ಗದಗ: ಬೇಸಿಗೆ ಬಿರು ಬಿಸಿಲು ತನ್ನ ಪ್ರಭಾವ ಬೀರಲು ಪ್ರಾರಂಭ ಮಾಡಿದೆ. ದಿನ ಕಳೆಯುತ್ತಲೇ ಸೂರ್ಯ ತನ್ನ ಗೂಡಿನಿಂದ ಬೆಂಕಿಯ ಉಂಡೆಗಳನ್ನು ಭೂವಿಯ ಕಡೆಗೆ ಎಸೆಯುವುದರಲ್ಲಿ ಸಂದೇಹವೇ ಇಲ್ಲ ಎನ್ನುವಂತಿದೆ ಈಗಿನ ವಾತಾವರಣ. ಅವಳಿ ನಗರ ಅಕ್ಷರಶಃ ಧಗಧಗಿಸುತ್ತಿದೆ.
ಬಿಸಿಲು ಹೆಚ್ಚಾದಂತೆ ನೀರಿನ ಬಳಕೆಯೂ ಹೆಚ್ಚಾಗುತ್ತದೆ. ಮಾನವ ತನ್ನ ದೇಹದಲ್ಲಿ ಶಾಖ-ಉಷ್ಣಾಂಶವನ್ನು ಸಮಪ್ರಮಾಣ ಇಟ್ಟುಕೊಳ್ಳಬೇಕಾದರೆ ನೀರು ಅವಶ್ಯಕ. ಒಂದೊಂದು ಬಾರಿ ಗುಟುಕು ನೀರೂ ಸಹ ಜೀವಾಮೃತವಾಗುತ್ತದೆ. ಇಂತಹ ಅತ್ಯಮೂಲ್ಯ ವಸ್ತುವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನರನ್ನಾಳುವವರು, ಆಳುವುದಕ್ಕೆ ರೂಪ-ರೇಷೆ ಸಿದ್ಧಪಡಿಸುವವರು ಎಲ್ಲರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗ ಇದು ಸಣ್ಣ ಪ್ರಮಾಣ ಎಂದೇನಿಸಿದರೂ, ಇದೇ ಮುಂದೆ ದೊಡ್ಡ ಪ್ರಮಾದವಾಗುತ್ತದೆ.
ದೂರದ ತುಂಗಭದ್ರಾ ನದಿಯಿಂದ ಬರುವ ನೀರು ಪುರಪ್ರವೇಶ ಮಾಡುವ ಜಾಗವಾದ ಹಳೇ ಡಿಸಿ ಕಚೇರಿ ಹತ್ತಿರ ವಾಲ್ವ್ ಅಳವಡಿಸಲಾಗಿದೆ. ಇದರಲ್ಲಿ ಪ್ರತಿನಿತ್ಯ ಸಾವಿರಾರು ಲೀಟರ್ ನೀರು ಅನವಶ್ಯಕವಾಗಿ ಹರಿದು, ದಿಕ್ಕಪಾಲಾಗಿ ಹೋಗಿ ಭೂಮಿಯ ಒಡಲನ್ನು ಸೇರುತ್ತಿದೆ. ದಿನಕ್ಕೆ ಸಾವಿರ ಲೀಟರ್ ಎಂದರೂ ವರ್ಷ ಪೂರ್ತಾ ಎಷ್ಟಾಗುತ್ತದೆ ಎಂದು ಅಂದಾಜಿಸುವುದೇ ಬೇಡ. ಹೀಗೆ ಹರಿದು ಹೋಗುವ ನೀರನ್ನು ಸಮರ್ಪಕವಾಗಿ ಕೊಟ್ಟರೆ ನೂರಾರು ಕುಟುಂಬಗಳಿಗೆ ಜೀವಜಲ ಸಿಗುತ್ತದೆ.
