ADVERTISEMENT

ಬರ: ಜಾನುವಾರು ಕಸಾಯಿಖಾನೆಗೆ

ಪ್ರಜಾವಾಣಿ ವಿಶೇಷ
Published 15 ಡಿಸೆಂಬರ್ 2012, 8:16 IST
Last Updated 15 ಡಿಸೆಂಬರ್ 2012, 8:16 IST

ಗಜೇಂದ್ರಗಡ: ಮಳೆ ಸಮರ್ಪಕವಾಗಿ ಆಗದೇ ಇರುವುದರಿಂದ ಈ ಭಾಗದ ಎರಡು ಪ್ರದೇಶಗಳಲ್ಲಿ ವಿಭಿನ್ನ ಪರಿಸ್ಥಿತಿ ತಲೆದೋರಿದೆ. ಇದರ ಮುಂದುವರೆದ ಭಾಗವಾಗಿಯೇ ಸದ್ಯ ಎರಡು ಪ್ರದೇಶಗಳಲ್ಲಿ ಹೊಟ್ಟು-ಮೇವಿಗೆ ತತ್ವಾರ ಉಂಟಾಗಿದೆ. ಪರಿಣಾಮ ಜಾನುವಾರುಗಳು ಕಸಾಯಿ ಖಾನೆ ಸೇರುತ್ತಿವೆ.

ಒಟ್ಟು 1,10,000 ಹೆಕ್ಟೇರ್ ಕೃಷಿ ಸಾಗುವಳಿ ಕ್ಷೇತ್ರದಲ್ಲಿ 80,000 ಹೆಕ್ಟೇರ್ ಎರಿ (ಕಪ್ಪು ಮಣ್ಣು) ಪ್ರದೇಶ ಸಾಗುವಳಿ ಕ್ಷೇತ್ರವಿದೆ. 30,000 ಹೆಕ್ಟೇರ್ ಮಸಾರಿ (ಕೆಂಪು ಮಿಶ್ರಿತ ಜವಗು) ಪ್ರದೇಶವಿದೆ. ಕಳೆದ ಎರಡು ವರ್ಷಗಳಿಂದ ವಾಡಿಕೆ ಪ್ರಮಾಣದಲ್ಲಿ ಮಳೆ ಸುರಿಯದಿರುವುದರಿಂದ ಹೊಟ್ಟು-ಮೇವಿನ ಅಭಾವ ತೀವ್ರಗೊಂಡಿದೆ. ಸದ್ಯ ಮಸಾರಿ ಪ್ರದೇಶದಲ್ಲಿ ಮಾತ್ರ ಹಸಿರು ಕಾಣ ಸಿಗುತ್ತದೆ ಯಾದರೂ ಜಾನುವಾರುಗಳ ಹಸಿವಿನ ದಾಹ ತೀರಿಸುವ ಮಟ್ಟದಲ್ಲಿ ಇಲ್ಲದ್ದರಿಂದ ಜಾನುವಾರು ಗಳನ್ನು ಸಾಕಿದ ತಪ್ಪಿಗಾಗಿ ರೈತರು ಕೈಕೈಹಿಸುಕಿ ಕೊಳ್ಳುವಂತಾಗಿದೆ.

