ADVERTISEMENT

ಮತದಾನ ಜಾಗೃತಿ; ಟಾಂಗಾ ಏರಿದ ಡಿಸಿ

ಜಿಲ್ಲೆಯ ವಿವಿಧೆಡೆ ಮತದಾರರಲ್ಲಿ ಅರಿವು ಮೂಡಿಸುವ ಪ್ರಯತ್ನ: ಜಾಥಾ, ರ‍್ಯಾಲಿಗಳ ಆಯೋಜನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 10:41 IST
Last Updated 25 ಏಪ್ರಿಲ್ 2018, 10:41 IST
ಮತದಾರರ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಸ್ವ ಸಹಾಯ ಸಂಘದ ಸದಸ್ಯರು ಜಿಲ್ಲಾಡಳಿತ ಭವನದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿದರು
ಮತದಾರರ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಸ್ವ ಸಹಾಯ ಸಂಘದ ಸದಸ್ಯರು ಜಿಲ್ಲಾಡಳಿತ ಭವನದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿದರು   

ಗದಗ: ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಟಾಂಗಾ ರ‍್ಯಾಲಿ ಮೂಲಕ ಮಮತದಾನ ಜಾಗೃತಿ ಮೂಡಿಸಲಾಯಿತು. ಮದಾನದ ಮಹತ್ವದ ಕುರಿತ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಮನೋಜ್‌ ಜೈನ್‌, ಸ್ವೀಪ್‌ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಕೂಡ ಟಾಂಗಾ ಏರಿದರು.

ಒಟ್ಟು 35 ಟಾಂಗಾಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಮತದಾರರ ಜಾಗೃತಿ ಫಲಕಗಳನ್ನು ಹಿಡಿದು ಆಶಾ ಕಾರ್ಯಕರ್ತೆಯರು ಈ ಗಾಡಿಯಲ್ಲಿ ಕುಳಿತು ಘೋಷಣೆ ಕೂಗಿದರು. ಜಾಥಾ ನಗರದ ಹಾತಲಗೇರಿ ನಾಕಾದ ಸಾಯಿ ಮಂದಿರದ ಸಮೀಪದಿಂದ ಆರಂಭಗೊಂಡು, ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಚುನಾವಣಾ ಜ್ಯೋತಿ ತಂಡದ ಸದಸ್ಯರು 5 ಬೈಕ್‌ಗಳಲ್ಲಿ ಈ ಜಾಥಾ ಹಿಂಬಾಲಿಸಿದರು.

ಮತದಾನ ಜಾಗೃತಿ ಮೂಡಿಸಲು ಸಲಹೆ

ADVERTISEMENT

ಗದಗ: ‘ಪ್ರಜಾಪ್ರಭುತ್ವ ಬಲಪಡಿಸಲು ಚುನಾವಣೆಯಲ್ಲಿ ಅರ್ಹ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸುವಂತೆ ಮತ್ತು ಮನವೊಲಿಸುವಂತೆ, ಮತದಾರ ಮಿತ್ರರಾಗಿ ನೇಮಕಗೊಂಡವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ನಡೆದ ಮತದಾರ ಮಿತ್ರ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಜೀವಿನಿ ಯೋಜನೆಯಡಿ ಸ್ವ ಸಹಾಯ ಸಂಘಗಳ ಸದಸ್ಯರುಗಳು ಮತದಾರ ಮಿತ್ರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೇ 100ರಷ್ಟು ಮತದಾನವಾದ ಮತಗಟ್ಟೆಗಳ ಮತದಾರ ಮಿತ್ರರಿಗೆ ಬಹುಮಾನ ನೀಡಲಾಗುವುದು’ ಎಂದರು.

‘ಜಿಲ್ಲೆಯ 4600 ಸ್ವ–ಸಹಾಯ ಸಂಘಗಳಿಂದ ಪ್ರತಿ ಸಂಘದ ತಲಾ 2 ಸದಸ್ಯರನ್ನು ಮತದಾರ ಮಿತ್ರರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಹೇಳಿದರು.

ನೋಡಲ್ ಅಧಿಕಾರಿ ಟಿ ದಿನೇಶ , ಚುನಾವಣಾ ವೀಕ್ಷಕ ಸುಪ್ರೀತ್ ಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಇದ್ದರು. ಮತದಾರರ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಸ್ವ ಸಹಾಯ ಸಂಘದ ಸದಸ್ಯರು ಜಿಲ್ಲಾಡಳಿತ ಭವನದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.