ADVERTISEMENT

ಗಟಾರು ನೀರು ಅಂಗಡಿಯೊಳಗೆ...!

ಪ್ರಜಾವಾಣಿ ವಿಶೇಷ
Published 1 ಮೇ 2012, 6:25 IST
Last Updated 1 ಮೇ 2012, 6:25 IST

ಗದಗ: `ಮಳೆ ಬಂದರೆ ಸಾಕು ಚರಂಡಿ ನೀರು ಅಂಗಡಿಯೊಳಗೆ ನುಗ್ಗುತ್ತದೆ, ಕೆಟ್ಟ ವಾಸನೆ ಬಂದರೂ ಮೂಗು ಮುಚ್ಚಿ ಕೊಂಡು ವ್ಯಾಪಾರ ಮಾಡಬೇಕು, ಗ್ರಾಹಕರು ಬರಲು ಹಿಂಜರಿಯುತ್ತಾರೆ, ಸಮಸ್ಯೆ ಗೊತ್ತಿದ್ದರೂ ನಗರಸಭೆ ತಲೆಕೆಡಿಸಿ ಕೊಂಡಿಲ್ಲ~...

ಇದು ನಗರದ ಬ್ಯಾಂಕ್ ರಸ್ತೆಯಲ್ಲಿ ವ್ಯಾಪಾರ ಮಾಡುವ ಅಂಗಡಿ ಮಾಲೀಕರ ಅಳಲು. ಅಂಗಡಿಗಳ ಮುಂದೆಯೇ ಚರಂಡಿ ಹೂಳು ಸುರಿದಿರುವುದರಿಂದ ಮಾಲೀಕರು ನಗರಸಭೆ ವಿರುದ್ಧ ಕಿಡಿ ಕಾರಿದರು.

ಇದು ವ್ಯಾಪಾರಿಗಳ ಸಮಸ್ಯೆಯಷ್ಟೇ ಮಾತ್ರ ಅಲ್ಲ, ರಸ್ತೆಯಲ್ಲಿ ಓಡಾಡುವ ಜನರು ಸಹ ಮೂಗು ಮುಚ್ಚಿಕೊಂಡು ಓಡಾಡಬೇಕು. ಕಿರಿದಾದ ರಸ್ತೆ, ಪ್ರತಿದಿನ ಜನಜಂಗುಳಿ, ದ್ವಿ ಚಕ್ರವಾಹನ, ಕಾರು, ಆಟೋಗಳು ಸಂಚರಿಸುತ್ತವೆ. ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಪಾರ್ಕಿಂಗ್‌ಗಾಗಿಯೇ ಪ್ರತಿದಿನ ಜಗಳ ನಡೆಯುತ್ತದೆ. ಅಲ್ಲದೆ ಹಣ್ಣು, ಹೂವು, ತರಕಾರಿ, ಬಟ್ಟೆ, ಬ್ಯಾಂಕ್ ಹಾಗೂ ಹೋಟೆಲ್‌ಗಳು ಇರುವುದರಿಂದ ಸಹಜವಾಗಿ ಜನ ಸಂದಣಿ ಹೆಚ್ಚು.

ಹೀಗಿದ್ದರೂ ಈ ರಸ್ತೆಯಲ್ಲಿ ಸ್ವಚ್ಛತೆ ಎಂಬುದೇ ಇಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲ. ಅಂಗಡಿಗಳ ಮುಂದೆಯೇ ಚರಂಡಿ ಹೂಳು ತೆಗೆದು ಸುರಿಯ ಲಾಗಿದೆ. ನಾಲ್ಕು ದಿನಗಳ ಹಿಂದೆ ಪುರಸಭೆ ಸಿಬ್ಬಂದಿ ಚರಂಡಿ ಹೂಳು ತೆಗೆದು ಅಂಗಡಿ ಮುಂದೆ ಸುರಿದು ಹೋಗಿದ್ದಾರೆ. ನಗರಸಭೆ ಹೂಳು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗದೆ ಇರುವುದು ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

`ಕುಡಿಯುವ ನೀರು ಬಿಟ್ಟ ಸಂದರ್ಭದಲ್ಲಿ ಚರಂಡಿ ತುಂಬ ಹೂಳು ತುಂಬಿಕೊಂಡು ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತದೆ. ಹಿಂದೆ ಪ್ರತಿದಿನ ಕಸ ಗುಡಿಸುತ್ತಿದ್ದರು. ಈಗ ಕಸ ಗುಡಿಸಲು ಬರುವುದಿಲ್ಲ. ನಗರಸಭೆ ಕಣ್ಮುಂಚಿ ಕುಳಿತಿದೆ. ವಾರ್ಡ್ ಸದಸ್ಯರು ಇತ್ತ ಸುಳಿಯುತ್ತಿಲ್ಲ. ಚರಂಡಿ ತುಂಬಿ ಕೊಂಡಿರುವುದರಿಂದ ಸೊಳ್ಳೆಗಳು ಹೆಚ್ಚುತ್ತಿವೆ.

ಇದು ಆರೋಗ್ಯ ಮೇಲೆ ಪರಿಣಾಮ ಬೀರಲಿದೆ. ಚರಂಡಿ ವ್ಯವಸ್ಥೆಯನ್ನೆ ಸಂಪೂರ್ಣ ಬದಲಿಸಬೇಕು. ಪ್ರತಿ ಹದಿನೈದು ದಿನಕ್ಕೊಮ್ಮೆ ಚರಂಡಿ ತುಂಬಿ ಕೊಳ್ಳುತ್ತದೆ~ ಎಂದು ವ್ಯಾಪಾರಿಗಳು ಅಳಲು ತೋಡಿ ಕೊಂಡರು. ಈ ಬಗ್ಗೆ ವಾರ್ಡ್ ಸದಸ್ಯ ಸಿರಾಜ್ ಬಳ್ಳಾರಿ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.