ADVERTISEMENT

ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ನಿಗಾ

ಸೂಕ್ಷ್ಮ ಮತಕ್ಷೇತ್ರಗಳ ಪಟ್ಟಿಯಲ್ಲಿ ಗದಗ; ದಿನದ 24 ಗಂಟೆಯೂ ಸಿಬ್ಬಂದಿ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 8:47 IST
Last Updated 7 ಏಪ್ರಿಲ್ 2018, 8:47 IST

ಗದಗ: ಚುನಾವಣೆ ಸಂದರ್ಭದಲ್ಲಿ ಹೆಚ್ಚು ಹಣ ಹರಿದಾಡಬಹುದಾದ ಸಾಧ್ಯತೆಗಳಿರುವ ಸೂಕ್ಷ್ಮ ವಿಧಾನಾಸಭಾ ಕ್ಷೇತ್ರಗಳ (ಇಎಸ್‌ಸಿ) ಪಟ್ಟಿಯಲ್ಲಿ ಗದಗ ಮತಕ್ಷೇತ್ರವೂ ಸೇರಿದೆ.

ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷಗಳು ಖರ್ಚು ಮಾಡುವ ಹಣದ ಮೇಲೆ ನಿರಂತರ ನಿಗಾ ವಹಿಸಲು ಮತ್ತು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡುವಂತೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಚುನಾವಣಾ ಆಯೋಗ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈಗಾಗಲೇ ಪೊಲೀಸ್‌ ಇಲಾಖೆಯು ಜಿಲ್ಲೆಯ ಆಯಕಟ್ಟಿನ 18 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ ಮತ್ತು ಹಾಗೂ 87 ವಲಯ ಕೇಂದ್ರಗಳನ್ನು ಸ್ಥಾಪಿಸಲು ಸ್ಥಾಪಿಸಿದೆ. ಪ್ರಮುಖ ಚೆಕ್‌ಪೋಸ್ಟ್‌ಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯುತ್ತಿದೆ.ನಿರ್ಮಿತಿ ಕೇಂದ್ರ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡುತ್ತಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ 3 ಪಾಳಿಗಳಲ್ಲಿ ದಿನ 24 ಗಂಟೆಯೂ ಸಿಬ್ಬಂದಿ ನಿಗಾ ವಹಿಸುತ್ತಿದ್ದಾರೆ.

ADVERTISEMENT

ನಗರದ ಹೊರವಲಯದ ಮುಂಡರಗಿ ರಸ್ತೆಯ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಬಳಿ, ಮುಳಗುಂದ ರಸ್ತೆ, ರೋಣದ ರಸ್ತೆ, ದುಂದೂರ ಕ್ರಾಸ್ ಸೇರಿ ಜಿಲ್ಲೆಯಲ್ಲಿ ಹಲವೆಡೆ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಪೊಲೀಸ್‌ ಸಿಬ್ಬಂದಿ ಜತೆಗೆ ಹೆಚ್ಚುವರಿಯಾಗಿ ಗೃಹರಕ್ಷಕ ದಳ, ಅರಣ್ಯ ಇಲಾಖೆ ಸಿಬ್ಬಂದಿ, ವಿಚಕ್ಷಣಾ ದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ವಾಹನಗಳನ್ನೂ ತಡೆದು ಸಮಗ್ರ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಕಳೆದ 10 ದಿನಗಳಲ್ಲಿ ಮದ್ಯ ಅಕ್ರಮ ಸಾಗಣೆಗೆ ಸಂಬಂಧಿದಂತೆ 88 ಪ್ರಕರಣಗಳು ದಾಖಲಾಗಿದ್ದು, 1,289 ಲೀಟರ್‌ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ವ್ಯಾಪ್ತಿಯ 43 ಹಳ್ಳಿಗಳನ್ನು ಸೂಕ್ಷ್ಮ ಹಳ್ಳಿಗಳು ಎಂದು ಗುರುತಿಸಲಾಗಿದೆ.

ಇಲ್ಲಿ ಪಕ್ಷಗಳು, ಅಭ್ಯರ್ಥಿಗಳು, ಹಣ, ಆಮಿಷ, ಬೆದರಿಕೆ ಮೂಲಕ ಮತದಾರರನ್ನು ಸೆಳೆಯುವ ಸಾಧ್ಯತೆಗಳಿರುವುದರಿಂದ ಈ ಹಳ್ಳಿಗಳ ಮೇಲೂ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಿದೆ.

**

ಜಿಲ್ಲೆಯಲ್ಲಿ 18 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಕೆಲವೆಡೆ ಈಗಾಗಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಏಪ್ರಿಲ್‌ 10ರೊಳಗೆ ಇದು ಪೂರ್ಣಗೊಳ್ಳಲಿದೆ – ಮನೋಜ್ ಜೈನ್, ಜಿಲ್ಲಾಧಿಕಾರಿ.

**

ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನವನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮದ್ಯ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಇದುವರೆಗೆ 88 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ – ಕೆ.ಸಂತೋಷಬಾಬು, ಎಸ್‌ಪಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.