ADVERTISEMENT

ಕೊಳಚೆಯಲ್ಲಿ ಕಾಯಿಪಲ್ಲೆ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 5:52 IST
Last Updated 5 ಆಗಸ್ಟ್ 2013, 5:52 IST
ಗದುಗಿನ ಬಸವೇಶ್ವರ ರಸ್ತೆಯಲ್ಲಿ ಗಲೀಜು ನಡುವೆಯೇ ತರಕಾರಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು.
ಗದುಗಿನ ಬಸವೇಶ್ವರ ರಸ್ತೆಯಲ್ಲಿ ಗಲೀಜು ನಡುವೆಯೇ ತರಕಾರಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು.   

ಗದಗ: ಮಬ್ಬು ಗತ್ತಲು, ಸೂರ್ಯನ ಕಿರಣ ಭೂಮಿಗೆ ಸ್ಪರ್ಶಿಸಿಲ್ಲ, ಆಗಲೇ ಸುತ್ತಮುತ್ತಲ ಗ್ರಾಮಗಳಿಂದ ಬುಟ್ಟಿಯಿಂದ ಹೊತ್ತು ತಂದ ತರಕಾರಿಗಳನ್ನು ಗುಂಪು ಹಾಕಿಕೊಂಡು `ಬರ‌್ರಿ ಅಕ್ಕಾರ, ಬರ‌್ರಿ ಬರೆ ಐದ್ ರೂಪಾಯಿಗೆ ಒಂದು ಗುಂಪು, ತಾಜಾ ಅದವು  ಬರ‌್ರಿ, ಸಸ್ತಾ ಅದವು ಬರ‌್ರಿ ಅಕ್ಕಾರ' ಎಂದು ಕೂಗುತ್ತಾರೆ.

ಹೌದು ಮಳೆಯಿರಲಿ, ಬಿಸಿಲು ಇರಲಿ ಬೆಳಿಗಿನ ಜಾವಾ ಬಸವೇಶ್ವರ ಸರ್ಕಲ್ ಬಳಿಯ ರಸ್ತೆಯಲ್ಲೇ ಕುಳಿತು ತಾಜಾ ಕಾಯಿಪಲ್ಲೆ ವ್ಯಾಪಾರ ಸಾಗುತ್ತದೆ. ಐದು ವರ್ಷಗಳಿಂದ ರಸ್ತೆಯಲ್ಲಿಯೇ ವೃದ್ಧರು, ಮಹಿಳೆಯರು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಬೆಳಿಗ್ಗೆ 5.30ರಿಂದ 8.30ರವರೆಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆದರೆ ಈ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಮಳೆ ಬಂದರೆ ನೆನೆಯುತ್ತಾರೆ, ಬಿಸಿಲಿನಲ್ಲಿ ಬಳಲಬೇಕಾದ ಪರಿಸ್ಥಿತಿ ಇದೆ. ಅಷ್ಟೇ ಅಲ್ಲದೇ ಮಾರುಕಟ್ಟೆಗೆ ಹೊಂದಿಕೊಂಡಿರುವ ರಸ್ತೆಯಲ್ಲಿಯೇ ವ್ಯಾಪಾರ ಮಾಡುವುದರಿಂದ ಮಾರುಕಟ್ಟೆಯಲ್ಲಿ ಉಳಿದ ತರಕಾರಿ ತ್ಯಾಜ್ಯಗಳನ್ನು ರಸ್ತೆಗೆ ಬಿಸಾಡಲಾಗುತ್ತದೆ. ಬಿಡಾಡಿ ಹಸುಗಳು, ಹಂದಿಗಳು ತ್ಯಾಜ್ಯವನ್ನು ತಿಂದು ಗಲೀಜು ಮಾಡುತ್ತವೆ. ಮಳೆ ಬಂದರಂತೂ ವ್ಯಾಪಾರಿಗಳ ಪಾಡ ಹೇಳತಿರದು. ರಸ್ತೆಯಲ್ಲಿ ನಿಂತ ನೀರು ಹಾಗೂ ಗಲೀಜು ನಡುವೆಯೇ ವ್ಯಾಪಾರ ಮಾಡಬೇಕು.

