ADVERTISEMENT

ಗಮನ ಸೆಳೆದ ಕೈಗಾರಿಕಾ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 5:55 IST
Last Updated 8 ಅಕ್ಟೋಬರ್ 2012, 5:55 IST

ಗದಗ: ಮನೆಯಲ್ಲಿಯೇ ಜೋಳ, ಅಕ್ಕಿ, ಗೋದಿ, ಬೇಳೆ, ಅರಿಶಿಣ ಬೀಸುವ ಹೊಸ ಯಂತ್ರ, ಪ್ಲಾಸ್ಟಿಕ್ ಹೂ ಮಾಲೆ, ಅತ್ಯಾಧುನಿಕ ಶ್ರವಣ ಸಾಧನ, ಬಾಯಲ್ಲಿ ನೀರು ತರಿಸುವ ತಿನಿಸುಗಳು, ಸ್ವಯಂ ಚಾಲಿತ ನೀರಿನ ಮಟ್ಟ ನಿಯಂತ್ರಿಸುವ ಮೋಟಾರು, ಮಕ್ಕಳು-ಹಿರಿಯರು ಧರಿಸುವ ವಿವಿಧ ಮಾದರಿ ಡ್ರೆಸ್‌ಗಳು, ಗಿಡಮೂಲಿಕೆಯಿಂದ ತಯಾರಿಸಿದ ಸೌಂದರ್ಯ ವರ್ಧಕಗಳು....

ಹೀಗೆ ಹತ್ತಾರು ಬಗೆಯ ವಸ್ತುಗಳು ಒಂದೆಡೆ ಸಿಗುವುದಾದರೆ ಎಷ್ಟು ಚೆಂದ. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ  ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭೇಟಿ ನೀಡಿದರೆ ಉತ್ಪನ್ನಗಳನ್ನು ವೀಕ್ಷಿಸುವ ಹಾಗೂ ಕೊಳ್ಳುವ ಅವಕಾಶ ಉಂಟು.

ಅಡುಗೆ ಮನೆಗೆ ಬೇಕಾಗುವ ವಸ್ತುಗಳು ಮತ್ತು ದಿನಸಿಯಿಂದ ಹಿಡಿದು ದಿನನಿತ್ಯದ ಬದುಕಿಗೆ ಬೇಕಾದ ಬಹುತೇಕ ಉತ್ಪನ್ನಗಳು ಇಲ್ಲಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಸಂಸ್ಥೆ ತಯಾರಿಸಿದ ಗಿಡಮೂಲಿಕೆ ಉತ್ಪನ್ನಗಳು, ನೋವಿನ ಎಣ್ಣೆ, ಸೋಪು, ಅಟಿಕೆ ಸಾಮಾನು, ಸ್ತ್ರೀ ಶಕ್ತಿ ಸಂಘಗಳು ಸಿದ್ಧಪಡಿಸಿದ ಸೀರೆಗಳು, ತಿನಿಸುಗಳು, ಕಡಿಮೆ ಕಿವಿ ಕೇಳಿಸುವವರಿಗೆ ಶ್ರವಣ ಸಾಧನ, ರಾಗಿಯಿಂದ ತಯಾರಿಸಿದ ತಿನಿಸು ಮಳಿಗೆಗಳ ಬಳಿ ಗ್ರಾಹಕರು ಹೆಚ್ಚು ಭೇಟಿ ನೀಡುತ್ತಿದ್ದಾರೆ.

ಅಲ್ಲದೇ ವಿಶೇಷವಾಗಿ ತಯಾರಿಸಿದ ಖಾರಾ, ಚೂಡಾ, ಚಕ್ಕಲಿ, ಶೇಂಗಾ ಚಟ್ನಿ, ಉಪ್ಪಿನಕಾಯಿ, ರುಚಿಯಾದ ಸಂಡಗಿ, ಹಪ್ಪಳ, ಕರದಂಟು ಗೃಹಿಣಿಯರನ್ನು ಆಕರ್ಷಿಸುತ್ತಿದೆ.

