ಗದಗ: ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಅಧ್ಯಯನ ಮಾಡುವಂತೆ ವಕೀಲರಿಗೆ ಉಪ ಲೋಕಾಯುಕ್ತ ಸುಭಾಷ ಬಿ.ಅಡಿ ಸಲಹೆ ನೀಡಿದರು.
ರಾಜ್ಯ ವಕೀಲರ ಪರಿಷತ್, ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ನಗರದ ವಕೀಲರ ಸಂಘದ ಕಚೇರಿಯಲ್ಲಿ ಶುಕ್ರವಾರದಿಂದ ಆರಂಭಗೊಂಡ ಕಾನೂನು ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯುವ ನ್ಯಾಯವಾದಿಗಳು ಶಿಸ್ತು, ಅರ್ಪಣಾ ಮನೋಭಾವ ಮತ್ತು ಸಮಯ ಪ್ರಜ್ಞೆ ಹೊಂದಿರಬೇಕು. ವೃತ್ತಿ ಪ್ರೇಮ ಬೆಳಸಿಕೊಂಡು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು. ವಕೀಲಿ ವೃತ್ತಿ ಗೌರವಯುತವಾಗಿದ್ದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿ ಇರುತ್ತದೆ. ವಕೀಲರಿಗೆ ನಿತ್ಯವು ಕಲಿಕೆ. ಕೊಠಡಿಯಲ್ಲಿ ಕುಳಿತು ಕಲಿಯುವುದಕ್ಕಿಂತ ಪ್ರಕರಣಗಳಲ್ಲಿನ ಅಂಶಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಹೊಸ ಕಾನೂನು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡುವ ತೀರ್ಪುಗಳ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಕ್ಷಿಗಾರರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ ಅವರಿಗೆ ಗೌರವ ನೀಡಬೇಕು. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಜಗತ್ತಿನಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ದೇಶಕ್ಕೆ 94ನೇ ಸ್ಥಾನ. ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಕಕ್ಷಿದಾರರು ನಂಬಿಕೆ ಬರುವಂತೆ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಬಿ.ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಧೀಶ ಎಸ್.ಎಸ್. ಮುರಗೋಡ, ಸದಸ್ಯೆ ಸಂಧ್ಯಾ ಮಾದಿನೂರ, ಕಾರ್ಯದರ್ಶಿ ಕೆ.ಎಲ್.ಕರಿಗೌಡ್ರ ಹಾಜರಿದ್ದರು. ಕಾರ್ಯಾಗಾರಕ್ಕೆ ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ ತಾಲ್ಲೂಕುಗಳಿಂದ ವಕೀಲರು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.