ಗದಗ-ಬೆಟಗೇರಿ ನಗರಕ್ಕೆ ಕುಡಿಯುವ ನೀರೇನು ಸುಮ್ಮನೆ ಬರುವುದಿಲ್ಲ. ತುಂಗಭದ್ರಾ ನದಿಯಿಂದ ಕಚ್ಚಾ ನೀರನ್ನು ಪಂಪ್ ಮಾಡಿಕೊಂಡು, ನಂತರ ಸಂಸ್ಕರಣ ಮಾಡಿ ಶುದ್ಧ ನೀರನ್ನು ಪೂರೈಕೆ ಮಾಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ನಡೆಯಲು ವಿದ್ಯುತ್, ಸಂಸ್ಕರಣ ಸಾಮಗ್ರಿ, ಮಾನವ ಸಂಪನ್ಮೂಲ ಎಲ್ಲವೂ ಬೇಕಾಗುತ್ತದೆ. ಇಷ್ಟು ಒಟ್ಟಾಗಿ ಕಾರ್ಯನಿರ್ವಹಣೆ ಮಾಡಲು ಹಣ ಬೇಕಾಗುತ್ತದೆ. ಅಂದರೆ ಊರಿಗೆ ಶುದ್ಧ ನೀರು ಕೊಡಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇದೆಲ್ಲ ಸಾರ್ವಜನಿಕರು ಕೊಡುವ ತೆರಿಗೆಯ ಹಣ. ಆದರೆ ಆಡಳಿತ ಯಂತ್ರವನ್ನು ಮುನ್ನಡೆಸುವವರು ನೀರಿನ ಸೋರಿಕೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಅನ್ನುವಂತೆ ‘ಮೌನ’ವಾಗಿ ಕುಳಿತುಕೊಂಡಿದ್ದಾರೆ. ಅತ್ತ ನೀರು ಝಳು ಝಳು ಸದ್ದು ಮಾಡುತ್ತ ತನ್ನ ಪಾಡಿಗೆ ಹರಿಯುತ್ತಿದೆ.
ಈ ವಾಲ್ವ್ ಇರುವ ಜಾಗದ ಮೇಲೆ ಮುಖ್ಯ ರಸ್ತೆ ಹಾದು ಹೋಗಿದೆ. ಮೇಲೆ ಮುಚ್ಚಿರುವ ಸ್ಲ್ಯಾಬ್‌ಗಳು ಸಹ ಕಿತ್ತು ಮಣ್ಣು ಪಾಲಾಗಿವೆ. ವಾಲ್ವ್‌ನ ಮೇಲಿನ ತುದಿಗೆ ಪ್ಲಾಸ್ಟಿಕ್ ಬಾಟೆಲ್ ಅಳವಡಿಸಿ ನೀರನ್ನು ಹಿಡಿದುಕೊಳ್ಳುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ ಕೆಲವು ಬುದ್ಧಿವಂತರು. ಬಿಸಿಲಿನ ಝಳದ ಸಮಯದಲ್ಲಿ ಇಲ್ಲೇ ಅನೇಕ ಮಂದಿ ಮೈಮೇಲೆ ನೀರನ್ನು ಸುರಿದುಕೊಳ್ಳುತ್ತಾರೆ. ಅಲ್ಲದೆ ಲಾರಿ, ಟ್ರಕ್‌ಗಳು ಸಾಲಾಗಿ ನಿಂತು ದೂಳು ತುಂಬಿದ ತಮ್ಮ ‘ದೇಹ’ಕ್ಕೆ ನೀರನ್ನು ಹಾಕಿಕೊಂಡು ಸ್ವಚ್ಛಗೊಳ್ಳುತ್ತವೆ. ಈ ನೀರೆಲ್ಲ ರಸ್ತೆಗೆ ವ್ಯರ್ಥವಾಗಿ ಹರಿದುಹೋಗುತ್ತದೆ. ಇದನ್ನು ಸಂಚಾರಿ ನಿಯಂತ್ರಕರು ಕಂಡು ಕಾಣದಂತೆ ಇದ್ದಾರೆ.
ವಾಲ್ವ್‌ನ ಛೇಂಬರ್ ಮುಖ್ಯರಸ್ತೆಯಲ್ಲಿ ಇದ್ದು ಬಾಯ್ತೆರದು ಕೊಂಡಿರುವುದಿಂದ ಆಪಾಯಕ್ಕೆ ಆಹ್ವಾನ ನೀಡುವಂತೆ ಇದೆ. ರಾತ್ರಿ ಹೊತ್ತು ಈ ಜಾಗ ಕಾಣುವುದಿಲ್ಲ. ಏಕೆಂದರೆ ಜೋಡಿ ರಸ್ತೆಯಲ್ಲಿ ಇರುವ ದೀಪಗಳು ಉರಿಯುವುದೇ ಇಲ್ಲ. ಕತ್ತಲಲ್ಲಿ ಯಾರಾದರೂ ಬಂದು ಬಿದ್ದರಂತೂ ಮುಗಿಯಿತು. ಇದಕ್ಕೆಲ್ಲ ಯಾರು ಹೊಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.