ADVERTISEMENT

ಬಸವನಕೊಪ್ಪದ ಬಸವಣ್ಣನ ಜಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:57 IST
Last Updated 20 ಮೇ 2018, 13:57 IST
ಲಕ್ಷ್ಮೇಶ್ವರ ಸಮೀಪದ ಬಸವನಕೊಪ್ಪ ಗ್ರಾಮದ ಬಸವಣ್ಣ ದೇವರು
ಲಕ್ಷ್ಮೇಶ್ವರ ಸಮೀಪದ ಬಸವನಕೊಪ್ಪ ಗ್ರಾಮದ ಬಸವಣ್ಣ ದೇವರು   

ಲಕ್ಷ್ಮೇಶ್ವರ ಸಮೀಪದ ಬಸನಕೊಪ್ಪ ಗ್ರಾಮದ ಆದಿದೇವ ಬಸವಣ್ಣನ ಜಾತ್ರಾ ಮಹೋತ್ಸವ ಮೇ 21 ಮತ್ತು 22ರಂದು ಜರುಗಲಿದೆ.

ಅಂದಾಜು 2000 ಜನಸಂಖ್ಯೆ ಹೊಂದಿರುವ ಬಸವನ ಕೊಪ್ಪ ಗ್ರಾಮದ ದೇವರು ಬಸವಣ್ಣ. ಹೀಗಾಗಿ ಈ ಗ್ರಾಮಕ್ಕೆ ಬಸವನಕೊಪ್ಪ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ.

ಈ ಗ್ರಾಮದ ಇತಿಹಾಸ ರೋಚಕವಾಗಿದ್ದು ಕಲ್ಯಾಣ ಕ್ರಾಂತಿಯ ನಂತರ ಅನೇಕ ಶರಣರು ನಾಡಿನ ಬೇರೆ ಬೇರೆ ದಿಕ್ಕುಗಳಲ್ಲಿ ಚದುರಿ ಹೋದರು. ಹೀಗೆ ಚದುರಿ ಹೋದ ಶರಣರಲ್ಲಿ ಚೆನ್ನಬಸವಣ್ಣ ಬಸವನಕೊಪ್ಪಕ್ಕೆ ಬಂದು ಗ್ರಾಮದ ಚಾವಡಿಯಲ್ಲಿ ತಂಗಿದ್ದರು. ಗ್ರಾಮಕ್ಕೆ ಬಂದ ಚೆನ್ನಬಸವಣ್ಣವರೇ ಬಸವನಕೊಪ್ಪದ ಬಸವಣ್ಣನನ್ನು ಸ್ಥಾಪನೆ ಮಾಡಿದರು ಎಂದು ಅಲ್ಲಿನ ಹಿರಿಯರು ಹೇಳುತ್ತಾರೆ.

ADVERTISEMENT

ಹಿಂದೆ ಬಸವಣ್ಣನ ಜಾತ್ರೆ ತಿಂಗಳುಗಟ್ಟಲೇ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ಜಾತ್ರೆಗೆ ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಸಾವಿರಾರು ಜನರು ಬರುತ್ತಿದ್ದರು. ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ಭರದಿಂದ ನಡೆಯುತ್ತಿದ್ದವು.

ಗ್ರಾಮದ ಪೂರ್ವ ದಿಕ್ಕಿಗೆ ವಿಶಾಲವಾದ ಕೆರೆ ಇದ್ದು ಕೆರೆಯ ಪಶ್ಚಿಮ ದಂಡೆಯ ಮೇಲೆ ಬಸವಣ್ಣನ ಗುಡಿ ಇದ್ದು ಬಸವಣ್ಣ ಮೂರ್ತಿಯು ಪೂರ್ವಾಭಿಮುಖವಾಗಿ ಮುಂಗಾಲು ಮಡಚಿ ಕುಳಿತ ಭಂಗಿಯಲ್ಲಿದೆ. ನಿತ್ಯ ಪೂಜೆ, ಅಭಿಷೇಕ ನೆರವೇರಿಸಲು ಪೂಜಾರಿಗಳಿದ್ದಾರೆ. ಶ್ರಾವಣ ಮಾಸದಲ್ಲಿ ಇಡೀ ತಿಂಗಳು ಬೇರೆ ಬೇರೆ ಊರುಗಳಿಂದ ಭಕ್ತರು ತಂಡೋಪತಂಡವಾಗಿ ಬಂದು ಪೂಜೆ ಸಲ್ಲಿಸುತ್ತಾರೆ. ನಿರಂತರ ಪೂಜೆಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಹಿಂದಿನವರು ದೇವಸ್ಥಾನಕ್ಕೆ 24 ಎಕರೆ ಜಮೀನು ಮೀಸಲಿಟ್ಟಿದ್ದಾರೆ.

