ADVERTISEMENT

ಬಾರದ ಮಳೆ, ಪಾಳಾದ ಭೂಮಿ, ಬಸವಳಿದ ರೈತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 7:40 IST
Last Updated 20 ಜುಲೈ 2012, 7:40 IST

ಗಜೇಂದ್ರಗಡ: ಆಷಾಡ ಮಾಸ ಮುಗಿದರೂ ಮಳೆ ಧರೆಗುರುಳಿಲ್ಲ.  ನಿರೀಕ್ಷೆಯಲ್ಲೆ ಬಸವಳಿದ ಅನ್ನದಾತ  ಕೊನೆ ಪ್ರಯತ್ನವಾಗಿ ದೇವರ ಮೊರೆ ಹೋಗಿದೆ. ಎಲ್ಲ ಕಡೆ ವಿಶೇಷ ಪೂಜೆ-ಹೋಮ ಹವನ ಬಿರುಸಿನಿಂದ ನಡೆಯುತ್ತಿವೆ.  ವರುಣನ ಓಲೈಕೆಗಾಗಿ ಕತ್ತೆ-ಕಪ್ಪೆಗಳ ಮದುವೆಗಳು ಜರುಗಿವೆ. ಗುರ್ಜಿಯ ಆಟಗಳು ಮುಗಿದಿವೆ. ಆದರೆ, ವರುಣ ಮಾತ್ರ ತಾಲ್ಲೂಕಿನ ನೇಗಿಲ ಯೋಗಿಯ ಮೇಲೆ ಕೃಪೆ ತೋರದಿರುವುದು ಚಿಂತೆ ಹೆಚ್ಚಿಸಿದೆ.

ಆಗಸದತ್ತ ನೆಟ್ಟ ನೋಟ ಬೀರುತ್ತಿದ್ದ ರೈತರ ಕಂಗಳಲ್ಲಿ ಭರವಸೆಯ ಆಶಾಕಿರಣ ಬತ್ತಿದೆ. ಎತ್ತ ನೋಡಿದರೂ ಬೀಳು ಬಿದ್ದರುವ ಹೊಲಗಳು. ಕಣ್ಣಿಗೆ ಕಾಣುವಷ್ಟು ದೂರವೂ ಬರಿ ಒಣ ಭೂಮಿ ದರ್ಶನ. ಮಧ್ಯಾಹ್ನದ ವೇಳೆಗೆ ಇವತ್ತು ಮಳೆ ಬರುತ್ತದೆಯೇನೋ ಎಂಬಂತೆ ಭಾಸ ವಾಗುವ ಮೋಡಗಳು ಸಂಜೆ ವೇಳೆಗೆ ಹಾಗೆ ಕರಗಿ ಹೋಗುವುದನ್ನು ಕಾಣುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದು ತಾಲ್ಲೂಕಿನಾದ್ಯಂತ ಕಂಡು ಬರುವ ಚಿತ್ರಣ.

ಜೂನ್‌ನಲ್ಲಿ ಹೆಸರು ಬಿತ್ತನೆಗೆ ಸಕಾಲ. ಮುಂಗಾರು ಆರಂಭದ ಬಿತ್ತನೆ ಇಳುವರಿ ಅಧಿಕ ಎಂಬ ನಂಬಿಕೆಯಲ್ಲಿ   ತಾಲ್ಲೂಕಿನ ಹೊಸಳ್ಳಿ, ಸೂಡಿ, ದಿಂಡೂರ, ಕಾಲಕಾಲೇಶ್ವರ, ನಿಡಗುಂದಿ, ಮಾರನಬಸರಿ, ಜಕ್ಕಲಿ, ಕೊಡಗಾನೂರ, ಬೆಳವಣಿಕಿ, ಮಲ್ಲಾಪುರ, ಹೊಳೆ ಆಲೂರ, ಮುಶಿಗೇರಿ, ನೆಲ್ಲೂರ, ಪ್ಯಾಟಿ, ಹಿರೇ ಅಳಗುಂಡಿ, ಚಿಕ್ಕ ಅಳಗುಂಡಿ, ನರೇಗಲ್, ಅಬ್ಬಿಗೇರಿ, ಹಾಲ ಕೇರಿ, ನಿಡಗುಂದಿಕೊಪ್ಪ ಮುಂತಾದ ಗ್ರಾಮಗಳ ರೈತರು ಸಕಲ ಸಿದ್ದತೆ ಮಾಡಿಕೊಂಡಿದ್ದರು.

