ADVERTISEMENT

ಕೆ.ಸಿ. ರಸ್ತೆಯಲ್ಲಿ ಸಂಚಾರಕ್ಕೆ ಸರ್ಕಸ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 6:35 IST
Last Updated 20 ಜೂನ್ 2011, 6:35 IST
ಕೆ.ಸಿ. ರಸ್ತೆಯಲ್ಲಿ ಸಂಚಾರಕ್ಕೆ ಸರ್ಕಸ್
ಕೆ.ಸಿ. ರಸ್ತೆಯಲ್ಲಿ ಸಂಚಾರಕ್ಕೆ ಸರ್ಕಸ್   

ಗದಗ: ಇಲ್ಲಿನ ಕೆ.ಸಿ. ರಾಣಿ ರಸ್ತೆಯ ಹೊಸ ಸಿಮೆಂಟ್ ಹಾದಿಯಲ್ಲಿ ಸಂಚಾರ ಮಾಡುವುದೆಂದರೆ ಕತ್ತಿಯ ಮೇಲೆ ನಡೆದಂತೆ ಎಂಬಂತಾಗಿದೆ. ಅಪೂರ್ಣ ಕಾಮಗಾರಿಯ ನಡುವೆಯೇ ರಸ್ತೆ ಸಂಚಾರ ಆರಂಭವಾಗಿದ್ದು, ವಾಹನ ಚಾಲನೆಗೆ ಪೈಪೋಟಿ ನಡೆದಿದೆ. ಇನ್ನೊಂದೆಡೆ, ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬಗಳು ನಿಂತು ಅಪಾಯಕ್ಕೆ ಆಹ್ವಾನವೀಯುವಂತಿದೆ.

ಹದಗೆಟ್ಟ ರಸ್ತೆಗೆ ಕಾಯಕಲ್ಪ ನೀಡುವ ದೃಷ್ಟಿಯಿಂದ ಕೆಲವು ತಿಂಗಳುಗಳ ಹಿಂದೆ ಈ ರಸ್ತೆಯನ್ನು ಸಿಮೆಂಟ್ ಹಾದಿಯನ್ನಾಗಿ ಪರಿವರ್ತಿಸುವ ಕಾಮಗಾರಿಗೆ ಚಾಲನೆ ದೊರೆತಿತ್ತು. ಮೊದಲಿಗೆ ರಸ್ತೆಯ ಒಂದು ಭಾಗವನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು, ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಜಲ್ಲಿ ಕಲ್ಲು, ಮರಳು ಹಾಗೆಯೇ ಹರಡಿಕೊಂಡಿವೆ. ಆದರೆ ಅಷ್ಟರಲ್ಲಾಗಲೇ ಇದರ ಮೇಲೆ ಸಂಚಾರ ಆರಂಭವಾಗಿದೆ. ಕಾಮಗಾರಿಯ ಕಾರಣ ತೆಗೆದ ಗುಂಡಿಗಳು ಹಾಗೆಯೇ ಉಳಿದಿವೆ. ಉಳಿದ ಭಾಗದಲ್ಲೇ ಜನರು ಸಂಚಾರದ ಸರ್ಕಸ್ ನಡೆಸಿದ್ದಾರೆ.

ಭಾನುವಾರ ಹೀಗೆ ಕಿರಿದಾದ ಜಾಗದಲ್ಲೇ ನುಗ್ಗಲು ಯತ್ನಿಸಿದ ಕಾರೊಂದರ ಗಾಲಿಗಳು ಗುಂಡಿಗೆ ಬಿದ್ದು, ಅದನ್ನು ಎತ್ತಲು ಜನರು ಪ್ರಯಾಸಪಡುತ್ತಿದ್ದ ದೃಶ್ಯ ಕಂಡುಬಂತು.

