ADVERTISEMENT

ಚರಗ ಚೆಲ್ಲಿದರು: ಹೊಟ್ಟೆ ತುಂಬ ಉಂಡರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:57 IST
Last Updated 2 ಜನವರಿ 2014, 6:57 IST

ರೋಣ: ಖಡಕ್‌ ರೊಟ್ಟಿ, ಎಣ್ಣಿಗಾಯಿ, ಹೆಸರು ಕಾಳು, ಶೇಂಗಾ, ಅಗಸಿ, ಗುರೆಳ್ಳು ಚಟ್ನಿ, ಮೊಸರು, ಕಡಬು ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ ತುಪ್ಪ ಉಪಿನಕಾಯಿ, ಕೊಸಂಬರಿ, ಚಿತ್ರನ್ನ, ಮೊಸರನ್ನ ಸಂಡಿಗೆ, ಹಪ್ಪಳ, ಬಾಣ, ಹಾಲಮಜ್ಜಿಗೆ ಆಹಾ ಒಂದಕ್ಕಿಂತ ಒಂದು ರುಚಿ.

ಹೌದು ಎಳ್ಳ ಅಮಾವಾಸ್ಯೆ ಅಂಗವಾಗಿ ಬುಧವಾರ ಎರೆ (ಕಪ್ಪು) ಹೊಲ ಇರುವ ರೈತರು ಇಂಥ ಬಗೆ ಬಗೆಯ ಖಾರ, ಸಿಹಿಯೂಟ ಸಿದ್ಧಪಡಿಸಿ ತಮ್ಮ ಬಂಧು–ಬಳಗದವರನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಉಣಬಡಿಸಿ ಸಂಭ್ರಮಿಸಿದರು. ಪ್ರಸಕ್ತ ವರ್ಷದ ಎಳ್ಳ ಅಮಾವಾಸ್ಯೆ ರೈತರಲ್ಲಿ ಎಲ್ಲಿಲ್ಲದ ಉತ್ಸಾಹ ತಂದಿತು.

ಹೊಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಹಿಂಗಾರು ಬೆಳೆಗಳು ದಾರಿಹೋಕರ ಕಣ್ಮನ ಸೆಳೆಯುತ್ತಿವೆ. ಉತ್ತಮ ಫಸಲು ಬರುವ ಮುನ್ಸೂಚನೆ ಕೊಟ್ಟಿದ್ದು ರೈತ ಸಮುದಾಯಕ್ಕೆ ಹರ್ಷ ತಂದಿದೆ. ಹೀಗಾಗಿಯೇ  ರೈತರು ಬೆಳಿಗ್ಗೆಯೇ ಎತ್ತುಗಳ ಮೈ ತೊಳೆದು ಜೂಲಾ ಹಾಕಿ ಚಕ್ಕಡಿಗಳನ್ನು ಶೃಂಗರಿಸಿಕೊಂಡು ಮಧ್ಯಾಹ್ನದ  ಹೊತ್ತಿಗೆ ಬಂಡಿಯಲ್ಲಿ ಮಕ್ಕಳು, ಮಹಿಳೆಯರನ್ನು ಕೂಡಿಸಿಕೊಂಡು ಹೊಲಗಳಿಗೆ ತೆರಳಿದರು.

