ADVERTISEMENT

ಗಗನಕ್ಕೇರಿದ ತೊಗರಿ ಬೆಲೆ: ಕ್ಷೀಣಿಸಿದ ಬಿತ್ತನೆ

ಪ್ರಜಾವಾಣಿ ವಿಶೇಷ
Published 19 ಅಕ್ಟೋಬರ್ 2012, 5:55 IST
Last Updated 19 ಅಕ್ಟೋಬರ್ 2012, 5:55 IST

ಗಜೇಂದ್ರಗಡ: ಎರಡು ವರ್ಷಗಳಿಂದ ತಲೆದೋರಿರುವ ಭೀಕರ ಬರದಿಂದಾಗಿ ತಲೆಮಾರುಗಳಿಂದಲೂ ಈ ಭಾಗದ ರೈತ ಸಮೂಹದ ಜೀವನಾಡಿ ಬೆಳೆ ಎಂದೇ ಪರಿಗಣಿಸಲ್ಪಟ್ಟ `ತೊಗರಿ~ ಬೆಳೆಗೆ ನೆಲೆಯೇ ಇಲ್ಲದಂತಾಗಿದೆ.

ತಲೆಮಾರುಗಳಿಂದಲೂ ಮಳೆ ಆಶ್ರಿತ ಒಕ್ಕಲುತನ ನಡೆಸುತ್ತಿದ್ದ ಅನ್ನದಾತನಿಗೆ ಎರಡು ವರ್ಷಗಳಿಂದಲ್ಲೂ ತಲೆದೋರಿರುವ ಭೀಕರ ಬರ ಕೃಷಿ ಕ್ಷೇತ್ರವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ. ಕೊಳವೆ ಬಾವಿ ನೀರಾವರಿ ಸೌಲಭ್ಯವನ್ನು ಹೊಂದಿದವರು ಕಬ್ಬು, ಹತ್ತಿ, ಬಾಳೆ, ಶೇಂಗಾ, ಬತ್ತಗಳ ಬೆನ್ನು ಹತ್ತಿದ್ದರೆ, ಮಳೆಯಾಶ್ರಿತ ಬೇಸಾಯದ ಮೂಲಕ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಮಾತ್ರ ನಿರಾಶ್ರಿತರಾಗಿದ್ದಾರೆ.

ಭೂಮಿ ಭಣ ಭಣ

ಬರದ ಹಿನ್ನೆಲೆಯಲ್ಲಿ 26,396 ಕೊಳವೆ ಬಾವಿಗಳಲ್ಲಿ ಶೇ. 52 ರಷ್ಟು ಕೊಳವೆ ಬಾವಿಗಳು ಅಸ್ತಿತ್ವ ಕಳೆದುಕೊಂಡಿವೆ. ಹೀಗಾಗಿ ಕೊಳವೆ ಬಾವಿಯಾಶ್ರಿತ ನೇಗಿಲಯೋಗಿಗಳು ನೀರು ಸಿಗದೇ ಹೈರಾಣಾಗಿದ್ದಾರೆ. ಭೂಮಿ ಒತ್ತೆ ಹಾಕಿ ದೂರದ ಊರುಗಳಿಗೆ ಗುಳೆ ಹೋಗಿದ್ದಾರೆ. ತೊಗರಿ ಬೆಳೆಗಾಗಿ ಮೀಸಲಿದ್ದ ಕೃಷಿ ಭೂಮಿ ಭಣಗುಡುತ್ತಿದೆ.

ಕೆಲ ದಶಕಗಳಿಂದ ಈ ಭಾಗದ ಕೃಷಿ ಕ್ಷೇತ್ರ ಸಾಕಷ್ಟು ಏರಿಳಿತ ಕಾಣುತ್ತಿದೆ. 46,653 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, 38,532 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಇದರಲ್ಲಿ ಶೇ.76 ರಷ್ಟು ಕೆಂಪು ಮಿಶ್ರಿತ ಜವಗು (ಮಸಾರಿ) ಪ್ರದೇಶವಿದೆ. ಮಸಾರಿ ಪ್ರದೇಶದ ಕೃಷಿ ಕ್ಷೇತ್ರದಲ್ಲಿ `ತೊಗರಿ~ ಬೆಳೆಯನ್ನು ಅವ್ಯಾಹತವಾಗಿ ಬೆಳೆಯಲಾಗುತ್ತಿತ್ತು. ಅಲ್ಲದೆ, ಮಸಾರಿ ಪ್ರದೇಶದ ಅನ್ನದಾತರ ಪ್ರಮುಖ ವಾಣಿಜ್ಯ ಬೆಳೆಯೂ `ತೊಗರಿ~ಯೇ ಆದರೆ, ಕೆಲ ವರ್ಷಗಳಿಂದ ತೊಗರಿ ಬೆಳೆಗೆ ಕುತ್ತು ಬಂದೊದಗಿದೆ. ಇದರಿಂದಾಗಿ ಬೆಳೆಗಾರ ಕಂಗಾಲಾಗಿದ್ದಾನೆ.

