ADVERTISEMENT

ಖಾಸನೀಸ ಸಹೋದರರ ವಂಚನೆಗೆ ಡೈರಿ ಪುರಾವೆ

ಸಂತೋಷ ಜಿಗಳಿಕೊಪ್ಪ
Published 13 ಜೂನ್ 2017, 9:45 IST
Last Updated 13 ಜೂನ್ 2017, 9:45 IST
ಸಿಐಡಿ ಕಚೇರಿಗೆ ಸೋಮವಾರ ವಿಚಾರಣೆಗಾಗಿ ಬಂದಿದ್ದ ಏಜೆಂಟರು
ಸಿಐಡಿ ಕಚೇರಿಗೆ ಸೋಮವಾರ ವಿಚಾರಣೆಗಾಗಿ ಬಂದಿದ್ದ ಏಜೆಂಟರು   

ಬೆಂಗಳೂರು:  ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ‘ಹರ್ಷ ಎಂಟರ್‌ಟೇನ್‌­ಮೆಂಟ್‌ ಸಂಸ್ಥೆ’ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಖಾಸನೀಸ ಸಹೋದರರ ಲೆಕ್ಕದ ಡೈರಿ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿದೆ.

ಆರೋಪಿಗಳಾದ  ಹರ್ಷ ಅಲಿಯಾಸ್‌ ಸತ್ಯಬೋಧ ಖಾಸನೀಸ ಹಾಗೂ ಅವರ ಸಹೋದರರಾದ ಸಂಜು, ಶ್ರೀನಿವಾಸ್‌ ಅವರನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು, ಅವರ ಮನೆಯಲ್ಲಿ ತಪಾಸಣೆ ನಡೆಸಿ ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದರು.

ಅದೇ ವೇಳೆ ಡೈರಿ ದೊರಕಿದ್ದು, ಹಣದ ವಹಿವಾಟಿನ ಲೆಕ್ಕವನ್ನು ಅದರಲ್ಲಿ ಬರೆದಿರುವುದು ಗೊತ್ತಾಗಿದೆ. ಅದೇ ಈಗ ಪ್ರಕರಣಕ್ಕೆ ಪುರಾವೆಯಾಗಿದೆ. ಹಣ ತೊಡಗಿಸಲು ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಆರೋಪಿ­ಗಳು ಬೈಕ್‌, ಕಾರು ಹಾಗೂ ಗೃಹೋ­ಪಯೋಗಿ ವಸ್ತುಗಳ ಆಮಿಷವೊಡ್ಡು­ತ್ತಿದ್ದರು. 

ADVERTISEMENT

ಇದುವರೆಗೂ  20 ಬೈಕ್‌ ಹಾಗೂ 6 ಕಾರುಗಳನ್ನು ಕೊಡುಗೆ ರೂಪದಲ್ಲಿ ಕೆಲ ಗ್ರಾಹಕರಿಗೆ ಕೊಟ್ಟಿದ್ದಾರೆ. ಆ ಕೊಡುಗೆಗಳನ್ನು ಪಡೆದವರಲ್ಲಿ ಸ್ಥಳೀಯ ಪೊಲೀಸರು, ವಕೀಲರು ಹಾಗೂ  ಪತ್ರಕರ್ತರೂ ಇದ್ದಾರೆ. ಅಂಥವರ ಹೆಸರುಗಳನ್ನು  ಕೊಡುಗೆಯ ಸಮೇತ ಆರೋಪಿಗಳು ಡೈರಿಯಲ್ಲಿ ಬರೆದಿದ್ದಾರೆ. ಅವರೆಲ್ಲರನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯುತ್ತಿದ್ದಾರೆ.

30 ಏಜೆಂಟರ ಹೇಳಿಕೆ ಸಂಗ್ರಹ: 2007ರಿಂದಲೇ ಆರೋಪಿಗಳು ಹಣ ಸಂಗ್ರಹಿಸಿಲು ಆರಂಭಿಸಿದ್ದರು. ಅದಕ್ಕೆ ಸಹಕಾರ ನೀಡಲು ಕೆಲ ಏಜೆಂಟರನ್ನು  ನೇಮಕ ಮಾಡಿಕೊಂಡಿದ್ದರು. ಅಂಥ 30 ಮಂದಿ ಏಜೆಂಟರನ್ನು ಸಿಐಡಿ ಅಧಿಕಾರಿ­ಗಳು ವಿಚಾರಣೆಗೆ ಒಳಪಡಿಸಿದ್ದಾರೆ.