ಎತ್ತಿನ ಬಂಡಿ ಇಲ್ಲದವರು ಗುಂಪು ಗುಂಪಾಗಿ  ಕಾಲ್ನಡಿಗೆ, ಟ್ರ್ಯಾಕ್ಟರ್‌, ಟಂಟಂಗಳಲ್ಲಿ ಹೊಲಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂದಿತು. ಹೊಲ ಇಲ್ಲದ ನೆರೆಹೊರೆಯ ಮಿತ್ರರಿಗೆ ಔತಣ  ಕೊಟ್ಟು ಅವರನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊಲದಲ್ಲಿ ಬನ್ನಿಮರ ಇರುವ ಜಾಗದಲ್ಲಿ ಹಿಂಗಾರು ಬೆಳೆಗಳ ಕೆಳಗೆ ಸುಣ್ಣ ಬಳಿದ ಐದು ಸಣ್ಣ ಸಣ್ಣ ಕಲ್ಲುಗಳನ್ನು ಇಟ್ಟು  ರೈತ ಮಹಿಳೆಯರು ಪೂಜೆ ಸಲ್ಲಿಸಿ ಎಡೆ ಹಿಡಿದರು ನಂತರ ಮನೆಯವರೆಲ್ಲ ಸೇರಿಕೊಂಡು ಹುಲ್ಲುಲ್ಲೋ... ಸಲಾಮರ್ಗೋ ಹುಲ್ಲುಲ್ಗೋ... ಸಲಾಮರೋ.... ಎಂದು ಭೂ ತಾಯಿಗೆ ನಮಿಸುತ್ತ ಹೊಲದ ತುಂಬೆಲ್ಲ ಸುತ್ತಿ ಚರಗಾ ಚಲ್ಲಿದರು. ನಂತರ ಬಂಧು–ಮಿತ್ರರೊಂದಿಗೆ ಸೇರಿಕೊಂಡು ಸಿಹಿಯೂಟ ಸವಿದು ಸಂಭ್ರಮಿಸಿದರು.

ಪ್ರಸಕ್ತ ಹಿಂಗಾರಿನ ಬೆಳೆಗಳಾದ ಬಿಳಿಜೋಳ, ಗೋಧಿ, ಕಡಲೆ, ಸೂರ್ಯಕಾಂತಿ, ಕುಸಬಿ, ಸೇರಿದಂತೆ ಎಲ್ಲ ಬೆಳೆಗಳು ಯಾವುದೇ ರೋಗ ಕೀಟಗಳ ಹಾವಳಿ ಇಲ್ಲದೆ ಹುಲುಸಾಗಿ ಬೆಳೆದು ನಿಂತಿವೆ ಹೀಗಾಗಿ ರೈತ  ಕುಟುಂಬಗಳು ಸಂತಸದಿಂದಲೇ ಭೂತಾಯಿಗೆ ಪೂಜೆ ಸಲ್ಲಿಸಿ ತಮ್ಮ ಮೇಲೆ ಮುನಿಸಿಕೊಳ್ಳದೇ ಕೈಹಿಡಿದು ಮುನ್ನೆಡೆಸು, ಉತ್ತಮ ಫಸಲು ಕೊಟ್ಟು ಮನೆ ತುಂಬ ಧಾನ್ಯ ತುಂಬುವಂತೆ ಮಾಡು ತಾಯಿ ಎಂದು ಭಕ್ತಿಯಿಂದ ಬೇಡಿಕೊಂಡರು.

ಹೊಟ್ಟೆ ತುಂಬ ಊಟ ಮಾಡಿ, ಹೊಲದಲ್ಲಿನ ಬೆಳೆಗಳನ್ನು ವೀಕ್ಷಿಸಿದ ಮಕ್ಕಳು, ಮಹಿಳೆಯರು ಸಂಜೆ ಹೊತ್ತು ಕಾಯಿ ತುಂಬಿಕೊಂಡ ಕಡಲೆಗಿಡಗಳನ್ನು ಕಿತ್ತುಕೊಂಡು ಬಾಯಿ ಚಪ್ಪರಿಸುತ್ತ ಮನೆಯತ್ತ ಹೆಜ್ಜೆ ಹಾಕಿದರು.

