ADVERTISEMENT

`ಗದಗದಲ್ಲಿ ನಾಲ್ಕು ಶುದ್ಧಗಂಗಾ ಘಟಕ'

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 7:13 IST
Last Updated 14 ಜೂನ್ 2013, 7:13 IST

ಗದಗ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಬಡ ಕುಟುಂಬಗಳಿಗೆ ರೂ. 84 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈದರಾಬಾದ ಕರ್ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಬೂದಪ್ಪ ಗೌಡ    ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2013-14ನೇ ಸಾಲಿನಲ್ಲಿ ಹಮ್ಮಿ ಕೊಂಡಿರುವ ಕಾರ್ಯಕ್ರಮಗಳ  ಬಗ್ಗೆ ಮಾಹಿತಿ ನೀಡಿದ ಅವರು, ಕೃಷಿ, ಟೈಲರಿಂಗ್, ಹೈನುಗಾರಿಕೆ, ಟಂ ಟಂ ಖರೀದಿಸಲು ಹಾಗೂ ಸ್ವ ಉದ್ಯೋಗ ಕೈಗೊಳ್ಳಲು ಸಾಲ ನೀಡಲಾಗುವುದು. ಅಲ್ಲದೇ ಮನೆ ದುರಸ್ತಿ, ಶೌಚಾಲಯ, ವಿದ್ಯುತ್ ಸಂಪರ್ಕ, ಗೊಬ್ಬರ್ ಅನಿಲ ಸ್ಥಾವರ, ಸೋಲಾರ್ ದೀಪ ಇತ್ಯಾದಿಗಳನ್ನು 11,792 ಕುಟುಂಬಗಳಲ್ಲಿ ಮಾಡಿಸಲಾಗುವುದು. ಕೃಷಿ, ಕೃಷಿಯೇತರ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ರೂ. 52.44 ಲಕ್ಷ ಅನುದಾನ ಖರ್ಚು ಮಾಡಲಾಗುವುದು ಎಂದು ನುಡಿದರು.

ಮಾರ್ಚ್ ಅಂತ್ಯಕ್ಕೆ 10673 ಪ್ರಗತಿಬಂಧು ಸ್ವ ಸಹಾಯ ಸಂಘಗಳ ರಚಿಸಲಾಗಿದೆ. 15350 ಕುಟುಂಬ ಗಳಲ್ಲಿ ಜೀವನ ಮಧುರ ವಿಮೆ, 1500 ಜಾನುವಾರುಗಳಿಗೆ ವಿಮೆ ಮಾಡಿಸಲಾಗುವುದು.  16200 ಪಿಂಚಣಿ ಮಾಡಿಸುವ ಯೋಜನೆ ರೂಪಿಸಲಾಗಿದೆ ಎಂದು ನುಡಿದರು.

ಕೃಷಿ ಮತ್ತು ಕೃಷಿಯೇತರ ಕಾರ್ಯಕ್ರಮವನ್ನು 13,191 ಕುಟುಂಬಗಳಲ್ಲಿ 12,287ಎಕರೆಗಳಲ್ಲಿ ಅನುಷ್ಠಾನ ಮಾಡಲಾಗುವುದು. ಫಲಾನುಭವಿಗಳಿಗೆ ತರಬೇತಿ, ಪ್ರಾತ್ಯಕ್ಷಿಕೆ, ಶಾಲೆಗಳಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ, ನಾಗರಿಕ ಪ್ರಜ್ಞಾ ಅಭಿಯಾನ, ಕಾಲೊನಿ ಅಭಿವೃದ್ಧಿ, ಆರೋಗ್ಯಕ್ಕೆ ಸಂಬಂಧಿಸಿದ ಒಟ್ಟು 98 ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದರು.

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಜಿಲ್ಲೆಯ ಹನ್ನೊಂದು ಕಡೆ (ಲಕ್ಷ್ಮೇಶ್ವರ, ಹಿರೆವಡ್ಡಟಿ, ಹೆಬ್ಬಾಳ, ಸೊರಟೂರು, ನೀರಲಗಿ, ಲಕ್ಕುಂಡಿ, ಕುರ್ತಕೋಟಿ, ಕೊಟುಮುಚಗಿ, ಹಾತಲಗೇರಿ, ಹೊಳೆ ಆಲೂರು, ಶಿರೋಳ) ಘಟಕಗಳನ್ನು ಸ್ಥಾಪಿಸಲಾಗಿದೆ.

ನಗರದಲ್ಲಿ ಹೊಸದಾಗಿ ನಾಲ್ಕು ಶುದ್ಧಗಂಗಾ ಘಟಕಗಳು ಪ್ರಗತಿ ಹಂತದಲ್ಲಿವೆ. ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರ ಇಚ್ಛಿಸಿದರೆ ಅದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ನಿರ್ದೇಶಕ ಜಯಂತ, ಯೋಜನಾಧಿಕಾರಿ ಸಂಜೀವ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.