ಸಿಮೆಂಟ್‌ನ ನಯವಾದ ಹಾದಿ ಯಲ್ಲೇ ವಾಹನ ಸವಾರರು ಸಾಗ ಬಯಸುತ್ತಿದ್ದಾರೆ. ಬೈಕ್‌ಗಳ ಜೊತೆಗೆ, ಆಟೋ, ಕಾರ್‌ನಂತಹ ವಾಹನಗಳು ಇದೇ ದಾರಿಯಲ್ಲಿ ಹೊರಳುತ್ತವೆ. ಇನ್ನೂ ಫುಟ್‌ಪಾತ್ ಇಲ್ಲದ ಕಾರಣ ಜನರೂ ಈ ಹೊಸ ದಾರಿಯಲ್ಲಿ ನಡೆಯುತ್ತಿದ್ದಾರೆ.

ಪಕ್ಕದ ಕಚ್ಚಾ ರಸ್ತೆಗಿಂತ ಈ ಸಿಮೆಂಟ್ ರಸ್ತೆ ನಾಲ್ಕೈದು ಅಡಿ ಉದ್ದವಿದ್ದು, ಒಮ್ಮೆ ಏರಿದರೆ, ವಾಪಸ್ ಇಳಿಯಲು ಜಾಗವಿಲ್ಲ. ಹೀಗಾಗಿ ಕೆಳಕ್ಕೆ ಉರುಳಿ ಬೀಳುವ ಸಾಧ್ಯತೆಗಳೂ ಉಂಟು.

`ಹೊಸ ರಸ್ತೆಯಲ್ಲೇ ಎಲ್ಲ ಓಡಾಡು ವುದರಿಂದ ಈ ಸಮಸ್ಯೆ. ಸಿಮೆಂಟ್ ರಸ್ತೆಯನ್ನು ಒನ್‌ವೇ ರೀತಿ ಬಳಸಿ, ಇನ್ನೊಂದು ಹಾದಿಯಲ್ಲೂ ಸಂಚಾರ ನಡೆಸಿದರೆ ತೊಂದರೆ ಸ್ವಲ್ಪ ಕಡಿಮೆಯಾಗುತ್ತದೆ. ಜೊತೆಗೆ ರಸ್ತೆ ಯಲ್ಲಿ  ತೆಗೆದಿರುವ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚಬೇಕು. ಇಲ್ಲದಿದ್ದರೆ ಅಪಘಾತವಾಗುವುದು ಗ್ಯಾರಂಟಿ~  ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ರಮಣಪ್ಪ.

ಹಾದಿ ಮಧ್ಯದ ಲೈಟುಕಂಬ: ರಸ್ತೆ ವಿಸ್ತರಣೆ ವೇಳೆ ಅದಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಿ ನಂತರ ಕಾಮಗಾರಿ ಕೈಗೆತ್ತಿಕೊಳ್ಳುವುದು ವಾಡಿಕೆ. ಆದರೆ ಇಲ್ಲಿ ಹಾಗಿಲ್ಲ. ಹೊಸದಾಗಿ ರಸ್ತೆ ನಿರ್ಮಾಣ ಮಾಡು ತ್ತಿದ್ದರೂ ವಿದ್ಯುತ್ ಕಂಬಗಳನ್ನೂ ರಸ್ತೆ ಮಧ್ಯೆ ಸೇರಿಸಿಕೊಂಡದ್ದು ಏಕೆ? ಎನ್ನುವುದು ಇಲ್ಲಿನ ನಿವಾಸಿಗಳ ಪ್ರಶ್ನೆ.
 
ರಸ್ತೆ ಮಧ್ಯದಲ್ಲೇ ಟ್ರಾನ್ಸ್‌ಫಾರ್ಮರ್ ಸಹ ಇದೆ. ರಾತ್ರಿ ವೇಳೆ ವಾಹನಗಳು ಈ ಕಂಬಗಳಿಗೆ ಡಿಕ್ಕಿ ಹೊಡೆಯುವ ಅಪಾಯವೂ ಇದೆ. ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಇಲ್ಲಿನ ಜನತೆ ಪ್ರಶ್ನಿಸುತ್ತಾರೆ. ಈ ಕುರಿತು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯ ಎನ್ನುವುದು ಅವರ ಆರೋಪ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.