ADVERTISEMENT

ಚರಗ ಚೆಲ್ಲಿದರು; ಉಣಬಡಿಸಿ ಸಂಭ್ರಮಿಸಿದರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 9:17 IST
Last Updated 19 ಡಿಸೆಂಬರ್ 2017, 9:17 IST

ಗದಗ: ಮಳೆಗಾಲ ಮುಗಿದು ಚಳಿಗಾಲ ಪ್ರವೇಶಿಸುವ ಸಂಕ್ರಮಣ ಕಾಲದಲ್ಲಿ, ಹಿಂಗಾರು ಹಂಗಾಮಿನ ಬೆಳೆಗಳು ಹಸಿರಿನಿಂದ ಕಂಗೊಳಿಸುವ ಸಂದರ್ಭದಲ್ಲಿ ಬರುವ ಎಳ್ಳ ಅಮಾವಾಸ್ಯೆಯನ್ನು ಸೋಮವಾರ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಬುಟ್ಟಿಯಲ್ಲಿ ತುಂಬಿಕೊಂಡು, ಎತ್ತಿನ ಗಾಡಿಯಲ್ಲಿ ಹೊಲಕ್ಕೆ ಬರುವುದು, ಭೂ ತಾಯಿಗೆ ಪೂಜೆ ಸಲ್ಲಿಸುವುದು, ಬಳಿಕ ಜತೆಯಾಗಿ ಊಟ ಮಾಡುವುದು ಈ ಹಬ್ಬದ ವೈಶಿಷ್ಟ್ಯ. ಎರಿ (ಕಪ್ಪು ಮಣ್ಣು) ಭೂಮಿಯನ್ನು ಹೊಂದಿರುವ ರೈತರಿಗೆ ಕೃಷಿ ಚಟುವಟಿಕೆಗಳು ಗರಿಗೆದರುವ ಕಾಲವಿದು. ಎರಿ ಭೂಮಿ ಹೊಂದಿರುವ ಗದಗ, ನರಗುಂದ, ರೋಣ, ಗಜೇಂದ್ರಗಡ ತಾಲ್ಲೂಕುಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು.

ಖಡಕ್‌ ರೊಟ್ಟಿ, ಎಣಗಾಯಿ, ಹೆಸರು ಕಾಳು, ಶೇಂಗಾ, ಅಗಸಿ, ಗುರೆಳ್ಳು ಚಟ್ನಿ, ಮೊಸರು, ಕಡಬು, ಕರ್ಚಿಕಾಯಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಮೊಸರನ್ನ ಸಂಡಿಗೆ, ಹಪ್ಪಳ ಈ ಹಬ್ಬದ ವಿಶೇಷ ಭೋಜನಗಳು.

ADVERTISEMENT

ಚರಗ ಚೆಲ್ಲುತ್ತಾರೆ: ಹೊಲದಲ್ಲಿ ಬನ್ನಿ ಗಿಡದ ಬುಡದಲ್ಲಿ ಐದು ಕಲ್ಲುಗಳನ್ನು ಇಟ್ಟು, ಎಡೆ ಹಿಡಿದು, ಅದರಲ್ಲಿ ಸ್ವಲ್ಪ ನೀರು ಬೆರಿಸಿ, ಎಡೆ ಮಿಶ್ರಿತ ನೀರನ್ನು ಹೊಲದ ತುಂಬೆಲ್ಲಾ ಸಿಂಪಡಿಸುತ್ತಾರೆ. ಮುಂದಿರುವ ಜನರು ಹುಲ್ಲುಲ್ಗೋ... ಹುಲ್ಲುಲ್ಗೋ... ಎನ್ನುತ್ತಾ ಸಾಗಿದರೆ ಹಿಂದೆ ಇರುವವರು ಚಲ್ಲಂಬರ್ಗೊ... ಚಲ್ಲಂಬರ್ಗೊ... ಎಂದು ಕೂಗುತ್ತಾ ಸಾಗುತ್ತಾರೆ. ಇದನ್ನೇ ಈ ಭಾಗದಲ್ಲಿ ಚರಗ ಚೆಲ್ಲುವುದು ಎನ್ನುತ್ತಾರೆ.