ಮಾರುಕಟ್ಟೆಗೆ ಹೊಸದಾಗಿ ಬಂದಿರುವ ಬೈಕ್‌ಗಳು, ಸೋಲಾರ್ ಲ್ಯಾಂಪ್,  ಸುಂದರ ಕಲಾಕೃತಿಗಳು, ಮಕ್ಕಳ ಗೊಂಬೆಗಳು, ಗೋಡೆಗೆ ಮಳೆ ಹೊಡೆಯದೆ ಮೂರು ಕೆ.ಜಿ.ವರೆಗೂ ನೇತು ಹಾಕುವ ವಾಲ್ ಹುಕ್, ಗೋಲ್ಡ್- ಶಾರ್ಕ್ ಫಿಶ್‌ಗಳನ್ನು ಸಹ ಕೊಂಡುಕೊಳ್ಳಲು ಅವಕಾಶ ಇದೆ. ಖ್ಯಾತ ಸಾಹಿತಿಗಳು, ಲೇಖಕರು ಬರೆದಿರುವ ಪುಸ್ತಕಗಳನ್ನು ಕೊಂಡರೆ ಶೇ.10 ರಿಯಾಯಿತಿ ಸಹ ಉಂಟು.

ಕೈಗಾರಿಕಾ ಉದ್ಯಮವನ್ನು ಉತ್ತೇಜಿ ಸಲು ಹಾಗೂ ಗ್ರಾಹಕರಿಗೆ ಉತ್ಪನ್ನ ಗಳನ್ನು ಪರಿಚಯಿಸುವುದರ ಜತೆಗೆ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಉತ್ಪನ್ನ ಒದಗಿಸಲು ಜಿಲ್ಲಾ ವಾಣಿಜ್ಯೋ ದ್ಯಮ ಸಂಸ್ಥೆ ಹನ್ನೆರಡು ವರ್ಷದಿಂದ ವೇದಿಕೆ ಒದಗಿಸಿಕೊಂಡು ಬರುತ್ತಿದೆ. 80 ಮಳಿಗೆಗಳನ್ನು ತೆರೆಯಲಾಗಿದೆ.

ಚನ್ನಪಟ್ಟಣ, ಹುಬ್ಬಳ್ಳಿ, ಮೈಸೂರು, ವಿಜಾಪುರ, ಬಾಗಲಕೋಟೆ, ಬೆಂಗಳೂರು, ತಮಿಳುನಾಡು, ಗದಗ ಮತ್ತು ಸುತ್ತಮುತ್ತಲ ಪ್ರದೇಶ ಗಳಿಂದ ವ್ಯಾಪಾರಿಗಳು ಆಗಮಿಸಿದ್ದಾರೆ. ಮೇಳಕ್ಕೆ ಭೇಟಿ ನೀಡುವವರು ಸಂಜೆ ವೇಳೆ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಬಹುದು. ಅ.8 ಮೇಳಕ್ಕೆ ತೆರೆ ಬೀಳಲಿದ್ದು, ಉಚಿತ ಪ್ರವೇಶ. ಸಾರ್ವಜನಿಕರು ಬೆಳಿಗ್ಗೆ 10ರಿಂದ ರಾತ್ರಿ 9.30ರವರೆಗೆ ಭೇಟಿ ನೀಡಬಹುದು.

`ಗುಡಿ ಕೈಗಾರಿಕೆ ಮತ್ತು ಮಹಿಳೆ ಉದ್ದಿಮೆದಾರರಿಗೆ ಪ್ರೋತ್ಸಾಹ ಹಾಗೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚ ಯಿಸಲು ಮೇಳ ಆಯೋಜಿಸಿಕೊಂಡು ಬರಲಾಗಿದೆ. ಆಹಾರ ಉತ್ಪನ್ನಗಳು ಮನೆಯಲ್ಲಿಯೇ ಹೇಗೆ ತಯಾರು ಮಾಡ ಬಹುದು ಎಂಬುದು ಗೊತ್ತಾಗಬೇಕು. ರೂ 50-60 ಲಕ್ಷ ವಹಿವಾಟು ನಿರೀಕ್ಷಿಸಲಾಗಿದೆ. ಸ್ಥಳೀಯ ಕಲಾವಿದ ರನ್ನು ಪ್ರೋತ್ಸಾಹಿಸಲು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜಿ ಸಲಾಗಿದೆ~ ಎಂದು ಜಿಲ್ಲಾ ವಾಣಿಜ್ಯೋ ದ್ಯಮ ಸಂಸ್ಥೆ ಅಧ್ಯಕ್ಷ ಡಿ.ಡಿ.ಪುಣೇಕರ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.