ADVERTISEMENT

ನೀರು ಪೂರೈಕೆಗೆ ಆಗ್ರಹ: ರಸ್ತೆ ತಡೆ

ರೋಣ: 9ನೇ ವಾರ್ಡಿನಲ್ಲಿ 20 ದಿನಗಳಿಂದ ಬಂದಿಲ್ಲ ಕುಡಿಯುವ ನೀರು!

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 10:31 IST
Last Updated 29 ಮಾರ್ಚ್ 2018, 10:31 IST

ರೋಣ: ಪಟ್ಟಣದ 9ನೇ ವಾರ್ಡಿನಲ್ಲಿ 20 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನಲೆಯಲ್ಲಿ ವಾರ್ಡ್ ನಿವಾಸಿಗಳು ಬುಧವಾರ ಗದಗ–ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಿದರು.

ರಸ್ತೆ ತಡೆ ನಡೆಸಿದ್ದರಿಂದ 30 ನಿಮಿಷಕ್ಕೂ ಹೆಚ್ಚು ಸಮಯ ಸಂಚಾರ ಅಸ್ತವ್ಯಸ್ತವಾಯಿತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಪುರಸಭೆ ಸಿಬ್ಬಂದಿ ಬಂದು ನೀರಿನ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ನಂತರ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹಾಗೂ ನೀರು ಸಬರಾಜು ಸಿಬ್ಬಂದಿ ಶಂಕ್ರಪ್ಪ ಧಾವಿಸಿ, ‘9ನೇ ವಾರ್ಡಿನಲ್ಲಿ ಸಿ.ಸಿ ರಸ್ತೆ ಕಾಮಗಾರಿ ನಡದಿರುವುದರಿಂದ ಪೈಪ್‌ಲೈನ್ ಒಡೆದು ಹೋಗಿದೆ. ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ನಾಲ್ಕು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ ಸ್ಥಳೀಯರು ಪ್ರತಿಭಟನೆ ಹಿಂಪಡೆದರು.  ಈ ಸಂದರ್ಭದಲ್ಲಿ ಸುರೇಶ ಜಗ್ಗಲ, ವಿನಾಯಕ ಜಕ್ಕನಗೌಡ್ರ, ಸುನಂದಾ ಜಕ್ಕನಗೌಡ್ರ, ನಿರ್ಮಲಾ ಜಗ್ಗಲ, ನಿರ್ಮಲಾ ಸವಡಿ, ಶಿವಗಂಗವ್ವ ಜಗ್ಗಲ, ಲಕ್ಷ್ಮವ್ವ ಜಕ್ಕನಗೌಡ್ರ, ನಿಜಗುಣಿ ಜಗ್ಗಲ, ಮಲ್ಲು ಸವಡಿ, ವಿರೂಪಾಕ್ಷ ಸವಡಿ, ಶಿವಾನಂದ ಜಗ್ಗಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.