ನಗರ ಪ್ರದೇಶದ ಜನರು ನಿತ್ಯದ ಜಂಜಾಟದಿಂದ ಬಿಡುವು ಮಾಡಿಕೊಂಡು ಹಬ್ಬದ ಊಟ ಸವಿಯಲು ಗ್ರಾಮಾಂತರ ಪ್ರದೇಶದ ಹೊಲಗಳಿಗೆ ಭೇಟಿ ನೀಡುತ್ತಾರೆ. ಸೋಮವಾರ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು. ನಗರ ಪ್ರದೇಶಗಳಿಂದಲೂ ಸಾಕಷ್ಟು ವಾಹನಗಳು ಹಳ್ಳಿಗಳತ್ತ ಮುಖ ಮಾಡಿದ್ದವು. ಹಳ್ಳಿಗಳಲ್ಲಿ ಹೊಲದ ಹಾದಿಗಳು ಎತ್ತಿನ ಗಾಡಿಗಳಿಂದ ತುಂಬಿ ಹೋಗಿದ್ದವು. ರೈತರು ಬೆಳಿಗ್ಗೆಯೇ ಎತ್ತುಗಳ ಮೈ ತೊಳೆದು ಚಕ್ಕಡಿಗಳನ್ನು ಸಿಂಗರಿಸಿ ಮಧ್ಯಾಹ್ನದ ಹೊತ್ತಿಗೆ ಬಂಡಿಯಲ್ಲಿ ಮಕ್ಕಳು, ಮಹಿಳೆಯರನ್ನು ಕೂಡಿಸಿಕೊಂಡು ಹೊಲಗಳಿಗೆ ತೆರಳಿದರು. ಬಂಧು–ಬಳಗದವರನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಉಣಬಡಿಸಿ ಸಂಭ್ರಮಿಸಿದರು.

ಈ ಬಾರಿ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಎಳ್ಳ ಅಮಾವಾಸ್ಯೆ ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ರೈತರು ಕೃಷಿಯಲ್ಲಿ ಕಳೆದುಕೊಂಡಿರುವ ನಂಬಿಕೆ, ವಿಶ್ವಾಸ ಮರಳಿ ಮೂಡಿದಂತೆ ಕಣ್ಣುಹಾಯಿಸಿದ ಕಡೆಗೆಲ್ಲಾ ಹಸಿರು ಮೂಡಿದೆ. ಪ್ರಸಕ್ತ ಹಿಂಗಾರಿನ ಬೆಳೆಗಳಾದ ಬಿಳಿಜೋಳ, ಗೋಧಿ, ಕಡಲೆ ಬೆಳೆಗಳು ಹುಲುಸಾಗಿ ಬೆಳೆದು ನಿಂತಿವೆ. ಉತ್ತಮ ಫಸಲು ಕೊಟ್ಟು ಮನೆ ತುಂಬ ಧಾನ್ಯ ತುಂಬುವಂತೆ ಮಾಡು ಭೂಮಿತಾಯಿ ಎಂದು ಭಕ್ತಿಯಿಂದ ಬೇಡಿಕೊಂಡು ಮರಳಿ ಮನೆಯ ಹಾದಿ ಹಿಡಿದರು. ಬರುವಾಗ ಕಾಯಿ ತುಂಬಿಕೊಂಡ ಕಡಲೆಗಿಡಗಳನ್ನು ಕಿತ್ತುಕೊಂಡು ಬಾಯಿ ಚಪ್ಪರಿಸುತ್ತ ಹೆಜ್ಜೆ ಹಾಕಿದರು.

ನರಗುಂದ: ಎಳ್ಳ ಅಮವಾಸ್ಯೆಯನ್ನು ತಾಲ್ಲೂಕಿನಾದ್ಯಂತ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಹೊಲದತ್ತ ಮುಖ ಮಾಡಿದ ರೈತರು ಸಿಂಗರಿಸಿದ ಎತ್ತು ಚಕ್ಕಡಿಗಳೊಂದಿಗೆ ತೆರಳಿದರು. ಮುಂಗಾರು ಕೈಕೊಟ್ಟರೂ ಈ ಬಾರಿ ಹಿಂಗಾರು ಕೈ ಹಿಡಿದಿದೆ. ಜಮೀನುಗಳಲ್ಲಿ ಕಡಲೆ, ಗೋಧಿ, ಜೋಳ ಬೆಳೆಗಳು ಭೂತಾಯಿಗೆ ಹಸಿರು ಸೀರೆ ತೊಡಿಸಿದಂತೆ ಕಂಡು ಬಂದು ರೈತರ ಮೈ, ಮನಗಳಿಗೆ ಚೈತನ್ಯ ತುಂಬಿದಂತೆ ಕಂಡಿತು.