ಇಲ್ಲಿ ಕೃಷಿ ಮತ್ತು ಪಶು ಸಂಗೋಪನೆ ಒಂದನ್ನೊಂದು ಅವಲಂಬಿಸಿವೆ. ಹೀಗಾಗಿಯೇ 72,480 ಜಾನುವಾರುಗಳು ಹಾಗೂ 1,35,000 ಕುರಿ ಮತ್ತು ಮೇಕೆಗಳಿವೆ. ವಿದ್ಯೆ ಬಾಳಿನ ಸಂಪತ್ತಾದರೆ, ಪಶು ರೈತನ ಸಂಪತ್ತಾಗಿದೆ. ಮಳೆ ಗಾಲ ಆರಂಭವಾಗುತ್ತಿದ್ದಂತೆ ಕೃಷಿ ಕಾರ್ಯಗಳಲ್ಲಿ ತೊಡಗುತ್ತಾನೆ. ರೈತನ ಕೃಷಿ ಕಾರ್ಯಗಳಲ್ಲಿ ಜಾನುವಾರುಗಳು ಬಹುಮುಖ್ಯ ಪಾತ್ರ ವಹಿ ಸುತ್ತವೆ. ಹೀಗಾಗಿ ಜಾನುವಾರುಗಳ ಸಂರಕ್ಷಣೆಯೂ ಸಹ ಅಷ್ಟೇ ಮುಖ್ಯ. ಆದರೆ, ಕಳೆದ ಎರಡು ವರ್ಷಗಳಿಂದ ತಾಲ್ಲೂಕಿನಾದ್ಯಂತ ಹೊಟ್ಟು- ಮೇವಿನ ಉತ್ಪಾದನೆ ಪ್ರಮಾಣ ಕ್ಷೀಣಿಸಿ ಹಿನ್ನೆಲೆಯಲ್ಲಿ ಮೇವಿನ ಸಮಸ್ಯೆ ಉಲ್ಭಣಗೊಂಡಿದ್ದು, ಜಾನು ವಾರುಗಳ ನಿರ್ವಹಣೆ ಅನ್ನದಾತನಿಗೆ ಕಷ್ಟಸಾಧ್ಯವಾಗಿದೆ. ಹೀಗಾಗಿ ಭಾರವಾದ ಮನಸ್ಸಿನಿಂದಲೇ ಅನಿವಾರ್ಯವಾಗಿ ಕಸಾಯಿಖಾನೆ ಸೇರುತ್ತಿವೆ ಎಂದು ರೈತರಾದ ಹನುಮಪ್ಪ ಮಾರಳ್ಳಿ, ಯಂಕಪ್ಪ ಕರಡಿಗುಡ್ಡ ಅಳಲು.

ಮೇವು ಉತ್ಪಾದನೆ ಕ್ಷೀಣ: ಸದ್ಯ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ತಿಂಗಳು 2,25,765 ಟನ್‌ಗಳು ಮೇವು ಬೇಕು. ಆದರೆ, ಮಳೆಯ ಅಭಾವದಿಂದಾಗಿ ಕೇವಲ 1,25,567 ಟನ್ ಮೇವು ಉತ್ಪಾದನೆಯಾಗಿದೆ. ಹೀಗಾಗಿ ಬೇಸಿಗೆಯ ಕಾಲದಲ್ಲಿ ಮೇವಿನ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ ಎಂಬ ಆತಂ ದಲ್ಲಿರುವ ಜಾನುವಾರುಗಳನ್ನು ಹೊಂದಿರುವ ರೈತರು 60,000 ಬೆಲೆ ಬಾಳುವ ಎತ್ತುಗಳನ್ನು 15 ರಿಂದ 20 ಸಾವಿರ ದರಕ್ಕೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. 

ಪ್ರಸ್ತಾವನೆ ಸಲ್ಲಿಸಲಾಗಿದೆ: ರೋಣ ತಾಲ್ಲೂಕಿನಲ್ಲಿ ನಿರಂತರ ಎರಡು ವರ್ಷಗಳಿಂದ ತಲೆದೋರಿರುವ ಭೀಕರ ಬರದಿಂದಾಗಿ ಜಾನುವಾರುಗಳಿಗೆ ಅಗತ್ಯ ವಿರುವ ಹೊಟ್ಟು-ಮೇವಿನ ಕೊರತೆ ಉಂಟಾಗಿದೆ. ಈ ಸಮಸ್ಯೆ ನಿವಾರಣೆಗೆ ಮೇವು ಬ್ಯಾಂಕ್ ಅವಶ್ಯ. ತಾಲ್ಲೂಕಿನ ಜಾನುವಾರುಗಳಿಗೆ ಅವಶ್ಯವಿರುವ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸುವ ಉದ್ದೇಶದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಮೇವು ಬ್ಯಾಂಕ್ ತೆರೆಯುವಂತೆ ಯಾವುದೇ ರೀತಿಯ ಆದೇಶ ಬಂದಿಲ್ಲ. ಸರ್ಕಾರದ ಆದೇಶದ ಮೇರೆಗೆ ಮೇವು ಬ್ಯಾಂಕ್ ತೆರೆಯಲಾಗುವುದು ಎಂದು ಪಶು ಸಂಗೋಪನಾ ಇಲಾಖೆಯ ನಿರ್ದೇಶಕ ರಮೇಶ ದೊಡ್ಡಮನಿ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.