ADVERTISEMENT

ಪಾನ ನಿಷೇಧ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 6:34 IST
Last Updated 5 ಜುಲೈ 2013, 6:34 IST

ಗದಗ:  ರಾಜ್ಯದಲ್ಲಿ ಪಾನ ನಿಷೇಧ ಜಾರಿಗೊಳಿಸಬೇಕು ಎಂದು ಜನಜಾಗೃತಿ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಅವರಿಗೆ ಮನವಿ ಸಲ್ಲಿಸಿದ ವೇದಿಕೆ ಸದಸ್ಯರು, ರಾಜ್ಯದ ಅಬಕಾರಿ ನೀತಿಯನ್ನು ಅಮೂಲಾಗ್ರವಾಗಿ ಪುನರ್ ವಿಮರ್ಶಿಸಬೇಕು. ಹೊಸ ವೈನ್‌ಶಾಪ್ ಮತ್ತು ಬಾರ್‌ಗಳಿಗೆ ಪರವಾನಗಿ ನೀಡುವ ನಿರ್ಧಾರವನ್ನು ತತ್‌ಕ್ಷಣದಿಂದ ಕೈಬಿಡಬೇಕು. ಈಗಾಗಲೇ ನೀಡಿದ  ಲೈಸನ್ಸ್‌ಗಳನ್ನು ಕಡಿತಗೊಳಿಸಿ ಪಾನ ನಿಷೇಧ ಕಾರ್ಯಕ್ರಮ ಜಾರಿಗೊಳಿಸಬೇಕು. ಪಟ್ಟಣಗಳಲ್ಲಿರುವ ವೈನ್‌ಶಾಪ್‌ಗಳನ್ನು ಹಳ್ಳಿ ಪ್ರದೇಶಕ್ಕೆ ಸ್ಥಳಾಂತರ ಮಾಡುವುದನ್ನು ನಿಲ್ಲಿಸುವುದು ಹಾಗೂ ಅಕ್ರಮ ಮದ್ಯ ದಾಸ್ತಾನುಗಳನ್ನು ಮಾಡಿ ಮಾರಾಟ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ ವಿವಿಧ ಸಂಸ್ಥೆಗಳು ಸೇರಿ ನಡೆಸುತ್ತಿರುವ ಮದ್ಯವರ್ಜನ ಶಿಬಿರಗಳಲ್ಲಿ ಮದ್ಯಮುಕ್ತ ಜೀವನ ಸಾಗಿಸುವ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಬೇಕು. ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ವಿವರ ನೀಡಲು ವೇದಿಕೆ ಸಿದ್ದವಿದ್ದು, ಚರ್ಚೆಗೆ ಆಹ್ವಾನಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರ ಗುಟ್ಕಾ ನಿಷೇಧ, ಬಡಜನರಿಗೆ ಒಂದು ರೂಪಾಯಿ ದರದಲ್ಲಿ ಅಕ್ಕಿ, ಭ್ರಷ್ಟಾಚಾರ ವಿರೋಧಿ ನೀತಿ, ದುಂದುವೆಚ್ಚಗಳಿಗೆ ಕಡಿವಾಣ ಸೇರಿದಂತೆ ಸಮಾಜಪರ ನಿರ್ಧಾರಗಳನ್ನು ಪ್ರಕಟಿಸಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ ರಾಜ್ಯವನ್ನು ಕಾಡುತ್ತಿರುವ ಮದ್ಯದ ವಿರುದ್ಧವೂ ದಿಟ್ಟ ನಿಲುವು ತೋರಿಸಿ ಪಾನನಿಷೇಧ  ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ನಿಯೋಗದ ಸದಸ್ಯರು ಎಚ್ಚರಿಸಿದ್ದಾರೆ.

ನಿಯೋಗದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ, ಕಾಯದರ್ಶಿ ಜಯಂತ, ಜಾವೂರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.