ADVERTISEMENT

`ನಿವೃತ್ತ ನೌಕರರಿಗೂ ಆರೋಗ್ಯ ಭಾಗ್ಯ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:17 IST
Last Updated 3 ಏಪ್ರಿಲ್ 2013, 6:17 IST

ಗದಗ: ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನೀಡುತ್ತಿರುವ ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತ ನೌಕರರಿಗೂ ವಿಸ್ತರಿಸುವಂತೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದರು.

ನಗರದ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಮಂಗ ಳವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಭಾಗ್ಯ ಯೋಜನೆಯನ್ನು ಹಾಲಿ ಪೊಲೀಸ್ ಸಿಬ್ಬಂದಿ ಪಡೆಯತ್ತಿದ್ದು, ನಿವೃತ್ತ ನೌಕರರಿಗೂ ಯೋಜನೆ ದೊರಕುವಂತೆ ಮಾಡಲು ಮಾನವ ಸಂಪನ್ಮೂಲ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಕಳೆದ ವರ್ಷ ಜಿಲ್ಲೆಯಲ್ಲಿ 7 ಪಿಎಸ್‌ಐ, 7 ಎಎಸ್‌ಐ  ಸೇರಿದಂತೆ ಒಟ್ಟು 33 ಮಂದಿ ನಿವೃತ್ತಿ ಹೊಂದಿದ್ದಾರೆ. ಈ ದಿನದ ನೆನಪಿಗಾಗಿ ಇಲಾಖೆಯಿಂದ ಪೊಲೀಸ್ ಧ್ವಜ ಚೀಟಿ ಮಾರಾಟ ಮಾಡಲಾಗುತ್ತಿದೆ. ಸಂಗ್ರಹಗೊಂಡ ಹಣದಲ್ಲಿ ಶೇ.25 ರಷ್ಟು ಕಲ್ಯಾಣ ನಿಧಿ ಘಟಕ ಮತ್ತು ಕೇಂದ್ರ ಕಲ್ಯಾಣ ನಿಧಿಗೆ ಹಾಗೂ ಉಳಿದ ಶೇ. 50ರಷ್ಟು ನಿವೃತ್ತ ಅಧಿಕಾರಿಗಳ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತದೆ ಎಂದು ತಿಳಿಸಿದರು.

ನಿವೃತ್ತ ಪೊಲೀಸ್ ಉಪ ನಿರೀಕ್ಷಕ ವಿ.ಎಚ್.ನೀಲಗುಂದ ಮಾತನಾಡಿ, ನಿವೃತ್ತ ಸಿಬ್ಬಂದಿಗೆ ಪ್ರತ್ಯೇಕ ಸಭಾಭವನ ನಿರ್ಮಿಸುವಂತೆ ಮನವಿ ಮಾಡಿದರು.
ಡಿಎಸ್‌ಪಿ ವಿ.ವಿ.ಕುಂಬಾರ, ಅನಿತಾ ಹದ್ದಣ್ಣವರ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.