‘ಪರಿಚಯಸ್ಥರಿಂದ ಹಣ ಸಂಗ್ರಹಿಸಿ ಖಾಸನೀಸ ಸಹೋದರರಿಗೆ ಕೊಟ್ಟಿದ್ದೆವು. ಪ್ರತಿ ತಿಂಗಳು ಸರಿಯಾಗಿಯೇ ಅವರು  ಬಡ್ಡಿ ಕೊಡುತ್ತಿದ್ದರು. ಅದನ್ನು ನಾವೇ ಅಗತ್ಯವಿದ್ದ ಗ್ರಾಹಕರಿಗೆ ತಲುಪಿಸುತ್ತಿದ್ದೆವು. ಆದರೆ, ಇತ್ತೀಚೆಗೆ ಬಡ್ಡಿ ನೀಡುವುದನ್ನೇ ನಿಲ್ಲಿಸಿದರು’ ಎಂದು ಏಜೆಂಟರು ಹೇಳಿಕೆ ನೀಡಿದ್ದಾರೆ.

‘ಆರೋಪಿಗಳು ಸ್ಥಳೀಯರೇ ಆಗಿದ್ದರಿಂದ ಹೆಚ್ಚು ನಂಬಿದ್ದೆವು. ಕೆಲವರಿಗೆ ಅವರು ಚೆಕ್‌ಗಳನ್ನು ಸಹ ಕೊಟ್ಟಿದ್ದರು’ ಎಂದು ಹೇಳಿಕೊಂಡಿದ್ದಾರೆ. ಸಂಬಂಧಿಕರ ಮೂಲಕ ಹಣ ಸಂಗ್ರಹ: ಸಂಬಂಧಿಕರ ಮೂಲಕವೂ ಆರೋಪಿ­ಗಳು ಹಣ ಸಂಗ್ರಹ ಮಾಡಿದ್ದಾರೆ.

ಈ ಸಂಬಂಧ ಖಾಸನೀಸ ಸಹೋದರರ ಸಂಬಂಧಿಯಾದ ಏಜೆಂಟ್‌ ತಡಸದ ಎಂಬುವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
‘ಬಾಲ್ಯದಿಂದಲೂ ಆರೋಪಿಗಳನ್ನು ನೋಡಿದ್ದೇನೆ. ಪ್ರತಿ ತಿಂಗಳು ತಪ್ಪದೇ ಬಡ್ಡಿ ಕೊಡುತ್ತಿದ್ದರು. ಅದರಿಂದಲೇ ಅವರ ಬಳಿ ಏಜೆಂಟ್‌ನಾಗಿ ಕೆಲಸ ಮಾಡಿದೆ’ ಎಂದು ತಡಸದ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.

₹5 ಲಕ್ಷಕ್ಕೆ ₹30 ಲಕ್ಷ ವಾಪಸ್‌ ಭರವಸೆ: ‘₹5 ಲಕ್ಷ ಪಡೆದಿದ್ದ ಆರೋಪಿಗಳು, ಐದು ವರ್ಷಗಳ ಬಳಿಕ ಆ ಹಣಕ್ಕೆ ಬಡ್ಡಿ ಸೇರಿ ₹30 ಲಕ್ಷ ವಾಪಸ್‌ ಕೊಡುವುದಾಗಿ ಹೇಳಿದ್ದರು’ ಎಂದು ಶಿಕ್ಷಕರೊಬ್ಬರು ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

₹ 3.5 ಲಕ್ಷ ಮೊತ್ತದ ಹಳೇ ನೋಟು ಪತ್ತೆ
‘ಆರೋಪಿಗಳ ಮನೆ ತಪಾಸಣೆ ವೇಳೆ  ₹3.5 ಲಕ್ಷ ಮೊತ್ತದ ಹಳೇ ನೋಟುಗಳು ಹಾಗೂ ₹25 ಸಾವಿರ ಹೊಸ ನೋಟುಗಳು ಪತ್ತೆಯಾಗಿವೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

‘ಹಣ ಕಳೆದುಕೊಂಡ ಕೆಲವರಷ್ಟೇ ಮಾಹಿತಿ ನೀಡುತ್ತಿ­ದ್ದಾರೆ. ಇನ್ನು ಹಲವರು   ಯಾವು­ದನ್ನೂ ಬಾಯ್ಬಿಡುತ್ತಿಲ್ಲ. ಇದೊಂದು ದೊಡ್ಡ ಹಗರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೀಗಾಗಿಯೇ ಆರೋಪಿಗಳು ವಂಚಿಸಿದ ಹಣವೆಷ್ಟು? ಅದನ್ನು ಅವರು ಎಲ್ಲಿ ತೊಡಗಿಸಿದ್ದಾರೆ? ಎಂಬ ಮಾಹಿತಿಯನ್ನು ಮೊದಲು ಕಲೆಹಾಕಬೇಕಿದೆ’ ಎಂದರು.  

ತಹಶೀಲ್ದಾರ್‌ ವಿಚಾರಣೆ ?
ಬೆಳಗಾವಿ ಜಿಲ್ಲೆಯ ತಹಶೀಲ್ದಾರ್‌ ಒಬ್ಬರು ಖಾಸನೀಸ ಸಹೋದರರಿಗೆ ಲಕ್ಷಾಂತರ ರೂಪಾಯಿ ನೀಡಿದ್ದರು ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ಸದ್ಯದಲ್ಲೇ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.