ADVERTISEMENT

ಪಾರದರ್ಶಕ ಕಾಮಗಾರಿಗೆ ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 10:05 IST
Last Updated 26 ಮಾರ್ಚ್ 2011, 10:05 IST
ಪಾರದರ್ಶಕ ಕಾಮಗಾರಿಗೆ ಪಾಟೀಲ ಸೂಚನೆ
ಪಾರದರ್ಶಕ ಕಾಮಗಾರಿಗೆ ಪಾಟೀಲ ಸೂಚನೆ   

ಗದಗ: ಗ್ರಾಮೀಣ ಜನತೆಯ ಆರೋಗ್ಯ ಸುಧಾರಣೆ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಕದಡಿ ಹಾಗೂ ಬೆಳವಣಿಕೆ ಗ್ರಾಮಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು. ತಾಲ್ಲೂಕಿನ ಕದಡಿ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ರೂ. 1.4 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಕಟ್ಟಡದ ಕಾಮಗಾರಿ ಪಾರದರ್ಶಕತೆ ಹಾಗೂ ಕಳಪೆಯಾಗದಂತೆ ಸಂಬಂಧಿಸಿದ ಎಂಜಿನಿಯರ್, ಗುತ್ತಿಗೆದಾರರು ನೋಡಿಕೊಳ್ಳಬೇಕು’ ಎಂದು ಹೇಳಿದರು. ಸದ್ಯದಲ್ಲಿಯೇ ಗ್ರಾಮಕ್ಕೆ ಮಂಜೂರಾಗುವ ಕೆರೆ ಹೂಳು ಎತ್ತುವ ಕಾಮಗಾರಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

‘ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಪಶು ಚಿಕಿತ್ಸಾಲಯಕ್ಕೆ ಶೀಘ್ರವೇ ಶಿಫಾರಸ್ಸು ಮಾಡಲಾಗುವುದು. ಈ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಅವರು ಭರವಸೆ ನೀಡಿದರು. ಜಿಲ್ಲಾ ಪಂಚಾತಿ ಶಿಕ್ಷಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಮಾತನಾಡಿ, ‘ಗ್ರಾಮದಲ್ಲಿ ಶೀಘ್ರವೇ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾರ್ಯ ಆರಂಭವಾಗಲಿದ್ದು, ಸುಸಜ್ಜಿತ ಹಾಗೂ ಆಧುನಿಕ ಸಲಕರಣೆಗಳನ್ನು ಹೊಂದಿರುವ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬೀರಪ್ಪ ಬಂಡಿ ಮಾತನಾಡಿ, ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಯೋಜನೆ, ಅನುದಾನ ಬಿಡುಗಡೆಗೊಳಿಸಿದೆ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ಪೂಜಾರ, ಉಪಾಧ್ಯಕ್ಷ ಅಂದಪ್ಪ ಉಮಚಗಿ, ಸದಸ್ಯ ಶೇಖರಪ್ಪ ಅಗಸಿಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪಗೌಡ ಪೊಲೀಸಪಾಟೀಲ, ಉಪಾಧ್ಯಕ್ಷೆ ಶಿವಶಾಂತವ್ವ ಹಂಚಿನಾಳ, ಡಾ. ಹಂಚಿನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ. ಚನ್ನಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸತೀಶ ಬಸರಿಗಿಡದ, ಡಾ. ಎಸ್.ಎಸ್. ನೀಲಗುಂದ, ತಾಲ್ಲೂಕು ಪಂಚಾಯಿತಿ ಸದಸ್ಯ ಹುಯಿಲಗೋಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರಿಗೌಡರ, ವಿ.ಆರ್. ಮಾಳಗೊಂಡ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.