ADVERTISEMENT

ಬಾಕಿ ಹಣ ಪಾವತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 11:27 IST
Last Updated 17 ಜೂನ್ 2018, 11:27 IST

ಗಜೇಂದ್ರಗಡ: ಪಟ್ಟಣದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿದ ಹಣ ಪಾವತಿಸುವಂತೆ ಪುರಸಭೆ ಆವರಣದಲ್ಲಿ ಮಂಗಳವಾರದಿಂದ ಆರಂಭವಾಗಿರುವ ಮಾಲೀಕರ, ಚಾಲಕರ ಅಹೋರಾತ್ರಿ ಧರಣಿ 5ನೇ ದಿನವಾದ ಶನಿವಾರವೂ ಮುಂದುವರಿಯಿತು.

‘ಬೇಸಿಗೆಯಲ್ಲಿ ನೀರಿನ ಜನರ ನೀರಿನ ಬವಣೆ ನೀಗಿಸಿದ ನಮಗೆ ನಮ್ಮ 9 ತಿಂಗಳ ಬಾಕಿ ಹಣ ನೀಡುವಂತೆ ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ನೀರಿನ ಮಾಲೀಕರಿಗೆ, ಡೀಸೆಲ್‌ಗೆ ಸಾಲ ಮಾಡಿ ನೀರು ಪೂರೈಸಿದ್ದೇವೆ. ಈಗ ಸಾಲಗಾರರು ಸಾಲ ತೀರಿಸುವಂತೆ ದುಂಬಾಲು ಬಿದ್ದಿದ್ದಾರೆ. ನಮ್ಮ ಗೋಳು ಯಾರೂ ಕೇಳುತ್ತಿಲ್ಲ’ ಎಂದು ಧರಣಾ ನಿರತ ಶರಣಪ್ಪ ಚಳಗೇರಿ ಹೇಳಿದರು.

‘ಒಟ್ಟು 10 ಟ್ಯಾಂಕರ್ ಮಾಲೀಕರು ಪಟ್ಟಣದಲ್ಲಿ ನೀರು ಪೂರೈಸಿದ್ದು, ಇಲ್ಲಿಯವರೆಗೆ ಸುಮಾರು ₹50 ಲಕ್ಷ ಬಾಕಿ ಇದೆ. ಬಾಕಿ ಇರುವ ಪೂರ್ತಿ ಹಣ ಪಾವತಿಸುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ’ ಎಂದು ಧರಣಾ ನಿರತರು ಹೇಳಿದರು.

ADVERTISEMENT

ಧರಣಿಯಲ್ಲಿ ಬಸವರಾಜ ಬಂಕದ, ಕಲ್ಲಪ್ಪ ರಾಮಜಿ, ಎಸ್.ಎಸ್.ಪಾಟೀಲ, ವೆಂಕಟೇಶ ಬಂಕದ, ರಾಜಶೇಖರ ಹಿರೇಮಠ, ಭೀಮಣ್ಣ ತಳವಾರ, ಹುಸೇನಸಾಬ್‌ ನಿಶಾನದಾರ, ಶಿವಪುತ್ರಪ್ಪ ಬಳೂಟಗಿ, ಲಕ್ಷ್ಮಣ ಬಂಕದ, ಮುತ್ತು ತೊಂಡಿಹಾಳ, ಹನಮಂತಪ್ಪ ಚಿಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.