ಕ್ಷೀಣಿಸಿದ ತೊಗರಿ ಕ್ಷೇತ್ರ
 ಗಜೇಂದ್ರಗಡ, ಕಾಲಕಾಲೇಶ್ವರ, ಭೈರಾಪುರ, ಭೈರಾಪುರ ತಾಂಡಾ, ಗೋಗೇರಿ, ನಾಗರಸಕೊಪ್ಪ ತಾಂಡಾ, ರಾಮಾಪುರ, ಹೊಸ ರಾಮಾಪುರ, ಜಿಗೇರಿ, ಮ್ಯಾಕಲ್‌ಝರಿ, ಕುಂಟೋಜಿ, ಬೆನಸಮಟ್ಟಿ ಮುಂತಾದ ಗ್ರಾಮಗಳಲ್ಲಿ ಈ ಹಿಂದೆ ಪ್ರತಿ ವರ್ಷ 8,265 ಹೆಕ್ಟೇರ್‌ಗೂ ಅಧಿಕ ತೊಗರಿ ಬೆಳೆಯಲಾಗುತ್ತಿತ್ತು.

ಅಲ್ಲದೆ, ಎಕರೆಗೆ 7 ರಿಂದ 8 ಕ್ವಿಂಟಲ್ ತೊಗರಿ ಬೆಳೆದು ಜೇಬು ತುಂಬ ಕಾಸು ಸಂಪಾದಿಸುತ್ತಿದ್ದರು. ಆದರೆ, ಎರಡು ವರ್ಷಗಳಿಂದ `ತೊಗರಿ~ ಬೆಳೆಯಿಂದ ರೈತರು ವಿಮುಖರಾಗಿದ್ದಾರೆ. ಇದರ ಮುಂದುವರಿದ ಭಾಗವಾಗಿ `ತೊಗರಿ~ ಬೆಳೆ ಕೇವಲ 300 ಹೆಕ್ಟೇರ್‌ಗೆ ಸೀಮಿತಗೊಂಡಿದೆ. ಇದರಿಂದಾಗಿ ತೊಗರಿ ಬಿತ್ತನೆ ಕ್ಷೇತ್ರದಲ್ಲಿ ಗಣನೀಯ ಇಳಿಕೆಯಾಗಿದೆ.

ತಲೆಸಾಲಿಗೆ ಮೀಸಲು
ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ಎಂದೇ ಪರಿಗಣಿಸಲ್ಪಟ್ಟ `ತೊಗರಿ~ ಇತ್ತೀಚಿನ ದಿನಗಳಲ್ಲಿ ಕೇವಲ ತಲೆಸಾಲಿಗೆ (ಹೊಲದ ಕೊನೆಯ ಸಾಲುಗಳಿಗೆ) ಮಾತ್ರ ಸೀಮಿತಗೊಂಡಿದೆ. ಮಳೆಯ ಕೊರತೆ, ಜಾರಿಯಾಗದ ಸರ್ಕಾರದ ಬೆಂಬಲ ಬೆಲೆ ಇತ್ಯಾದಿ ಕಾರಣಗಳಿಂದಾಗಿ ಪ್ರಮುಖ ವಾಣಿಜ್ಯ ಬೆಳೆಯಿಂದ ದೂರ ಉಳಿದ ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗ್ದ್ದಿದಾರೆ. ಪ್ರಮುಖ ಬೆಳೆಗಳ ಸಾಲಿನಲ್ಲಿದ್ದ ತೊಗರಿಗೆ ಮಾತ್ರ ಈಗ ಕೊನೆಯ ಸ್ಥಾನ ದೊರೆತಂತಾಗಿದೆ.

ಕಳೆದ ವರ್ಷ ಕ್ವಿಂಟಲ್‌ಗೆ 2500 ರಿಂದ 2800 ವರೆಗೆ ಇದ್ದ ತೊಗರಿ ಬೆಲೆ ಸದ್ಯ 4300 ರಿಂದ 4600 ವರೆಗೆ ಇದೆ. ಆದರೆ, ತೊಗರಿ ಬಿತ್ತನೆ ಪ್ರಮಾಣ ಕೇವಲ 300ಕ್ಕೆ ಮಾತ್ರ ಸೀಮಿತವಾಗಿದ್ದರಿಂದ ಮುಂಬರುವ ದಿನಗಳಲ್ಲಿ ತೊಗರಿ ಬೆಲೆ ಗಗನಕ್ಕೆ ಏರುವ ಸಾಧ್ಯತೆಗಳು ದಟ್ಟವಾಗಿವೆ.

ಹಲವು ದಶಕಗಳಿಂದಲ್ಲೂ ಸೂಕ್ತ ಬೆಲೆ ದೊರೆಯುತ್ತಿಲ್ಲ ಎಂಬ ಕೊರಗಿನಿಂದ `ತೊಗರಿ~ ಬೆಳೆಯಿಂದ ದೂರ ಉಳಿದು ಅನ್ಯ ಬೆಳೆ ಬೆಳೆಯಲು ಮುಂದಾದ ರೈತರು ಸದ್ಯದ ತೊಗರಿ ಬೆಲೆ ನೋಡಿ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.