೆಯಬೇಕು. ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿವರೆಗೆ ಹಣ್ಣುಮಕ್ಕಳು ಓದುತ್ತಾರೆ. ಆ ನಂತರ, ಬಸ್‌ ಸೌಕರ್ಯದ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸುತ್ತಾರೆ. ಕೆಲವರು ಬೇರೆ ಊರಿನಲ್ಲಿ ಸಂಬಂಧಿಕರ ಮನೆಯಲ್ಲಿ ಬಿಟ್ಟು ಓದಿಸುತ್ತಾರೆ. ಹಿರೇವಡ್ಡಟ್ಟಿ–ನಾರಾಯಣಪುರ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡರೆ ಇಲ್ಲಿಂದ ಡಂಬಳಕ್ಕೆ ಸಂಪರ್ಕ ಲಭಿಸುತ್ತದೆ’ ಎಂದು ಗ್ರಾಮದ ಕೆಲವು ಯುವಕರು ಹೇಳಿದರು.

ನಾರಾಯಣಪುರ ದಾಟಿ ಹಿರೇವಡ್ಡಟ್ಟಿ ಗ್ರಾಮಕ್ಕೆ ಬಂದಾಗ ಅಲ್ಲೂ ರೈತರು ತಂಡ ತಂಡವಾಗಿ ಕಟ್ಟೆಯ ಮೇಲೆ ಕುಳಿತು ಹರಟುತ್ತಿದ್ದರು. ಹೆಣ್ಣುಮಕ್ಕಳು ಊರ ಹೊರಗಿರುವ ಕೊಳವೆಬಾವಿಯಿಂದ ಕೊಡಗಳಲ್ಲಿ ನೀರು ತುಂಬಿಸಿಕೊಂಡು, ತಲೆಯ ಮೇಲೆ ಹೊತ್ತುಕೊಂಡು ಉರಿ ಬಿಸಿಲು ಲೆಕ್ಕಿಸದೆ ಹೆಜ್ಜೆ ಹಾಕುತ್ತಿದ್ದರು. ‘ಈ ಭಾಗದಾಗೆ ನೀರನದೇ ದೊಡ್ಡ ಸಮಸ್ಯೆ. ಕೆರೆ ತುಂಬಿಸಿದ್ದರಿಂದ ಕುಡಿಯಲು ಹೇಗೋ ಕೊಳವೆಬಾವಿ ನೀರು ಸಿಗುತ್ತಿದೆ. ಆದರೆ, ಕೃಷಿಗೆ ನೀರಿನ ಬರ ಇದೆ. ತುಂಗಭದ್ರಾ ಕಾಲುವೆ ಮೂಲಕ ಕೆರೆ ತುಂಬಿಸಿದರೆ ಪ್ರಯೋಜನವಾಗುವುದಿಲ್ಲ. ಜಮೀನುಗಳಿಗೆ ನೀರು ಬಳಸಿಕೊಳ್ಳಲು ಅನುಕೂಲವಾಗುವಂತೆ ಚಿಟಗಾಲುವೆ (ಉಪಕಾಲುವೆ) ನಿರ್ಮಿಸಬೇಕು’ ಎಂದು ರೈತರು ಆಗ್ರಹಿಸಿದರು.

‘ಫಸಲ್‌ ಭೀಮಾ ಯೋಜನೆಯ ವಿಮಾ ಪರಿಹಾರ ಕೆಲವರಿಗೆ ಬಂದಿದೆ, ಕೆಲವರಿಗೆ ಬಂದಿಲ್ಲ. ಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಂಡ ಭೂಮಿಯ ಪರಿಹಾರವೂ ಇನ್ನೂ ಕೆಲವರಿಗೆ ಬರಬೇಕು. ಗ್ರಾಮದಲ್ಲಿ ಒಂದಿಷ್ಟು ಅಭಿವೃದ್ಧಿ ಆಗಿದೆ’ ಎಂದರು.

ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಗಮನ ಸೆಳೆದಾಗ, ‘ನಮ್ಮೂರಾಗೆ 10 ಸಾವಿರ ಜನಸಂಖ್ಯೆ ಇದೆ. ಎಲ್ಲ ಸಮುದಾಯದವರೂ ಇದ್ದಾರೆ. ಜಾತಿ ಲೆಕ್ಕಚಾರ ಚುನಾವಣೆಯ ವಿಷಯ ಆಗುವುದೇ ಇಲ್ಲ’ ಎಂದರು.

‘ಈಗ 75 ವರ್ಷ ಆಗೈತಿ. 22ನೇ ವರ್ಷದಿಂದ ವೋಟ್‌ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಬೇಕು.ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಬರುತ್ತಾರೆ’ ಎಂದು ಕೆಂಚಪ್ಪ ಒಳಗುಂದಿ ಅಸಮಾಧಾನ ವ್ಯಕ್ತಪಡಿಸಿದರು.

ಹಿರೇವಡ್ಡಟ್ಟಿ, ಹಾರೋಗೇರಿ, ಬಸಾಪುರ ಮಾರ್ಗವಾಗಿ ಮುಂಡರಗಿಗೆ ಬರುವಾಗ, ಹೊಲಗಳಲ್ಲಿ ರೈತರು ಮುಂಗಾರು ಪೂರ್ವ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಕಂಡು ಬಂತು. ಭೂಮಿ ಹದ ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳನ್ನು ಯಾರೂ ದೂರಲಿಲ್ಲ. ಹೆಚ್ಚಿನವರು ನಮಗೆ ರಾಜಕೀಯ ಬ್ಯಾಡ್ರೀ, ಕೃಷಿಗೆ ಅನುಕೂಲವಾಗುವಂತೆ ಕಾಲುವೆ ನೀರು ಕೊಟ್ಟರೆ ಸಾಕು, ನೆಮ್ಮದಿಯಿಂದ ಬದುಕುತ್ತೇವೆ’ ಎಂದರು.

ಮುಂಡರಗಿ ಕ್ಷೇತ್ರದಲ್ಲೇ ಇರಬೇಕಿತ್ತು

ಕ್ಷೇತ್ರ ಪುನರ್‌ ವಿಂಗಡಣೆ ನಂತರ ಮುಂಡರಗಿ ಕ್ಷೇತ್ರ ರದ್ದಾಗಿ, ನಮ್ಮ ಗ್ರಾಮ ರೋಣ ಮತಕ್ಷೇತ್ರಕ್ಕೆ ಸೇರಿತು. ಕ್ಷೇತ್ರ ಬದಲಾದ ನಂತರ ಅಭಿವೃದ್ಧಿಯಾಗಿದೆ. ಆದರೆ, ಇಲ್ಲಿಂದ ರೋಣಕ್ಕೆ 100 ಕಿ.ಮೀ ದೂರ ಇದೆ. ಮುಂಡರಗಿ ಕ್ಷೇತ್ರವನ್ನೇ ಉಳಿಸಿಕೊಂಡಿದ್ದರೆ ಒಳ್ಳೆಯದಿತ್ತು ಎಂದು ರೈತ ದೇವಪ್ಪ ಬನ್ನಿಕೊಪ್ಪ ಮತ್ತು ಶಂಕರಪ್ಪ ಹೊಂಬಳ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.