ಗಜೇಂದ್ರಗಡದಲ್ಲಿ ಎಳ್ಳ ಅಮಾವಾಸ್ಯೆ
ಗಜೇಂದ್ರಗಡ:
ಉತ್ತರ ಕರ್ನಾಟಕದ ಕೃಷಿಕ ಸಮೂಹದ ಕೊನೆಯ ಹಾಗೂ ಪ್ರಮುಖ ಮಣ್ಣಿನ ಪೂಜೆಯಾದ ‘ಎಳ್ಳ ಅಮಾವಾಸ್ಯೆ’ಯನ್ನು ಬುಧವಾರ ರೈತ ಸಮೂಹ ಅತ್ಯಂತ ಸಡಗರ–ಸಂಭ್ರಮದಿಂದ ಆಚರಿಸಿದರು. ಕಳೆದ ಮೂರು ವರ್ಷಗಳಿಂದ ತಲೆದೋರಿದ್ದ ಭೀಕರ ಬರದಿಂದ ಮಂಕು ಕವಿದಿದ್ದ ‘ಎಳ್ಳ ಅಮಾವಾಸ್ಯೆ’ಗೆ ಪ್ರಸಕ್ತ ವರ್ಷ ಸುರಿದ ಸಮರ್ಪಕ ಮಳೆಯಿಂದಾಗಿ ಕೃಷಿ ಕ್ಷೇತ್ರ ಸಮೃದ್ಧಿಯಿಂದ ಫಸಲನ್ನು ಹೊಂದಿ ಹಸಿರಿನಿಂದ ಹೂಂಕರಿಸುತ್ತಿದೆ. ಇದರಿಂದಾಗಿ ಮೂರು ವರ್ಷಗಳಿಂದ ನಿರುತ್ಸಾಹದಿಂದ ಆಚರಿಸಿದ ಎಳ್ಳ ಅಮಾವಾಸ್ಯೆಗೆ ಪ್ರಸಕ್ತ ವರ್ಷ ವಿಶೇಷ ಮೆರೆಗು ದೊರೆತಿದೆ.

‘ಮಣ್ಣಿನ ಮಗನೆಂದು ಕರೆಯಿಸಿಕೊಳ್ಳುವ ರೈತನ ದೃಷ್ಟಿಯಲ್ಲಿ ಮಣ್ಣು ಎಂದೂ ಕೀಲಾದ ವಸ್ತುವಲ್ಲ. ಮಣ್ಣು ಸಂಪತ್ತನ್ನು ಹೆರುವ ಜೀವಶಕ್ತಿ.
ಮಣ್ಣು ಹೊನ್ನುಗಳೆರಡೂ ಆತನ ಪಾಲಿಗೆ ಅಭೇದ ವಸ್ತುಗಳು. ದುಡಿಯುವ ಬಾಳಿಗೆ ಮಣ್ಣೇ ಹೊನ್ನಾಗಿ ಪರಿಣಮಿಸುತ್ತದೆ. ಕೃಷಿ ಚಟುವಟಿಕೆಗಳು ತೀವ್ರಗೊಳ್ಳುವ ಕಾಲ. ಹೀಗಾಗಿ ಎರಿ ಪ್ರದೇಶದ ಕೃಷಿಕರು ಹಿಂಗಾರು ಹಂಗಾಮಿನಲ್ಲಿ ಬಿತ್ತುವ ಗೋಧಿ, ಜೋಳ, ಕಡಲೆ ಬೆಳೆಗಳು ಹುಲುಸಾಗಿ ಬೆಳೆಯಲಿ ಎಂದು ಪ್ರಾರ್ಥಿಸುವ ಹಬ್ಬವೇ ಎಳ್ಳ ಅಮಾವಾಸ್ಯೆ.

ಹಿಂಗಾರು ಫಸಲು ನೋಡುವ ಕಣ್ಣಿಗೆ  ಹಬ್ಬದಂತೆ ಗೋಚರಿಸಿ, ಭೂದೇವಿಯ ಪೂಜೆಗಾಗಿ ಹುಟ್ಟಿದ್ದೇ ಎಳ್ಳ ಅಮಾವಾಸ್ಯೆ. ಅಂದು ರೈತರು ಎತ್ತುಗಳ ಮೈ ತೊಳೆದು ಮಧ್ಯಾಹ್ನದ ವೇಳೆಗೆ ಎತ್ತುಗಳಿಗೆ ಜೂಲಾ ಉತ್ಯಾದಿ ಆಕರ್ಷಕ ವಸ್ತುಗಳನ್ನು ಹಾಕಿ  ಶೃಂಗರಿಸಿ, ಬಂಡಿ ಹೂಡಿ, ಮಹಿಳೆಯರು, ಮಕ್ಕಳು ಹಾಗೂ ಹಿರಿಯರನ್ನು ಕುಳ್ಳರಿಸಿಕೊಂಡು,  ಭಕ್ಷಗಳನ್ನಿಟ್ಟುಕೊಂಡು ಸಾಲು ಬಂಡಿಗಳಲ್ಲಿ ಹೊಲಗಳಿಗೆ ತೆರಳಿದರು.
ಹಿಂಗಾರು ಹಂಗಾಮಿನ ಬೆಳೆಗಳು ಮೈತುಂಬಿಕೊಂಡು ಕಂಗೊಳಿಸುವ ಹೊಲದ ಮಧ್ಯೆ ಕುಳಿತು ಭೂತಾಯಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಇದೇ ಕಾರಣಕ್ಕಾಗಿಯೇ ಎಳ್ಳ ಅಮಾವಾಸ್ಯೆಗೆ ‘ಲಕ್ಷ್ಮೀ ಯರಿಗೆ ಬರ್ತಾಳೆ’ ಎಂಬ ಪ್ರತೀತಿ ಇದೆ.