ಡಂಬಳ: ಕಳೆದ ನಾಲ್ಕು ವರ್ಷಗಳಿಂದ ಬರದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಈ ಬಾರಿ ಹಿಂಗಾರು ಬೆಳೆ ಚೆನ್ನಾಗಿ ಬಂದಿದೆ. ಹೀಗಾಗಿ ಹೋಬಳಿಯಲ್ಲಿ ಎಳ್ಳ ಅಮವಾಸ್ಯೆ ಸಂಭ್ರಮ ಮುಗಿಲು ಮುಟ್ಟಿತ್ತು. ರೈತರು ಖುಷಿಯಿಂದ ಭೂತಾಯಿಗೆ ಚರಗ ಚೆಲ್ಲಿ ಧನ್ಯವಾದ ಅರ್ಪಿಸಿದರು. ಡಂಬಳ, ಡೋಣಿ, ಮೇವುಂಡಿ ಚಿಕ್ಕವಡ್ಡಟ್ಟಿ, ಕದಾಂಪುರ, ಪೇಠಾಲೂರ, ಹಿರೇವಡ್ಡಟ್ಟಿ ಗ್ರಾಮಗಳಲ್ಲಿ ಬೆಳಗ್ಗೆಯೇ ರೈತರು ಚಕ್ಕಡಿ, ಟ್ರ್ಯಾಕ್ಟರ್‌ಗಳನ್ನು ಸಿಂಗರಿಸಿಕೊಂಡು ಹೊಲಕ್ಕೆ ತೆರಳಿದರು.

ನರೇಗಲ್: ಪಟ್ಟಣದಲ್ಲಿ ಸೋಮವಾರ ವಿಜೃಂಭನೆಯಿಂದ ಎಳ್ಳ ಅಮವಾಸೆ ಆಚರಿಸಲಾಯಿತು. ರೈತರು ಎತ್ತುಗಳನ್ನು ಸಿಂಗಾರ ಮಾಡಿಕೊಂಡು ಬಂಡಿ ಕಟ್ಟಿ ಹೊಲಗಳಿಗೆ ಹೋಗಿ ಪೂಜೆ ಸಲ್ಲಿಸಿದರು.

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿದಂತೆ ಸಮೀಪದ ಗೊಜನೂರು, ಮಾಗಡಿ, ಯಳವತ್ತಿ, ಯತ್ನಳ್ಳಿ, ಮಾಡಳ್ಳಿ, ಬಸಾಪುರ, ಧರ್ಮಾಪುರ ಏರಿ, ಬಟ್ಟೂರು, ಪುಟಗಾಂವ್‌ ಬಡ್ನಿ, ಹುಲ್ಲೂರು, ಗೋವನಾಳ ಗ್ರಾಮ ಗಳಲ್ಲಿ ಎಳ್ಳ ಅಮಾವಾಸ್ಯೆಯನ್ನು ವಿಜೃಂಭನೆ ಯಿಂದ ಆಚರಿಸಲಾಯಿತು.

ಗಜೇಂದ್ರಗಡ: ಪಟ್ಟಣ ಹಾಗೂ ಸಮೀಪದ ಗ್ರಾಮಗಳಲ್ಲಿ ಗ್ರಾಮೀಣ ಪ್ರದೇಶದ ರೈತರ ಹಬ್ಬವಾದ ಎಳ್ಳ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ರೋಣ: ತಾಲ್ಲೂಕಿನಲ್ಲಿ ಹಿಂಗಾರು ಬೆಳೆ ಉತ್ತಮವಾಗಿದ್ದು ರೈತರಲ್ಲಿ ಹೊಸ ಹರುಷ ತಂದಿದೆ. ಕಳೆದ. ಎರಡು ವರ್ಷ ಗಳಿಂದ ಎಳ್ಳ ಅಮವಾಸ್ಯೆ ಅಷ್ಟೊಂದು ವಿಜೃಂಭನೆ ಇರಲಿಲ್ಲ. ಈ ಬಾರಿ ಹಸಿರು ಹೊತ್ತುನಿಂತ ಹೊಲಗಳನ್ನು ಕಂಡು ರೈತರು ಸಂತಸಬಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.