ಕಳೆದ ವರ್ಷದ ಭೀಕರ ಬರದಿಂದ ತತ್ತರಿಸಿ ಹೋಗಿರುವ ತಾಲ್ಲೂಕಿನ ನೇಗಿಲಯೋಗಿ ಪ್ರಸಕ್ತ ವರ್ಷ ತಡವಾದರೂ ಮುಂಗಾರು ಉತ್ತಮ ರೀತಿಯಲ್ಲಿ ಸುರಿದು ಸಂಕಷ್ಟಗಳ ನಿವಾರಣೆಗೆ ನೆರವಾಗುತ್ತವೆ ಎಂಬ ಬಲವಾದ ನಂಬಿಕೆಯಲ್ಲಿದ್ದ ಅನ್ನದಾತ ಚಿನ್ನಾಭರಣ ಅಡ ಇಟ್ಟು, ಸಾಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದ್ದರು. ಆದರೆ, ಮಳೆ ಬಂದ ಕೂಡಲೆ ಬಿತ್ತನೆ ಮಾಡುವ ರೈತರ ಕನಸು ನನಸಾಗಿಲ್ಲ. ಈ ಭಾಗದಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ಮಳೆಯೂ ಇಲ್ಲ. ವಾಡಿಕೆಯಂತೆ ಕನಿಷ್ಠ ಪ್ರಮಾಣ ಮಳೆಯೂ ಸುರಿದಿಲ್ಲ. ಆದರೆ, ಮುಂಗಾರು ಆರಂಭಗೊಂಡು ಎರಡು ತಿಂಗಳು ಗತಿಸಿದರೂ ಕೇವಲ 29.6 ಮೀಲಿ ಮೀಟರ್ ಮಳೆ ಭೂತಾಯಿಯನ್ನು ಸ್ಪರ್ಶಿಸಿದೆ. ಇದರಿಂದ ನೇಗಿಲಯೋಗಿಯ ಜಂಘಾಬಲವೇ ಕುಸಿದಿದೆ.

ಮಳೆ ಬೀಳದ ಕಾರಣ ತಾಲ್ಲೂಕಿನ ಬಹುತೇಕ ರೈತ ಕುಟುಂಬಗಳು ಸಾಲ ಮಾಡಿ ಖರೀದಿಸಿದ್ದ ಬಿತ್ತನೆ ಬೀಜ ಗೊಬ್ಬರವನ್ನು ಸಿಕ್ಕಷ್ಟು ಬೆಲೆಗೆ ಮಾರಿ ಗುಳೆ ಹೊರಡಲು ಸಿದ್ದರಾಗುತ್ತಿದ್ದಾರೆ. ತಾಲ್ಲೂಕಿನ ರೈತ ಸಮೂಹದ ಹೀನಾಯ ದೃಷ್ಟಾಂತಗಳನ್ನು ತೀರಾ ಹತ್ತಿರದಿಂದ ಕಂಡಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಅವರ ನೆರವಿಗೆ ಆಧಾರವಾಗುವ ನಿಟ್ಟಿನಲ್ಲಿ ಕನಿಷ್ಠ ಕಾರ್ಯಕ್ರಮ  ಜಾರಿಗೊಳಿಸದಿರುವುದು ಪರಿಸ್ಥಿತಿ ಬಿಗಡಾಯಿಸು ತ್ತಿರುವುದಕ್ಕೆ   ಕಾರಣ ಎನ್ನಲಾಗಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಎಂದೇ ಬಣ್ಣಿಸಲಾಗುವ `ಹೆಸರು~ ಬೆಳೆಯ ಇತಿಹಾಸ ನೋಡಿದರೆ, ಇದುವರೆಗೂ ಜೂನ್‌ನಲ್ಲಿ ಬಿತ್ತನೆ ನಡೆಸಿದವರಿಗೆ ಮಾತ್ರ ಎಂಥ ದುರ್ಬರ ಸ್ಥಿತಿ ಯಲ್ಲೂ ಸ್ವಲ್ಪ ಫಸಲು ಕೈ ಸೇರಿದೆ. ಜುಲೈನಲ್ಲಿನ ಬಿತ್ತನೆ ಜೂಜಾಟವಿದ್ದಂತೆ. ಹೆಸರು ಬೆಳೆ ಹೂವು, ಕಾಯಿ ಕಟ್ಟುವ ಹಂತದಲ್ಲಿ ಕೈ ಕೊಡುವ ಇಲ್ಲವೇ ಬೆಂಬಿಡದೇ ಸುರಿಯುವ ಮಳೆ, ಬೆಳೆಗೆ ತಗಲುವ ರೋಗ, ಕೀಟಬಾಧೆಯಿಂದ ನಷ್ಟ ಅನುಭವಿಸಿ ರುವುದೇ ಹೆಚ್ಚು ಎನ್ನುತ್ತಾರೆ ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ.

