ADVERTISEMENT

ನರೇಗಲ್ | ಭಾರಿ ಮಳೆ, ಉಕ್ಕಿ ಹರಿದ ಜಕ್ಕಲಿ ಹಳ್ಳ: ಸಂಚಾರಕ್ಕೆ ತೊಂದರೆ

ಅಗಸರ ಹಳ್ಳಕ್ಕೆ ಸೇತುವೆ ನಿರ್ಮಿಸಲು ಗ್ರಾಮಸ್ಥರು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:27 IST
Last Updated 19 ಜುಲೈ 2025, 4:27 IST
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರಹಳ್ಳ ಶುಕ್ರವಾರ ಸಂಜೆ ಸುರಿದ ಮಳೆಯಲ್ಲಿ ಉಕ್ಕಿ ಹರಿಯುತ್ತಿರುವುದು
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರಹಳ್ಳ ಶುಕ್ರವಾರ ಸಂಜೆ ಸುರಿದ ಮಳೆಯಲ್ಲಿ ಉಕ್ಕಿ ಹರಿಯುತ್ತಿರುವುದು   

ನರೇಗಲ್:‌ ಪಟ್ಟಣ ಹಾಗೂ ಹೋಬಳಿಯ ವಿವಿಧೆಡೆ ಶುಕ್ರವಾರ ಸಂಜೆ ಭಾರಿ ಮಳೆಯಾಗಿದ್ದು ಹಳ್ಳಗಳು ಉಕ್ಕಿ ಹರಿದಿವೆ. ಅದರಲ್ಲೂ ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರ ಹಳ್ಳವು ಉಕ್ಕಿ ಹರಿದ ಕಾರಣ ಗಂಟೆಗಟ್ಟಲೆ ರೋಣ-ಜಕ್ಕಲಿ-ನರೇಗಲ್ ಮಾರ್ಗದ ಸಂಚಾರಕ್ಕೆ ಜನರು ಪರದಾಡಿದರು.

ಜಕ್ಕಲಿ ಗ್ರಾಮದಿಂದ ರೋಣ ಕಡೆಗೆ ಹೋಗುವಾಗ ಗ್ರಾಮದ ಸಮೀಪದಲ್ಲಿರುವ ಅಗಸರ ಹಳ್ಳಕ್ಕೆ ಅಬ್ಬಿಗೇರಿ ಮಾರ್ಗದ ಹೊಲಗಳಿಂದ, ಶೆರೆ ಹಳ್ಳದ ದಾರಿಯ ಹೊಲಗಳಿಂದ, ತೋಟಗಂಟಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಮಸಾರಿ ಭೂಮಿಯ ಹೊಲಗಳಿಂದ ಹಾಗೂ ಜಕ್ಕಲಿ ಗ್ರಾಮದ ಚರಂಡಿ ರಸ್ತೆಯ ಮೂಲಕ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಆದ್ದರಿಂದ ಮಳೆ ಬಂದಾಗ ಇಲ್ಲಿನ ಜನರಿಗೆ ಸಮಸ್ಯೆ ಉದ್ಭವಿಸುವುದು ಸರ್ವೇ ಸಾಮಾನ್ಯವಾಗಿದೆ.

ಈ ಮೊದಲು ಜೋರು ಮಳೆ ಬಂದಾಗ ಉಕ್ಕಿ ಹರಿಯುತ್ತಿದ್ದ ಹಳ್ಳವು ಸ್ವಲ್ಪ ಸಮಯದ ನಂತರ ರಭಸ ಕಡಿಮೆಯಾಗಿ ಸಂಚಾರಕ್ಕೆ ಅನುವು ಮಾಡಿಕೊಡುತಿತ್ತು. ಆದರೆ, ಜಕ್ಕಲಿ ಗ್ರಾಮದ ವಿವಿಧೆಡೆ ಹೊಲಗಳಲ್ಲಿ ಕಾಮಗಾರಿ ನಡೆಸಿರುವ ಬಹುರಾಷ್ಟ್ರೀಯ ಪವನ ವಿದ್ಯುತ್‌ ಖಾಸಗಿ ಕಂಪನಿಯವರು ಅತಿ ಭಾರದ ವಾಹನಗಳ ಓಡಾಟಕ್ಕಾಗಿ ಇಲ್ಲಿನ ಹಳ್ಳಕ್ಕೆ ಅಪಾರ ಪ್ರಮಾಣದಲ್ಲಿ ಗರಸು ಹಾಕಿದ್ದಾರೆ. ಹಳ್ಳದ ನೀರು ಹರಿದು ಹೋಗಲು ಸೇತುವೆ ನಿರ್ಮಿಸದೇ ಕೇವಲ ಪೈಪುಗಳನ್ನು ಅಳವಡಿಸಿರುವ ಕಾರಣ ಗಸರು ಹಾಗೂ ಇತರೆ ತ್ಯಾಜ್ಯ ಸಂಗ್ರಹವಾಗಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದರಿಂದ ಡಾಂಬಾರು ರಸ್ತೆಯಲ್ಲಿ, ಅಕ್ಕಪಕ್ಕದ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತಿದೆ. ಜನರಿಗೆ ತೊಂದರೆ ಆಗುತ್ತಿದ್ದರು ಸಹ ಖಾಸಗಿ ಕಂಪನಿಯವರ ವಿರುದ್ದ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಕಳೆದೆರಡು ವರ್ಷಗಳಿಂದ ಮಳೆಗಾದಲ್ಲಿ ಹೀಗೆ ತೊಂದರೆ ಆಗುತ್ತಿದೆ ಇದನ್ನು ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

’ಅನೇಕ ವರ್ಷಗಳಿಂದ ಸೇತುವೆ ನಿರ್ಮಾಣ ಮಾಡದೇ ಇರುವ ಕಾರಣ ಮಳೆ ಬಂದಾಗ ಬೈಕ್‌ ಸವಾರರು, ಇತರೇ ವಾಹನಳು ಇಲ್ಲಿನ ಹಳ್ಳದಲ್ಲಿ ಅಪಘಾತಕ್ಕೆ ಒಳಗಾಗುತ್ತಾರೆ. ಇದೇ ಮಾರ್ಗದ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳು ನಿತ್ಯ ಸಂಚಾರ ಮಾಡಿದರೂ ಸೇತುವೆ ನಿರ್ಮಾಣಕ್ಕೆ ಮುಂದಾಗದೇ ಇರುವುದು ಶೋಚನೀಯ’ ಎನ್ನುತ್ತಾರೆ ಮಲ್ಲಪ್ಪ ಪಲ್ಲೇದ.

ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರಹಳ್ಳ ಶುಕ್ರವಾರ ಸಂಜೆ ಸುರಿದ ಮಳೆಯಲ್ಲಿ ಉಕ್ಕಿ ಹರಿಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.