ADVERTISEMENT

ದೊರಕದ ನೂಲು: ನೇಯ್ಗೆ ಬಂದ್

ಆರ್ಥಿಕ ಸಂಕಷ್ಟದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮ?; ನೇಕಾರರ ಬದುಕು ದುಸ್ತರ

ವೆಂಕಟೇಶ್ ಜಿ.ಎಚ್
Published 11 ಜೂನ್ 2015, 6:21 IST
Last Updated 11 ಜೂನ್ 2015, 6:21 IST
ಹುಬ್ಬಳ್ಳಿಯ ವಿದ್ಯಾನಗರದ ನೇಕಾರ ಕಾಲೊನಿಯ ಮನೆಯೊಂದರಲ್ಲಿ ನೂಲು ಪೂರೈಕೆ ಇಲ್ಲದೇ ಕೈಮಗ್ಗ ಬಂದ್ ಆಗಿದೆ. ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಹುಬ್ಬಳ್ಳಿಯ ವಿದ್ಯಾನಗರದ ನೇಕಾರ ಕಾಲೊನಿಯ ಮನೆಯೊಂದರಲ್ಲಿ ನೂಲು ಪೂರೈಕೆ ಇಲ್ಲದೇ ಕೈಮಗ್ಗ ಬಂದ್ ಆಗಿದೆ. ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಕೈಮಗ್ಗ ಅಭಿವೃದ್ಧಿ ನಿಗಮ­ದಿಂದ (ಕೆಎಚ್‌ಡಿಸಿ) ಬೇಡಿಕೆಯಷ್ಟು ನೂಲು ಪೂರೈಕೆಯಾಗದ ಕಾರಣ ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ 6 ಸಾವಿರಕ್ಕೂ ಹೆಚ್ಚು ಮಗ್ಗಗಳು ಕೆಲಸ ನಿಲ್ಲಿಸಿವೆ.

ಬಾಗಲಕೋಟೆ, ವಿಜಯಪುರ, ಗದಗ, ಬಳ್ಳಾರಿ, ಬೆಳಗಾವಿ, ಕೊಪ್ಪಳ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಕೈಮಗ್ಗಗಳು ನೇಯ್ಗೆಯನ್ನು ಬಂದ್ ಮಾಡಿವೆ.

‘ಹಣದ ಮುಗ್ಗಟ್ಟಿನಿಂದಾಗಿ ಕೈಮಗ್ಗ ಅಭಿವೃದ್ಧಿ ನಿಗಮ ದೈನಂದಿನ ಬೇಡಿಕೆಯ ಶೇ ೨೫ರಷ್ಟು ಮಾತ್ರ ನೂಲು ಪೂರೈಕೆ ಮಾಡುತ್ತಿದೆ. ಇದರಿಂದ ನೇಕಾರರಿಗೆ ಕೆಲಸವಿಲ್ಲವಾಗಿದೆ. ರಾಜ್ಯದಲ್ಲಿರುವ 12 ಸಾವಿರ ಮಗ್ಗಗಳಲ್ಲಿ  ಅರ್ಧದಷ್ಟು ಕೆಲಸ ನಿಲ್ಲಿಸಿವೆ. ಸದ್ಯ ಪೂರೈಕೆಯಾಗುತ್ತಿರುವ ಅಲ್‍ಪಸ್ವಲ್ಪ ನೂಲು ಬಳಸಿ ಚಾಲ್ತಿ­ಯಲ್ಲಿರುವ ಮಗ್ಗಗಳಲ್ಲಿ ಬಟ್ಟೆ ನೇಯ­ಲಾಗುತ್ತಿದೆ’ ಎಂದು ಕೈಮಗ್ಗ ನೇಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಜೆ.ಮಾಳವದೆ ಹೇಳುತ್ತಾರೆ.

ಬಾಕಿ ಪಾವತಿಯಾಗಿಲ್ಲ
‘ನೂಲು ಕೊಡುವಂತೆ ಕೇಳಿದರೆ ಸ್ಟಾಕ್‌ ಇಲ್ಲ ಎಂದು ಹೇಳಲಾಗುತ್ತಿದೆ. ವಿದ್ಯಾವಿಕಾಸ ಯೋಜನೆಯಡಿ ಬೆಂಗ­ಳೂರು ಹಾಗೂ ಕಲಬುರ್ಗಿ ವಿಭಾಗದಲ್ಲಿ ಶಾಲಾ ಮಕ್ಕಳಿಗೆ 46 ಲಕ್ಷ ಸಮವಸ್ತ್ರವನ್ನು ನಿಗಮದಿಂದ ಪೂರೈಸಲಾಗಿದ್ದು, ಸಾರ್ವ­ಜನಿಕ ಶಿಕ್ಷಣ ಇಲಾಖೆಯಿಂದ ₹ 36 ಕೋಟಿ ಬಾಕಿ ಬರಬೇಕಿದೆ. ಅಲ್ಲಿಂದ ಬಾಕಿ ಹಣ ಬಾರದೇ ನೂಲು ಖರೀದಿ­ಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಯಾವುದೆ ಕಲಸಗಳನ್ನೂ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನಿಗಮದ ಅಧಿಕಾರಿಗಳು ಉತ್ತರಿಸುತ್ತಾರೆ’ ಎಂದು ಮಾಳವದೆ ತಿಳಿಸಿದರು.