ರೈತ ಮಹಿಳೆಯರು ಫಸಲಿನ ಕೆಳಗೆ ಕುಳಿತು ಪಂಚ ಭೂತಗಳ ಪ್ರತೀಕವಾಗಿ ಐದು  ಸಣ್ಣ ಕಲ್ಲುಗಳನ್ನು ಜೋಳ, ಗೋಧಿ, ಕಡಲೆಯ ಫಸಲಿನ ಕೆಳಗಿಟ್ಟು ಅವುಗಳಿಗೆ ಸುಣ್ಣ ಹಚ್ಚುತ್ತಾರೆ. ಒಂದನ್ನು ನಾಲ್ಕು ಕಲ್ಲುಗಳ ಹಿಂದೆ ಇಟ್ಟು ಅದನ್ನು ಕಳ್ಳನೆಂದು ಪೂಜಿಸಿದರು. ಪೂಜೆಯ ಬಳಿಕ ಎಡೆ ಹಿಡಿದು ಅದರಲ್ಲಿನ ಸ್ವಲ್ಪ ಭಾಗವನ್ನು ಕೈಯಲ್ಲಿ ಹಿಡಿದು ಸ್ವಲ್ಪ ನೀರಿಗೆ ಬೆರೆಸಿ, ಎಡೆ ಮಿಶ್ರಿತ ನೀರನ್ನು ಹೊಲದ ತುಂಬೆಲ್ಲಾ ಸಿಂಪಡಿಸುತ್ತಾರೆ. ಮುಂದಿನ ಜನರು ಹುಲ್ಲುಲ್ಗೋ...  ಹಯಲ್ಲುಲ್ಗೋ... ಎಂದರೆ ಹಿಂದಿರುವವರು ಚಲ್ಲಂಬರ್ಗೋ... ಚಲ್ಲಂಬರರ್ಗೋ... ಎಂದು ಕೂಗುತ್ತಾ ಚರಗಾ ಚೆಲ್ಲಿದರು. .

ಹೊಲಗಳಿಗೆ ತಮ್ಮ ಬಂಧು ಬಳಗವನ್ನು ಕರೆದೊಯ್ದು ಪೂಜೆಯ ಬಳಿಕ ಬೆಳೆ ಮಧ್ಯೆ ಬಿಳಿ ಜೋಳ, ಸಜ್ಜಿಯ ಖಡಕ್‌ ರೊಟ್ಟಿ, ಶೇಂಗಾ ಚಟ್ನಿ, ಗುರೆಳ್ಳ ಚಟ್ನಿ, ಚದನೆಕಾಯಿ ಪಲ್ಯ, ಮೊಸರು, ಎಳ್ಳ ಹೋಳಿಗೆ, ಕರಿಗಡಬು, ಕೋಸುಂಬರಿ, ಸಂಡಿಗೆ, ಹೋಳಿಗೆ, ತುಪ್ಪ ಹಲವು ಬಗೆಯ ಕಾಳು ಪಲ್ಯ ಮುಂತಾದ ಭಕ್ಷ್ಯಗಳನ್ನು ಸವಿದು ಸಂಭ್ರಮಿಸಿದರು. ಊಟ ನಂತರ  ಎಲೆಗಳನ್ನು ತುಳಿಯದಂತೆ ಭೂಮಿಯಲ್ಲಿ ಹೂಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.