ADVERTISEMENT

ಭೀಷ್ಮಕೆರೆಗೆ ತುಂಗಭದ್ರಾ ನದಿ ನೀರು; ಮೂರು ವಾರದಲ್ಲಿ ತುಂಬುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 9:20 IST
Last Updated 7 ಜುಲೈ 2017, 9:20 IST
ಗದುಗಿನ ಹೃದಯ ಭಾಗದಲ್ಲಿರುವ ಭೀಷ್ಮಕೆರೆಗೆ ಹರಿದು ಬರುತ್ತಿರುವ ತುಂಗಭದ್ರಾ ನದಿ ನೀರು
ಗದುಗಿನ ಹೃದಯ ಭಾಗದಲ್ಲಿರುವ ಭೀಷ್ಮಕೆರೆಗೆ ಹರಿದು ಬರುತ್ತಿರುವ ತುಂಗಭದ್ರಾ ನದಿ ನೀರು   

ಗದಗ: ನಗರದ  ಹೃದಯ ಭಾಗದಲ್ಲಿ ಇರುವ ಭೀಷ್ಮಕೆರೆಗೆ ಮಂಗಳವಾರದಿಂದ ಮತ್ತೆ ತುಂಗಭದ್ರಾ ನದಿ ನೀರು ಹರಿಸಲಾಗುತ್ತಿದೆ. ಸಿಂಗಟಾಲೂರ ಏತ ನೀರಾವರಿ ಯೋಜನೆಯ ಎಡಭಾಗದ ಮುಖ್ಯ ಕಾಲುವೆ ಮೂಲಕ ಭೀಷ್ಮಕೆರೆಗೆ 2016ರ ಅಕ್ಟೋಬರ್‌ನಲ್ಲಿ ತುಂಗಭದ್ರಾ ನದಿ ಯಿಂದ ನೀರು ಹರಿಸಲಾಗಿತ್ತು.

102 ಎಕರೆ ವಿಸ್ತೀರ್ಣದ ಈ ಕೆರೆ ಸಂಪೂರ್ಣ ಭರ್ತಿಯಾಗಲು ಮೂರು ವಾರ ಹಿಡಿದಿತ್ತು. ಕೆರೆಯ ಹೂಳು ತೆಗೆದು, ನೀರು ತುಂಬಿಸಿದ್ದರ ಫಲವಾಗಿ ಬೇಸಿಗೆಯಲ್ಲಿ ಕೆರೆಯ ಕೆಳಭಾಗದಲ್ಲಿರುವ ಅಬ್ಬಿಗೇರಿ ಕಂಪೌಂಡ್‌ ಪ್ರದೇಶದಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಹೆಚ್ಚಳವಾಗಿತ್ತು.

ನಗರ ಸಭೆ ವತಿಯಿಂದ ಇಲ್ಲಿ ಕೊರೆಯ ಲಾದ ಐದೂ ಕೊಳವೆಬಾವಿಗಳಲ್ಲಿ ಜೀವ ಜಲ ಉಕ್ಕಿ ಹರಿದಿತ್ತು. ಇದೀಗ ಮತ್ತೆ ಕರೆಗೆ ಪ್ರತಿನಿತ್ಯ 0.6 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಕೆರೆ ಸಂಪೂರ್ಣ ಭರ್ತಿಯಾಗಲು ಮೂರು ವಾರಗಳು ಬೇಕಾಗಲಿವೆ. ಕೆರೆ ಪೂರ್ಣ ಭರ್ತಿಯಾದ ನಂತರ ಬೋಟಿಂಗ್ ಆರಂಭವಾಗುವ ನಿರೀಕ್ಷೆಯೂ ಇದೆ.

ADVERTISEMENT

ಕರೆಗೆ ನೀರು ಹರಿಸಲು ನಗರದ ಮೈಲಾರಪ್ಪ ಮೆಣಸಗಿ ಕಾಲೇಜು ಬಳಿಯ ಜಾಕ್‌ವೆಲ್‌ನಿಂದ 7 ಕಿ.ಮೀ. ಉದ್ದದ ಪೈಪ್‌ಲೈನ್‌ ಅಳವಡಿಸಲಾಗಿದೆ. ಕೆರೆಗೆ ಬಂದು ತಲುಪಿದ ನೀರನ್ನು ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ, ಮೇಘಾ ಮುದಗಲ್ ಪೂಜೆ ಸಲ್ಲಿಸಿ ಬರಮಾಡಿಕೊಂಡರು. 

ಬಿ.ಬಿ.ಅಸೂಟಿ, ಶಫಿ ಕುದರಿ, ಬರ್ಕತ್‍ ಅಲಿ ಮುಲ್ಲಾ, ಎಂ.ಸಿ. ಶೇಖ, ಚಾಂದಸಾಬ್ ಕೊಟ್ಟೂರ, ಅನಿಲ ಗರಗ, ನಗರ ಸಭೆ ಎಇಇ ಎಲ್.ಜಿ. ಪತ್ತಾರ, ಕಿರಿಯ ಎಂಜಿನಿಯರ್ ಎಚ್.ಎ. ಬಂಡಿ ವಡ್ಡರ, ಪ್ರಭು ಬುರಬುರೆ, ಅಶೋಕ ಮಂದಾಲಿ, ಉಮರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.