ನಗರದ ಸುತ್ತಮುತ್ತಲಿನ ಗ್ರಾಮಗಳಿಂದ ಟೊಮೆಟೋ, ಆಲೂಗಡ್ಡೆ, ಮೆಣಸಿನಕಾಯಿ, ಚವಳಿಕಾಯಿ, ಬದನೆಕಾಯಿ, ಸೊಪ್ಪು, ನೆನೆಸಿದ ಕಾಳುಗಳು, ಹಣ್ಣು ಸೇರಿದಂತೆ ವಿವಿಧ ತರಕಾರಿ ಹೊತ್ತು ತಂದು ರಸ್ತೆಯ ಪಕ್ಕದ ನೆಲದ ಮೇಲೆ ಸಣ್ಣ ಗುಂಪು ಮಾಡಿ ಮಾರಾಟ ಮಾಡಲಾಗುತ್ತದೆ. ಒಂದು ಗುಂಪಿಗೆ ರೂ. 5. ಮಾರುಕಟ್ಟೆ ಒಳಗಡೆ ಸ್ವಲ್ಪ ದುಬಾರಿಯಾದ ತರಕಾರಿಗಳು ರಸ್ತೆ ಮೇಲೆ ಕಡಿಮೆ ಬೆಲೆಗೆ ಸಿಗುವುದರಿಂದ ಹೆಚ್ಚು ಜನರು ವಾಕಿಂಗ್ ಮುಗಿಸಿಕೊಂಡು ಮನೆಗೆ ಹೋಗುವಾಗ ಕೈಯಲ್ಲಿ ಸಾಧ್ಯವಾದಷ್ಟು ತರಕಾರಿ  ತೆಗದುಕೊಂಡು ಹೋಗುತ್ತಾರೆ.

ಕೇವಲ 2-3 ಗಂಟೆಯಲ್ಲಿ ರಸ್ತೆ ವ್ಯಾಪಾರ ಮುಗಿದು ಹೋಗುತ್ತದೆ. ಆದರೆ ಇಷ್ಟೆಲ್ಲಾ ಕಷ್ಟ ಪಟ್ಟು ನಗರಕ್ಕೆ ತಂದು ಮಾರಾಟ ಮಾಡುವ ವ್ಯಾಪಾರಿಗಳ ಗೋಳು ಕೇಳೋರ್ ಇಲ್ಲ. ಮಹಿಳೆಯರು ಕಂಕುಳಲ್ಲಿ ಮಕ್ಕಳನ್ನು ಹೊತ್ತುಕೊಂಡು ಕೆಸರಿನಲ್ಲಿ ವ್ಯಾಪಾರ ಮಾಡುತ್ತಾರೆ.

ಇಕ್ಕಟ್ಟಾದ ರಸ್ತೆ, ವಾಹನಗಳ ಕಿರಿಕರಿ, ತರಕಾರಿ ತಿನ್ನಲು ಬರುವ ಜಾನುವಾರುಗಳು ಹಾಗೂ ಹಂದಿಗಳಿಂದ ರಕ್ಷಿಸಿ ಕಸದ ಕೊಂಪೆಯಲ್ಲಿ ವ್ಯಾಪಾರ ಮಾಡಬೇಕಾದ ಅನಿವಾರ್ಯತೆ. ಸಮಸ್ಯೆಗಳನ್ನು ಮೆಟ್ಟಿ ನಿಂತು ಹೊಟ್ಟೆ ಪಾಡಿಗಾಗಿ ದುಡಿಯುತ್ತಿರುವ ವ್ಯಾಪಾರಿಗಳಿಗೆ ನಗರಸಭೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ವ್ಯಾಪಾರಿಗಳ ಆಗ್ರಹ.

`ಏನ್ ಮಾಡೋದ್ ಸಾಹೆಬ್ರ. ಜೀವನ ನಡಿಬೇಕಲ್ಲ. ಮಳಿ ಬಂದಾಗ ಕಸ ರಸ್ತೆ ಮೇಲೆ ಕೊಚ್ಚಿಕೊಂಡು ಬರುತ್ತೆ. ಕೆಟ್ಟ ವಾಸನೆ ಬರತ್ತೈತಿ. ರಸ್ತೆ ತುಂಬಾ ನೀರು ನಿಂತಿರತೈತಿ. ಗಲೀಜು ಬಿದ್ದರುತ್ತೆ. ಆದ್ರು ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡಬೇಕಾಗೈತಿ ನೋಡ್ರಿ' ಎಂದು ನಾಗಾವಿಯ ಕರಿಯವ್ವ ಮಲ್ಲಾಪೂರ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.