ಈಡೇರದ ನೂಲು ಬ್ಯಾಂಕ್ ಕನಸು
‘ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೂಲು ಬ್ಯಾಂಕ್ ಸ್ಥಾಪಿಸಲು ₹ 20 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಇಲ್ಲಿಯವರೆಗೂ ನಯಾ ಪೈಸೆ ಬಿಡುಗಡೆಯಾಗಿಲ್ಲ. ನೂಲಿನ ಕೊರತೆಯಿಂದಾಗಿ ಪ್ರತಿನಿತ್ಯ 9ರಿಂದ 10 ಲಕ್ಷ ಮೀಟರ್ ಆಗುತ್ತಿದ್ದ ನೇಯ್ಗೆಯ ಪ್ರಮಾಣ ಈಗ 3 ಲಕ್ಷ ಮೀಟರ್‌ಗೆ ಇಳಿದಿದೆ. ಇದೇ ಪರಿಸ್ಥಿತಿ ಮುಂದುವರಿ­ದಲ್ಲಿ ಕೈಮಗ್ಗ ಸಂಪೂರ್ಣ ಬಂದ್‌ ಮಾಡಿ ಬೇರೆ ಉದ್ಯೋಗಗಳತ್ತ ಮುಖ ಮಾಡ­ಬೇಕಾಗುತ್ತದೆ. ಈಗಾಗಲೇ ಕೆಲವರು ಕಾವ­ಲು­ಗಾರರಾಗಿ ಕೆಲಸ ಮಾಡು­ತ್ತಿದ್ದಾರೆ’ ಎಂಬುದು ನೇಕಾರ ಮುಖಂಡರ ಅಳಲು.

ಎನ್‌ಟಿಸಿ ನೂಲು ಕೊಡುತ್ತಿಲ್ಲ
‘ನಾವು ₹ 12 ಕೋಟಿ ಬಾಕಿ ಪಾವತಿ­ಸಬೇಕಿರುವುದರಿಂದ ರಾಷ್ಟ್ರೀಯ ಜವಳಿ ನಿಗಮ (ಎನ್‌ಟಿಸಿ) ಬೇಡಿಕೆಯಷ್ಟು ನೂಲು ಕೊಡುತ್ತಿಲ್ಲ. ಹಾಗಾಗಿ ಮಗ್ಗಗಳಿಗೆ ನೀಡಲು ಅಡಚಣೆಯಾಗಿದೆ’ ಎಂದು ಕೆಎಚ್‌ಡಿಸಿಯ ಹೆಸರು ಹೇಳ­ಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

‘ನಿಗಮ ₹ 90 ಕೋಟಿಯಷ್ಟು ನಷ್ಟದಲ್ಲಿದೆ. ನೌಕರರಿಗೆ ವೇತನ ನೀಡಲು ಹಣವಿಲ್ಲ. ಮಡಿಲು ಕಿಟ್‌ ಪೂರೈಸಿದ್ದಕ್ಕೆ ಆರೋಗ್ಯ ಇಲಾಖೆ ಕೊಡುತ್ತಿರುವ ಹಣದಲ್ಲಿ ಸಂಬಳ ನೀಡಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ನೌಕರರು ನಿವೃತ್ತರಾಗಿದ್ದಾರೆ. ಅವರಿಗೆ ಸವಲತ್ತುಗಳ ರೂಪದಲ್ಲಿ ₹ 10 ಕೋಟಿಗೂ ಹೆಚ್ಚು ಬಾಕಿ ಪಾವತಿಸ­ಬೇಕಿದೆ. ಸರ್ಕಾರ ವಿಶೇಷ ಪ್ಯಾಕೇಜ್ ನೀಡಿದಲ್ಲಿ ಮಾತ್ರ ನಿಗಮ ಉಳಿಯಲು ಸಾಧ್ಯ. ಇಲ್ಲದಿದ್ದರೆ ಬಾಗಿಲು ಹಾಕ­ಬೇಕಾಗುತ್ತದೆ’ ಎಂದು ಹೇಳುವರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಆರ್. ರಾಜು ಅವರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಪ್ರಯತ್ನಿಸಿ­ದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಮುಖ್ಯಾಂಶಗಳು
46 ಲಕ್ಷ ವಿದ್ಯಾವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಕೆ
₹36 ಕೋಟಿ ಶಿಕ್ಷಣ ಇಲಾಖೆ­ಯಿಂದ ನಿಗಮಕ್ಕೆ ಬರಬೇಕಾದ ಬಾಕಿ
* 6 ಸಾವಿರಕ್ಕೂ ಹೆಚ್ಚು ಮಗ್ಗಗಳಲ್ಲಿ ಕೆಲಸ ಸಂಪೂರ್ಣ ಸ್ಥಗಿತ
* ಮಡಿಲು ಕಿಟ್‌ನಿಂದ ಸಿಬ್ಬಂದಿಗೆ ವೇತನ ಪಾವತಿ
* ಬೇಡಿಕೆಯಲ್ಲಿ ಶೇ 25ರಷ್ಟು ಮಾತ್ರ ನೂಲು ಪೂರೈಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 13ಕ್ಕೆ ಹುಬ್ಬಳ್ಳಿಗೆ ಬರಲಿದ್ದಾರೆ. ಅಂದು ಅವರನ್ನು ಭೇಟಿ ಮಾಡಿ ಕೈಮಗ್ಗ ನಿಗಮ ಉಳಿಸುವಂತೆ ಮನವಿ ಮಾಡಲಾಗುವುದು.
ಎನ್‌.ಜೆ.ಮಾಳವದೆ, ರಾಜ್ಯ ನೇಕಾರರ ಸಂಘದ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.