ಚೆನ್ನಬಸವಣ್ಣ aವರಿಂದ ಸ್ಥಾಪನೆ ಗೊಂಡ ಈ ದೇವಸ್ಥಾನ ಆಗಾಗ ಜೀರ್ಣೋದ್ಧಾರಗೊಂಡಿದೆ. ಈಗಿರುವ ಗುಡಿ ಅಂದಾಜು 180 ವರ್ಷಗಳ ಹಿಂದೆ ಕಟ್ಟಲಾಗಿದ್ದು ಎಂದು ಹೇಳುತ್ತಾರೆ. ‘ಬಸವನಕೊಪ್ಪದ ಬಸವಣ್ಣ ನಮ್ಮ ಮನಿ ದೇವರು. ವರ್ಷಾ ನಾವು ಜಾತ್ರಿಗೆ ತಪ್ಪದೆ ಹೋಗುತ್ತೇವೆ’ ಎಂದು ಶಿಗ್ಲಿ ಗ್ರಾಮದ ಭಕ್ತ ವೀರಣ್ಣ ಪವಾಡದ ಹೇಳುತ್ತಾರೆ.

ಬಸವಣ್ಣ ದೇವರಲ್ಲದೆ ಈ ಊರಿನಲ್ಲಿ ಪುರಾತನ ಕಾಲದಿಂದಲೂ ಪಂಚ ಲಿಂಗಗಳು ಇದ್ದವು. ಅವುಗಳಲ್ಲಿ ರಾಮಲಿಂಗ ಪ್ರಮುಖ ದೇವರಾಗಿತ್ತು. ಇಂದಿಗೂ ಆ ಬೃಹತ್ ಲಿಂಗ ಊರ ಮಧ್ಯದಲ್ಲಿದೆ. ಒಮ್ಮೆ ಗ್ರಾಮದಲ್ಲಿ ಭೀಕರ ಹಾಗೂ ದೀರ್ಘವಾದ ಕದನ ನಡೆಯಿತು ಎಂದು ಹಿರಿಯರು ಸ್ಮರಿಸಿ ಕೊಳ್ಳುತ್ತಾರೆ. ಹಿಂದೂ ಸಮಾಜದ ಒಳಪಂಗಡದವರಲ್ಲಿ ರಾಮಲಿಂಗ ದೇವರ ಪೂಜಾ ವಿಷಯದಲ್ಲಿ ವಿವಾದವಾಗಿತ್ತಂತೆ. ಆ ವಿವಾದದಲ್ಲಿ ಒಂದು ಪಂಗಡದವರು ಬಹಳ ಯಾತನೆ ಅನುಭವಿಸಿ ಜೀವನ ಅಸಹನೀಯವಾಗಿ ಊರಲ್ಲಿ ಬದುಕಲಾಗದೇ ಗ್ರಾಮ ತೊರೆದು ಹೋದರು. ಹಾಗೆ ಹೋದವರಲ್ಲಿ ವ್ಯಾಪಾರಸ್ಥರೇ ಜಾಸ್ತಿ. ಅಂದಿನಿಂದ ಬಸನಕೊಪ್ಪ ಅವನತಿ ಕಂಡಿತು. ಅವರು ಹೋಗುವಾಗ ಈ ಊರಿಗೆ ತಿರುಗಿ ಬರುವುದಿಲ್ಲ. ಬಂದರೂ ಈ ಊರಿನ ನೀರು ಕುಡಿಯುವುದಿಲ್ಲ ಎಂದು ಶಪಥ ಮಾಡಿದರಂತೆ. ಹೀಗಾಗಿ ಈಗಲೂ ಅವರ ವಂಶಜರು ಬಸವಣ್ಣನ ದರ್ಶನಕ್ಕೆ ಬಂದರೂ ಇಲ್ಲಿ ನೀರು ಕುಡಿಯುವುದಿಲ್ಲವಂತೆ. ಬಸವಣ್ಣನ ರಥೋತ್ಸವ ಮೇ 21ರಂದು ಜರುಗಲಿದ್ದು 22ರಂದು ಕಡುಬಿನ ಕಾಳಗ ನಡೆಯುವುದು.

ನಾಗರಾಜ ಎಸ್‌. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.