ಪ್ರಸಕ್ತ ವರ್ಷದ ಮುಂಗಾರು ಸಕಾಲಕ್ಕೆ ಸುರಿಯುತ್ತದೆ ಎಂಬ ಭರವಸೆಯಲ್ಲಿ ತಾಲ್ಲೂಕು ಕೃಷಿ ಇಲಾಖೆ ಇದಕ್ಕೆ ಪೂರಕ ಸಿದ್ದತೆ ನಡೆಸಿತ್ತು. 1,10,500 ಹೆಕ್ಟೇರ್ ತಾಲ್ಲೂಕಿನ ಒಟ್ಟು ಕೃಷಿ ಕ್ಷೇತ್ರದಲ್ಲಿ ಪ್ರಸಕ್ತ ವರ್ಷ 70,700 ಹೆಕ್ಟೇರ್ ಮುಂಗಾರು ಬಿತ್ತನೆಯ ಗುರಿ ಹೊಂದಿತ್ತು. ಇದಕ್ಕಾರಿ ತಾಲ್ಲೂಕಿನಲ್ಲಿ 3 ರೈತ ಸಂಪರ್ಕ ಕೇಂದ್ರ ಹಾಗೂ 11 ಭೂಚೇತನ ಕೇಂದ್ರಗಳನ್ನು ತೆರೆದು ಒಟ್ಟು 15,874 ಕ್ವಿಂಟಲ್ ಬಿತ್ತನೆ  ಬೀಜ ಸಂಗ್ರಹಿಸಲಾಗಿತ್ತು.70,700 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದರೂ ಕೇವಲ 2,404 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಈ ಬೆಳೆ ಸಹ ಮಳೆ ಯಿಲ್ಲದೆ ಕಮರಿ ಹೋಗಿದೆ.  ಮೇವು ಸಿಗದಿರುವಂತಹ ದುಸ್ಥಿತಿ ನಿರ್ಮಾಣ ವಾಗಿದೆ. ವರುಣ ಕೃಪೆ ತೂರದಿದ್ದರೂ, ಸರ್ಕಾರವಾದರೂ ನೆರವಿಗೆ ಬರಬಹುದು ಎಂಬ ನಿರೀಕ್ಷೆ ರೈತರಲ್ಲಿ ಇದೆ. `ಆದ್ರೆ ಆರಿದ್ರ, ಇಲ್ಲದಿದ್ದರೆ ದರಿದ್ರ~ ಎಂಬಂತಾಗಿದೆ ಎಂದು ಸೂಡಿ ಗ್ರಾಮದ ರೈತ ಶರಣಪ್ಪ ತಳವಾರ ಆತಂಕ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.