ADVERTISEMENT

ನರಗುಂದದಲ್ಲಿ ಮಳೆ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 7:10 IST
Last Updated 27 ಫೆಬ್ರುವರಿ 2014, 7:10 IST
ನರಗುಂದದ ಎಪಿಎಂಸಿ ಆವರಣದಲ್ಲಿನ ಗೋವಿನಜೋಳದ ಚೀಲಗಳು ತುಂತುರು ಮಳೆಗೆ ಒಳಗಾಗಿದ್ದರಿಂದ ಅವುಗಳಿಗೆ ಹೊದಿಕೆ ಹಾಕಲು ಹರಸಾಹಸ ಪಡುತ್ತಿರುವ ದೃಶ್ಯ.
ನರಗುಂದದ ಎಪಿಎಂಸಿ ಆವರಣದಲ್ಲಿನ ಗೋವಿನಜೋಳದ ಚೀಲಗಳು ತುಂತುರು ಮಳೆಗೆ ಒಳಗಾಗಿದ್ದರಿಂದ ಅವುಗಳಿಗೆ ಹೊದಿಕೆ ಹಾಕಲು ಹರಸಾಹಸ ಪಡುತ್ತಿರುವ ದೃಶ್ಯ.   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವಡೆ ಬುಧವಾರ ಸಂಜೆ 4 ಗಂಟೆಯ  ಸುಮಾರಿಗೆ ದಿಢೀರನೆ ಮಳೆ ಸುರಿದ ಪರಿಣಾಮ ಹಿಂಗಾರು ಬೆಳೆ ರಾಶಿ ಮಾಡುತ್ತಿರುವ ರೈತರು ಆತಂಕಕ್ಕೆ ಒಳಗಾದರು.

ಅಕಾಲಿಕವಾಗಿ  ಸುರಿದ ಪರಿಣಾಮ ಹಿಂಗಾರು ಬೆಳೆಗಳನ್ನು ರಾಶಿ  ಮಾಡುತ್ತಿರುವ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಅದರಲ್ಲೂ ಗೋವಿನಜೋಳವನ್ನು ಬೆಂಬೆಲ ಬೆಲೆಯಡಿ ಮಾರಲು ತಂದಿರುವ ಹೊಸ ಎಪಿಎಂಸಿ ಆವರಣದಲ್ಲದಂತೂ ರೈತರು  ಸಹ್ರಸಾರು ಚೀಲಗಳನ್ನು ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎಂಬ ತೊಂದರೆಗೆ ಒಳಗಾಗಿ  ಅವುಗಳಿಗೆ ಹೊದಿಕೆ ಹಾಕಲು ತೀವ್ರ ಹರಸಾಹಸ ಪಟ್ಟಿದ್ದು ಕಂಡು ಬಂತು. ಇದೇ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂತು.

ಸುಮಾರು 20 ನಿಮಿಷಗಳ ಕಾಲ ಜೋರಾಗಿ ಸುರಿದ ಮಳೆ ಸಂಜೆ 6 ಗಂಟೆಯವರೆಗೂ ತುಂತುರಾಗಿ ಬೀಳುತ್ತಿತ್ತು.  ಬುಧವಾರ ಸಂತೆ ದಿನವಾಗಿದ್ದರಿಂದ ನಾಗರಿಕರು ಕಾಯಿಪಲ್ಯೆ ಖರೀದಿಸಲು ಹರಸಾಹಸಪಟ್ಟರು.  ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳುವಾಗ ಮಳೆಯಿಂದ ತೊಂದರೆಗೆ ಒಳಗಾಗಬೇಕಾಯಿತು.

ರೈತರ ಆಕ್ರೋಶ: ತೂಕವಾಗಿ  15 ದಿವಸ ಕಳೆದರೂ  ಗೋವಿನ ಜೋಳವನ್ನು ಎಪಿಎಂಸಿ ಆವರಣದಿಂದ ಸರಿಯಾಗಿ ಸಾಗಾಣಿಕೆ ಮಾಡದ ಪರಿಣಾಮ ಈಗ ಗೋವಿನಜೋಳ ಮಳೆಯಲ್ಲಿ ತೊಯ್ದು ನೆನೆಯುವಂತಾಗಿದೆ. ಇದಕ್ಕೆ ಫೆಡರೇಷನ್‌ ಅಧಿಕಾರಗಳ ನಿಲಕ್ಷ್ಯವೇ ಕಾರಣವಾಗಿದೆ ಎಂದು ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿದ್ದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ  ಬೆಳೆ ಹಾನಿ: ರೈತರು ಉತ್ಸಾಹದಿಂದ ಹಿಂಗಾರಿ ಬೆಳೆಗಳಾದ  ಗೋದಿ, ಜೋಳ, ಕಡಲೆ ಬೆಳೆಗಳ ರಾಶಿ ಮಾಡಿ ಒಕ್ಕಣೆ ಮಾಡುತ್ತಿದ್ದು ಈ ಮಳೆ ಆಗಮನದಿಂದ ಅವುಗಳು ಮಳೆಗೆ ಸಿಗುವಂತಾಗಿವೆ.  ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಹಲವಾರು ರೈತರು ಈ  ಮಳೆಯ ಬಗ್ಗೆ  ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT